* ಕಾಬೂಲ್‌ಗೆ ತಲುಪಿದ ಐಎಸ್‌ಐ ಮುಖ್ಯಸ್ಥ* ತಾಲಿಬಾನ್ ಸರ್ಕಾರದಲ್ಲಿ ಪಾಕ್ ಐಎಸ್‌ಐ ‘ಕೈವಾಡ’* ಪಾಕಿಸ್ತಾನದ ಹಕ್ಕಾನಿ ಉಗ್ರರ ಪರ ಲಾಬಿ?
ಕಾಬೂಲ್(ಸೆ.05): ಅಫ್ಘಾನಿಸ್ತಾನವನ್ನು ಕೈವಶ ಮಾಡಿಕೊಂಡಿರುವ ತಾಲಿಬಾನ್ ಉಗ್ರರು ಸರ್ಕಾರ ರಚನೆ ಪ್ರಕ್ರಿಯೆಗೆ ಮುಂದಾಗಿರುವ ಸಂದರ್ಭದಲ್ಲೇ ಪಾಕಿಸ್ತಾನದ ಪ್ರಭಾವಿ ಗುಪ್ತಚರ ಸಂಸ್ಥೆ ಐಎಸ್‌ಐ ಮುಖ್ಯಸ್ಥ ಜನರಲ್ ಫಯಾಜ್ ಹಮೀದ್ ಕಾಬೂಲ್‌ಗೆ ಬಂದಿಳಿದಿರುವುದು ತೀವ್ರ ಸಂಚಲನಕ್ಕೆ ಕಾರಣವಾಗಿದೆ.
ಸರ್ಕಾರ ರಚನೆ ಕುರಿತು ತಾಲಿಬಾನ್‌ನ ಹಕ್ಕಾನಿ ಹಾಗೂ ಬರಾದರ್ ಬಣಗಳ ನಡುವೆ ಭಿನ್ನಾಭಿಪ್ರಾಯ ಕಾಣಿಸಿಕೊಂಡಿದ್ದು, ಅದನ್ನು ಪರಿಹರಿಸಲು ಹಾಗೂ ನಿಸ್ತೇಜಗೊಂಡಿರುವ ಅಷ್ಘಾನಿಸ್ತಾನ ಸೇನೆಯ ಮೇಲೆ ಹಿಡಿತ ಸಾಧಿಸಲು ಹಮೀದ್ ಆಗಮಿಸಿದ್ದಾರೆ ಎನ್ನಲಾಗುತ್ತಿದೆ. ಈ ಮೂಲಕ, ‘ತಾಲಿಬಾನ್ ಸೇರಿದಂತೆ ಯಾವುದೇ ಉಗ್ರ ಸಂಘಟನೆಗೂ ತಾನು ಆಶ್ರಯ ನೀಡಿಲ್ಲ’ ಎಂದೇ ವಾದಿಸಿಕೊಂಡು ಬಂದಿದ್ದ ಪಾಕಿಸ್ತಾನದ ನಿಜಬಣ್ಣ ಐಎಸ್‌ಐ ಮುಖ್ಯಸ್ಥನ ಕಾಬೂಲ್ ಭೇಟಿಯೊಂದಿಗೆ ಮತ್ತೊಮ್ಮೆ ಬಯಲಾಗಿದೆ. ಆಫ್ಘನ್ ವಿದ್ಯಮಾನದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುತ್ತಿರುವುದು ರುಜುವಾತಾಗಿದೆ.
