ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗಿನ ಮಾತುಕತೆ ವೇಳೆ, ಈ ಸಂಘರ್ಷಕ್ಕೆ ಮಂಗಳ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 20 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ.

ವಾಷಿಂಗ್ಟನ್‌ (ಅ.01): ಕಳೆದೆರಡು ವರ್ಷಗಳಿಂದ ನಡೆಯುತ್ತಿರುವ ಇಸ್ರೇಲ್‌-ಹಮಾಸ್‌ ನಡುವಿನ ಯುದ್ಧ ಅಂತ್ಯವಾಗುವ ಸಮಯ ಸನ್ನಿಹಿತವಾಗಿರುವ ಸೂಚನೆಗಳು ಲಭಿಸತೊಡಗಿವೆ. ಇಸ್ರೇಲ್‌ ಪ್ರಧಾನಿ ಬೆಂಜಮಿನ್‌ ನೆತನ್ಯಾಹು ಅವರೊಂದಿಗಿನ ಮಾತುಕತೆ ವೇಳೆ, ಈ ಸಂಘರ್ಷಕ್ಕೆ ಮಂಗಳ ಹಾಡಲು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ 20 ಅಂಶಗಳ ಪ್ರಸ್ತಾವನೆಯನ್ನು ಮುಂದಿಟ್ಟಿದ್ದಾರೆ. ಇದಕ್ಕೆ ನೆತನ್ಯಾಹು ಒಪ್ಪಿದ್ದು ಮಾತ್ರವಲ್ಲದೆ, ಭಾರತದಿಂದಲೂ ಬೆಂಬಲ ವ್ಯಕ್ತವಾಗಿದೆ.

ಗಾಜಾಪಟ್ಟಿಯನ್ನು ಉಗ್ರಮುಕ್ತ ಮಾಡುವುದರಿಂದ ಹಿಡಿದು ಒತ್ತೆಯಾಳುಗಳ ಬಿಡುಗಡೆಯ ವರೆಗೆ ಟ್ರಂಪ್‌ ಸಿದ್ಧಪಡಿಸಿರುವ ಪ್ರಸ್ತಾವನೆಯನ್ನು ಶ್ವೇತಭವನ ಬಿಡುಗಡೆ ಮಾಡಿದ್ದು, ಅದರಂತೆ ಯುದ್ಧಸ್ಥಗಿತಕ್ಕೆ ಮುಂದಾಗಲು ಇಸ್ರೇಲ್‌ ಒಪ್ಪಿಕೊಂಡಿದೆ. ಆದರೆ ಹಮಾಸ್‌ ಉಗ್ರರು ಇದನ್ನು ಸ್ವಾಗತಿಸುತ್ತಾರೆಯೇ ಅಥವಾ ದಾಳಿಯನ್ನು ಇನ್ನಷ್ಟು ತೀವ್ರವಾಗಿಸುತ್ತಾರೆಯೇ ಎಂಬ ಬಗ್ಗೆ ಇನ್ನೂ ಸ್ಪಷ್ಟವಿಲ್ಲ.

ಅತ್ತ 8 ಮುಸ್ಲಿಂ ರಾಷ್ಟ್ರಗಳಿಂದ ಈ ಪ್ರಸ್ತಾವನೆಗೆ ಬೆಂಬಲ ದೊರಕಿರುವುದರಿಂದ ಹಮಾಸ್‌ ಕಡೆಯಿಂದಲೂ ಒಪ್ಪಿಗೆಯ ನಿರೀಕ್ಷೆಯಿದೆ. ನಿರ್ಧಾರ ತಿಳಿಸಲು ಟ್ರಂಪ್‌ 3-4 ದಿನಗಳ ಕಾಲಾವಕಾಶ ನೀಡಿರುವ ಟ್ರಂಪ್‌, ‘ಪ್ರಸ್ತಾವನೆಗೆ ಸಹಿ ಮಾಡದಿದ್ದರೆ ನರಕದಲ್ಲಿ ಅದರ ಬೆಲೆ ತೆರಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದ್ದಾರೆ. ಹಮಾಸ್‌ನ ಸಂಧಾನಕಾರರ ತಂಡ ಪ್ರಸ್ತಾವನೆಯನ್ನು ಪರಿಶೀಲಿಸುತ್ತಿದೆ ಎಂದು ಕತಾರ್ ವಿದೇಶಾಂಗ ಸಚಿವಾಲಯದ ವಕ್ತಾರ ತಿಳಿಸಿದ್ದಾರೆ.

ಟ್ರಂಪ್‌ ಪ್ರಸ್ತಾವನೆಗಳು

-ಗಾಜಾವನ್ನು ಭಯೋತ್ಪಾದನೆ ಮುಕ್ತ ವಲಯ ಮಾಡಿ ಅದರ ಮರುನಿರ್ಮಾಣ. ಗಾಜಾ ತೊರೆಯುವವರಿಗೆ ನಿರ್ಬಂಧವಿಲ್ಲ
-ಇಸ್ರೇಲ್‌ ಸೇನೆ ನಿರ್ದಿಷ್ಟ ರೇಖೆಗಿಂತ ಹಿಂದೆ ಸರಿದು, ಒತ್ತೆಯಾಳುಗಳ ಬಿಡುಗಡೆಗೆ ಸಿದ್ಧತೆ
-ಈ ಪ್ರಸ್ತಾವನೆಯನ್ನು ಇಸ್ರೇಲ್‌ ಒಪ್ಪಿದ 72 ಗಂಟೆಗಳಲ್ಲಿ ಎಲ್ಲಾ ಒತ್ತೆಯಾಳುಗಳ(ಜೀವಂತ, ಮೃತ) ಬಿಡುಗಡೆ
-ಕೂಡಲೇ ಇಸ್ರೇಲ್‌ನಿಂದ 250 ಜೀವಾವಧಿ ಕೈದಿಗಳು ಮತ್ತು ಗಾಜಾದ 1700 ಮಂದಿ ತವರಿಗೆ
-ಶಸ್ತ್ರಾಸ್ತ್ರ ತ್ಯಾಗಕ್ಕೆ ಮುಂದಾಗುವ ಹಮಾಸ್‌ಗಳಿಗೆ ಕ್ಷಮಾದಾನ. ಗಾಜಾ ತೊರೆಯಲು ಬಯಸಿದರೆ ಸುರಕ್ಷಿತ ಮಾರ್ಗದ ಮೂಲಕ ಅನುವು
-ಇಸ್ರೇಲ್‌ ಅಥವಾ ಹಮಾಸ್‌ ಜತೆ ನಂಟು ಹೊಂದಿರದ ಅಂತಾರಾಷ್ಟ್ರೀಯ ಸಂಸ್ಥೆಗಳಿಂದ ಗಾಜಾಗೆ ನೆರವು
-ಸುರಂಗ, ಶಸ್ತ್ರಾಸ್ತ್ರ ತಯಾರಿಗೆ ಘಟಕ ಸೇರಿ ಎಲ್ಲಾ ಉಗ್ರ ಮತ್ತು ಸೈನಿಕ ಊಲಸೌಕರ್ಯಗಳ ನಾಶ
-ಟ್ರಂಪ್‌ ಅಧ್ಯಕ್ಷತೆಯಲ್ಲಿ ತಜ್ಞರನ್ನೊಳಗೊಂಡ ರಾಜಕೀಯೇತರ ಪ್ಯಾಲೆಸ್ಟಿನಿಯನ್ ಸಮಿತಿಯಿಂದ ಗಾಜಾ ಆಡಳಿತ. ಸ್ಥಿರ ಸರ್ಕಾರ ಸ್ಥಾಪನೆ ವರೆಗೆ ಮುಂದುವರಿಕೆ
-ಅಭಿವೃದ್ಧಿ ಹೊಂದುತ್ತಿರುವ ಮಧ್ಯಪ್ರಾಚ್ಯ ನಗರಗಳ ಯಶಸ್ಸಿನ ಹಿಂದಿರುವ ತಜ್ಞರಿಂದ ಆರ್ಥಿಕ ಅಭಿವೃದ್ಧಿ ಯೋಜನೆ ರಚನೆ. ವಿಶೇಷ ಆರ್ಥಿಕ ವಲಯ ಸ್ಥಾಪನೆ
-ಗಾಜಾದ ಆಂತರಿಕ ಸುರಕ್ಷತೆಗೆ ಅರಬ್‌ ರಾಷ್ಟ್ರಗಳೊಂದಿಗೆ ಸೇರಿ ಅಮೆರಿಕ ತಾತ್ಕಾಲಿಕ ಅಂತಾರಾಷ್ಟ್ರೀಯ ಸ್ಥಿರೀಕರಣ ಪಡೆ ರಚನೆ
-ಪ್ರಸ್ತಾವನೆಯನ್ನು ಹಮಾಸ್‌ ತಿರಸ್ಕರಿಸಿದರೆ ಅಥವಾ ಒಪ್ಪಲು ವಿಳಂಬ ಮಾಡಿದಲ್ಲಿ, ಉಗ್ರಮುಕ್ತ ಪ್ರದೇಶಗಳಿಗಷ್ಟೇ ನೆರವು ಮುಂದುವರಿಕೆ

