New Corona Variant Florona : ಇಸ್ರೇಲ್ ನಲ್ಲಿ ಪತ್ತೆಯಾಗಿರುವ ವೈರಸ್, ಇದರ ಬಗ್ಗೆ ನಿಮಗೆಷ್ಟು ಗೊತ್ತು?
ಈ ವಾರದ ಆರಂಭದಲ್ಲಿ ಇಸ್ರೇಲ್ ನಲ್ಲಿ ಪತ್ತೆಯಾಗಿರುವ ವೈರಸ್
ಕೋವಿಡ್-19 ಮತ್ತು ಇನ್ ಫ್ಲುಯೆಂಜಾದ ಡಬಲ್ ಸೋಂಕು "ಫ್ಲೊರೋನಾ"
ಕರೋನಾ ಮತ್ತು ಫ್ಲೂ ಸೇರಿ ರೂಪುಗೊಂಡ ಹೆಸರು "ಫ್ಲೊರೋನಾ"
ಬೆಂಗಳೂರು (ಜ.1): ಕರೋನಾ, ಆಲ್ಫಾ, ಬೀಟಾ, ಗಾಮಾ, ಡೆಲ್ಟಾ, ಒಮಿಕ್ರಾನ್ ಹಾಗೂ ಡೆಲ್ಮಿಕ್ರೋನ್ ಬಳಿಕ ಮಾರಣಾಂತಿಕ ವೈರಸ್ ನ (Virus) ಮತ್ತೊಂದು ಆವೃತ್ತಿ ಇಸ್ರೇಲ್ ನಲ್ಲಿ (Israel) ಪತ್ತೆಯಾಗಿದೆ. ಕೋವಿಡ್-19 (Covid-19)ಹಾಗೂ ಇನ್ ಫ್ಲುಯೆಂಜಾದ (influenza) ಡಬಲ್ ಸೋಂಕು ಎನ್ನಲಾಗುವ ವೈರಸ್ ಗೆ "ಫ್ಲೊರೋನಾ" (Florona) ಎನ್ನುವ ಹೆಸರಿನಿಂದ ಗುರುತಿಸಲಾಗಿದೆ. ರಾಬಿನ್ ಮೆಡಿಕಲ್ ಸೆಂಟರ್ ನಲ್ಲಿ ಗರ್ಭಿಣಿಯೊಬ್ಬರಲ್ಲಿ ಮೊಟ್ಟಮೊದಲ ಫ್ಲೊರೋನಾ ಕೇಸ್ ಪತ್ತೆಯಾಗಿದೆ ಎಂದು ಇಸ್ರೇಲ್ ನ ಪತ್ರಿಕೆಗಳು ವರದಿ ಮಾಡಿವೆ. ಫ್ಲೂ (Flu)ಹಾಗೂ ಕರೋನಾ (Corona) ಸೇರಿ :"ಫ್ಲೊರೋನಾ" ವೈರಸ್ ರೂಪುಗೊಂಡಿದೆ ಎಂದು ಅರಬ್ ಪತ್ರಿಕೆಗಳು ವರದಿ ಮಾಡಿವೆ, ಮಗುವಿನ ಜನನ ಕಾರಣದಿಂದಾಗಿ ಯುವತಿ ಆಸ್ಪತ್ರೆಗೆ ತೆರಳಿದ್ದ ವೇಳೆ ಆಕೆಯಲ್ಲಿ ಈ ವೈರಸ್ ಪತ್ತೆಯಾಗಿದೆ ಎಂದಿದೆ.