ಹಮೀದ್ ಭೇಟಿಯನ್ನು ಪಾಕಿಸ್ತಾನದ ಅಧಿಕಾರಿಗಳೇ ಖಚಿತಪಡಿಸಿದ್ದಾರೆ. ಈ ಹಿಂದೆ ತಾಲಿಬಾನ್ ಉಗ್ರರ ಕೇಂದ್ರ ಕಚೇರಿ ಪಾಕಿಸ್ತಾನದಲ್ಲೇ ಇತ್ತು. ಐಎಸ್‌ಐ ಮುಖ್ಯಸ್ಥರ ಜತೆಗೆ ಆ ಸಂಘಟನೆಗೆ ನೇರ ಸಂಪರ್ಕ ಇತ್ತು. ಹೀಗಾಗಿ ತಾಲಿಬಾನ್ ಉಗ್ರರು ಐಎಸ್‌ಐ ಸಲಹೆಯನ್ನು ಉಪೇಕ್ಷಿಸುವುದಿಲ್ಲ. ಈ ಕಾರಣಕ್ಕೆ ಹಮೀದ್ ಭೇಟಿ ಮಹತ್ವ ಪಡೆದುಕೊಂಡಿದೆ. ಈ ಬೆಳವಣಿಗೆಯನ್ನು ಭಾರತ ಅತ್ಯಂತ ಗಂಭೀರವಾಗಿ ಪರಿಗಣಿಸಿದೆ.
ಈ ಹಿಂದೆ ತಾಲಿಬಾನ್ ಪ್ರಮುಖರ ಜತೆ ಫಯಾಜ್ ಹಮೀದ್ ಪ್ರಾರ್ಥನೆ ಸಲ್ಲಿಸುತ್ತಿದ್ದ ಫೋಟೋ ವೈರಲ್ ಆಗಿತ್ತು. ಈಗಿನ ಭೇಟಿ ವೇಳೆ ಪಂಜ್‌ಶೀರ್ ಪ್ರದೇಶ, ವ್ಯಾಪಾರ- ವಹಿವಾಟು ಕುರಿತಂತೆ ತಾಲಿಬಾನ್ ಉಗ್ರರ ಜತೆ ಚರ್ಚೆ ನಡೆಸುವ ಸಾಧ್ಯತೆ ಇದೆ.
ಭೇಟಿಗೇನು ಕಾರಣ?:
ಅಫ್ಘಾನಿಸ್ತಾನ ಸರ್ಕಾರದ ಪ್ರಮುಖ ಹುದ್ದೆಗಳ ಹಂಚಿಕೆ ಸಂಬಂಧ ಹಕ್ಕಾನಿ ಗುಂಪು ಹಾಗೂ ಮುಲ್ಲಾ ಬರಾದರ್ ಬಣಗಳ ನಡುವೆ ತಿಕ್ಕಾಟ ಆರಂಭವಾಗಿದೆ. ಈ ಕಾರಣಕ್ಕೇ ಫಯಾಜ್ ಹಮೀದ್ ಆಗಮಿಸಿರಬಹುದು. ಎರಡೂ ಬಣಗಳ ನಡುವಣ ಭಿನ್ನಾಭಿಪ್ರಾಯ ಹೋಗಲಾಡಿಸಿ, ಸರ್ಕಾರ ರಚನೆಗೆ ನೆರವಾಗಬಹುದು ಎನ್ನಲಾಗುತ್ತಿದೆ. ಮತ್ತೊಂದೆಡೆ, ತಾಲಿಬಾನ್ ಆಳ್ವಿಕೆಯಲ್ಲಿ ಹಿಂಬಾಗಿಲ ರಾಜಕೀಯ ಮಾಡಲು ಪಾಕಿಸ್ತಾನ ಆಸಕ್ತಿ ಹೊಂದಿದೆ.
ಇದೇ ವೇಳೆ, ತಾಲಿಬಾನ್ ದಾಳಿಯಿಂದ ಜರ್ಜರಿತವಾಗಿರುವ ಆಫ್ಘನ್ ಸೇನೆಯನ್ನು ನಿಯಂತ್ರಿಸುವ ಇರಾದೆಯನ್ನು ಐಎಸ್‌ಐ ಹೊಂದಿದೆ. ಈ ಕಾರಣಕ್ಕೂ ಭೇಟಿ ನಡೆದಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ.