ಭಾರತ, 8 ಮುಸ್ಲಿಂ ರಾಷ್ಟ್ರಗಳ ಬೆಂಬಲ: ಗಾಜಾದಲ್ಲಿ ಅಶಾಂತಿ ಕೊನೆಗೊಳಿಸಲು ಮುಂದಾಗಿರುವ ಟ್ರಂಪ್‌ರ ಪ್ರಸ್ತಾವನೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸ್ವಾಗತಿಸಿದ್ದು, ‘ಪ್ಯಾಲೆಸ್ಟೀನಿಯನ್, ಇಸ್ರೇಲ್‌ ಮತ್ತು ವಿಶಾಲವಾದ ಪಶ್ಚಿಮ ಏಷ್ಯಾ ಪ್ರದೇಶಕ್ಕೆ ದೀರ್ಘಕಾಲದ ಶಾಂತಿ, ಭದ್ರತೆ ಮತ್ತು ಅಭಿವೃದ್ಧಿಗೆ ಇದು ಮಾರ್ಗ ಒದಗಿಸುತ್ತದೆ’ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತದಲ್ಲಿರುವ ಇಸ್ರೇಲ್‌ ರಾಜಭಾರಿ ಭಾರತದ ನಿಲುವಿಗೆ ಕೃತಜ್ಞತೆ ಸಲ್ಲಿಸಿದ್ದು, ಗಾಜಾ ಮರುನಿರ್ಮಾಣದಲ್ಲಿ ಭಾರತದ ಪಾತ್ರ ಮಹತ್ವದ್ದಾಗಿದೆ ಎಂದಿದ್ದಾರೆ. ಅತ್ತ ಮುಸ್ಲಿಂ ರಾಷ್ಟ್ರಗಳಾದ ಜೋರ್ಡನ್, ಕತಾರ್, ಯುಎಇ, ಇಂಡೋನೇಷ್ಯಾ, ಪಾಕಿಸ್ತಾನ, ಟರ್ಕಿ, ಸೌದಿ ಅರೇಬಿಯಾ ಮತ್ತು ಈಜಿಪ್ಟ್ ಕೂಡ ಟ್ರಂಪ್‌ರ ಪ್ರಸ್ತಾವನೆಯನ್ನು ಸ್ವಾಗತಿಸಿವೆ.