ಕರೋನಾ ವೈರಸ್ ನ ರೂಪಾಂತರ ಒಮಿಕ್ರಾನ್ (Omicron) ಈಗಾಗಲೇ ವಿಶ್ವದೆಲ್ಲೆಡೆಯ ಹೊಸ ವರ್ಷದ ಸಂಭ್ರಮಗಳನ್ನು ಹಾಳು ಮಾಡಿದ್ದರೆ, ಹೊಸ ವರ್ಷದ ಕಟ್ಟ ಕಡೆಯ ದಿನ ಕರೋನಾದ ಮತ್ತೊಂದು ಹೊಸ ರೂಪಾಂತರ ಬೆಳಕಿಗೆ ಬಂದಿರುವುದು ಜನರನ್ನು ಆತಂಕಕ್ಕೀಡು ಮಾಡಿದೆ. ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಈವರೆಗೂ ಕೋವಿಡ್-19 ಲಸಿಕೆ ಪಡೆದುಕೊಂಡಿರಲಿಲ್ಲ ಎಂದೂ ಪತ್ರಿಕೆಗಳು ವರದಿ ಮಾಡಿವೆ. ನವೆಂಬರ್ ನಲ್ಲಿ ದಕ್ಷಿಣ ಆಫ್ರಿಕಾದಲ್ಲಿ ಮೊದಲ ಬಾರಿಗೆ ಪತ್ತೆಯಾದ ಒಮಿಕ್ರಾನ್ ವೈರಸ್ ನೊಂದಿಗೆ ಜಗತ್ತು ಹೋರಾಡುತ್ತಿರುವ ಹೊತ್ತಿಗಾಗಲೇ ಮತ್ತೊಂದು ವೈರಸ್ ಫ್ಲೊರೋನಾ ಜನ್ಮತಾಳಿದೆ. ಒಮಿಕ್ರಾನ್ ಈಗಾಗಲೇ ಕರೋನಾ ವೈರಸ್ ಗಳ ವಿವಿಧ ರೂಪಾಂತರಗಳ ಪೈಕಿ ಅತಿವೇಗವಾಗಿ ಸಾಂಕ್ರಾಮಿಕವಾಗುವ ವೈರಸ್ ಆಗಿದ್ದು, ಅಮೆರಿಕ ಹಾಗೂ ಇಂಗ್ಲೆಂಡ್ ಗಳಲ್ಲಿ ಡೆಲ್ಟಾ ವೈರಸ್ ಗಿಂತ ಅತ್ಯಂತ ವೇಗವಾಗಿ ಹಬ್ಬಿದೆ.
ಫ್ಲೋರೋನಾ, ಆದಾಗ್ಯೂ, ಕರೋನಾದ ತೀರಾ ಹೊಸ ರೂಪಾಂತರವಲ್ಲ. ಇದರ ಮುಖ್ಯ ಪರಿಣಾಮ ಏನೆಂದರೆ ಫ್ಲೂ ಮತ್ತು ಕರೋನಾ ಒಂದೇ ಸಮಯದಲ್ಲಿ ಸಂಭವಿಸುತ್ತದೆ ಎಂದು ನಂಬಲಾಗಿದೆ. ಕಳೆದ ಕೆಲವು ವಾರಗಳಲ್ಲಿ ಇಸ್ರೇಲ್ ನಲ್ಲಿ ಇನ್ ಫ್ಲುಯೆಂಜಾ ಪ್ರಕರಣಗಲ್ಲಿ ಸಾಕಷ್ಟು ಉಲ್ಭಣ ಕಂಡಿದ್ದರಿಂದ ಫ್ಲರೋನಾವನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ಇಸ್ರೇಲ್ ನ ವೈದ್ಯರು ತಿಳಿಸಿದ್ದಾರೆ. "ಎರಡೂ ವೈರಸ್ ಗಳು ಏಕಕಾಲದಲ್ಲಿ ಮಾನವನ ದೇಹವನ್ನು ಹೊಕ್ಕಲಿರುವ ಕಾರಣ, ಫ್ಲೊರೋನಾ ವೈರಸ್ ನಮ್ಮ ದೇಹದ ಪ್ರತಿರಕ್ಷಣಾ ವ್ಯವಸ್ಥೆಯ ಸ್ಥಗಿತವನ್ನು ಸೂಚಿಸುತ್ತದೆ' ಎಂದು ಕೈರೋ ವಿಶ್ವವಿದ್ಯಾಲಯದ ಆಸ್ಪತ್ರೆಯ ವೈದ್ಯ ಡಾ. ನಹ್ಲಾ ಅಬ್ದೆಲ್ ವಹಾಬ್ ಇಸ್ರೇಲ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕಡಿಮೆ ರೋಗನಿರೋಧಕ ವ್ಯವಸ್ಥೆಯನ್ನು ಹೊಂದಿರುವ ವ್ಯಕ್ತಿಗಳಿಗೆ ಈಗಾಗಲೇ ಇಸ್ರೇಲ್ ದೇಶವು ಕೋವಿಡ್-19 ವಿರುದ್ಧ ನಾಲ್ಕನೇ ಡೋಸ್ ಲಸಿಕೆಯನ್ನು ನೀಡಲು ಪ್ರಾರಂಭ ಮಾಡಿದೆ. ಅದರ ನಡುವೆಯೇ ಹೊಸ ವೈರಸ್ ನ ಆತಂಕ ಜಗತ್ತಿಗೆ ಶುರುವಾಗಿದೆ.
Delmicron Variant: ಪಾಶ್ಚಿಮಾತ್ಯ ದೇಶಗಳಲ್ಲಿ ಹೊಸ ರೂಪಾಂತರಿ: ಕೋವಿಡ್ ಹೆಚ್ಚಳಕ್ಕೆ ಡೆಲ್ಮಿಕ್ರೋನ್ ಕಾರಣ!
ಡೆಲ್ಮಿಕ್ರೋನ್ ಕುರಿತಾಗಿಯೂ ಎಚ್ಚರ: ಡೆಲ್ಟಾ(Delta) ಹಾಗೂ ಒಮಿಕ್ರಾನ್ (Omicron) ರೂಪಾಂತರಗಳ ಸಂಯೋಜನೆಯಾಗಿರುವ ಡೆಲ್ಮಿಕ್ರೋನ್ (Delmicron) ಬಗ್ಗೆಯೂ ಎಚ್ಚರಿಕೆಯಲ್ಲಿರುವಂತೆ ವೈದ್ಯರು ಎಚ್ಚರಿಸಿದ್ದಾರೆ. ಇದು ಅಮೆರಿಕ ಹಾಗೂ ಯುರೋಪ್ ನಲ್ಲಿ ತೀವ್ರ ರೂಪದಲ್ಲಿ ಏರಿಕೆ ಕಾಣಬಹುದು ಎಂದು ಅಂದಾಜು ಮಾಡಿದ್ದಾರೆ. ಡೆಲ್ಮಿಕ್ರೋನ್ ಕೂಡ ಹೊಸ ವೈರಸ್ ಅಲ್ಲ. ಇದು ಡೆಲ್ಟಾ ಹಾಗೂ ಒಮಿಕ್ರಾನ್ ವೈರಸ್ ಗಳು ಸೇರಿ ನಡೆಸಲಿರುವ ದಾಳಿ. "ಈ ಎರಡೂ ತಳಿಗಳು ತನ್ನ ಜೀನ್ ಗಳನ್ನು ಬದಲಾಯಿಸಿಕೊಳ್ಳಬಹುದು ಹಾಗೂ ಮತ್ತೊಂದು ಅಪಾಯಕಾರಿ ರೂಪಾಂತರವಾಗಿ ಪರಿವರ್ತನೆಯಾಗಬಹುದು" ಎಂದು ಮಾಡರ್ನಾದ ಮುಖ್ಯ ವೈದ್ಯಕೀಯ ಅಧಿಕಾರಿ ಡಾ. ಪೌಲ್ ಬರ್ಟನ್ (Dr Paul Burton), ಡೆಲ್ಮಿಕ್ರಾನ್ ಕುರಿತಾಗಿ ಹೇಳಿದ್ದಾರೆ.