ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ ಸಂಘಟನೆಯು ಬಾಂಗ್ಲಾದೇಶವನ್ನು ಹೊಸ ನೆಲೆಯಾಗಿ ಬಳಸಿ ಭಾರತದ ಮೇಲೆ ದಾಳಿ ನಡೆಸಲು ಯೋಜಿಸುತ್ತಿದೆ ಎಂದು ಗುಪ್ತಚರ ಸಂಸ್ಥೆಗಳು ಪತ್ತೆಹಚ್ಚಿವೆ. ಪಾಕಿಸ್ತಾನದಲ್ಲಿ ನಡೆದ ರ್ಯಾಲಿಯೊಂದರಲ್ಲಿ ಎಲ್‌ಇಟಿ ಕಮಾಂಡರ್ ಈ ಸಂಚನ್ನು ಬಹಿರಂಗವಾಗಿದೆ.
ಜಾಗತಿಕ ಭಯೋತ್ಪಾದಕರ ಪಟ್ಟಿಯಲ್ಲಿರುವ ಪಾಕಿಸ್ತಾನ ಮೂಲದ ನಾಯಕ ಹಫೀಜ್ ಸಯೀದ್ ನೇತೃತ್ವದ ಲಷ್ಕರ್-ಎ-ತೈಬಾ (ಎಲ್‌ಇಟಿ) ಸಂಘಟನೆಯು ಭಾರತದ ಮೇಲೆ ಹೊಸ ದಾಳಿಗಳನ್ನು ಯೋಜಿಸುತ್ತಿದ್ದು, ಬಾಂಗ್ಲಾದೇಶವನ್ನು ಇದಕ್ಕೆ ಹೊಸ ನೆಲೆಯಾಗಿ ಬಳಸಿಕೊಳ್ಳುತ್ತಿದೆ ಎಂದು ಭಾರತೀಯ ಗುಪ್ತಚರ ಸಂಸ್ಥೆಗಳು ಆತಂಕಕಾರಿ ಮಾಹಿತಿಯನ್ನು ಪಡೆದಿವೆ.
ಹಫೀಜ್ ಸಯೀದ್ ಸುಮ್ಮನೆ ಕುಳಿತಿಲ್ಲ:
ಟೈಮ್ಸ್ ಆಫ್ ಇಂಡಿಯಾ ವರದಿಯ ಪ್ರಕಾರ, ಈ ಮಾಹಿತಿ ಅಕ್ಟೋಬರ್ 30ರಂದು ಪಾಕಿಸ್ತಾನದ ಖೈರ್‌ಪುರ್ ತಮೇವಾಲಿಯಲ್ಲಿ ನಡೆದ ರ್ಯಾಲಿಯ ವೀಡಿಯೋ ರೆಕಾರ್ಡಿಂಗ್‌ನಿಂದ ಬಹಿರಂಗವಾಗಿದೆ. ಈ ರ್ಯಾಲಿಯಲ್ಲಿ ಎಲ್‌ಇಟಿಯ ಹಿರಿಯ ಕಮಾಂಡರ್ ಸೈಫುಲ್ಲಾ ಸೈಫ್ ಭಾರತ ವಿರುದ್ಧ ಹಿಂಸಾತ್ಮಕ ದಾಳಿಗಳನ್ನು ಖುಲ್‌ಲು ಪ್ರಚೋದಿಸುವಂತಿರುವ ಹೇಳಿಕೆಗಳನ್ನು ನೀಡಿದ್ದಾರೆ. 'ಹಫೀಜ್ ಸಯೀದ್ ಸುಮ್ಮನೆ ಕುಳಿತಿಲ್ಲ, ಅವರು ಬಾಂಗ್ಲಾದೇಶದ ಮೂಲಕ ಭಾರತದ ಮೇಲೆ ದಾಳಿ ನಡೆಸಲು ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಪೂರ್ವ ಪಾಕಿಸ್ತಾನವಾದ ಬಾಂಗ್ಲಾದೇಶದಲ್ಲಿ ನಮ್ಮ ಎಲ್‌ಇಟಿ ಕಾರ್ಯಕರ್ತರು ಈಗಾಗಲೇ ಸಕ್ರಿಯರಾಗಿದ್ದಾರೆ. ಭಾರತದ 'ಆಪರೇಷನ್ ಸಿಂದೂರ್'ಗೆ ಪ್ರತ್ಯುತ್ತರವಾಗಿ ನಾವು ಸಂಪೂರ್ಣ ರೆಡಿಯಾಗಿದ್ದೇವೆ' ಎಂದು ' ಎಂದು ಸೈಫ್ ತನ್ನ ಭಾಷಣದಲ್ಲಿ ಸ್ಪಷ್ಟವಾಗಿ ಹೇಳಿದ್ದಾನೆ.
ಜಿಹಾದ್ ಸೋಗಿನಲ್ಲಿ ಬಾಂಗ್ಲಾ ಯುವಕರಿಗೆ ಬ್ರೈನ್‌ವಾಶ್:
ಗುಪ್ತಚರ ವರದಿಗಳ ಪ್ರಕಾರ, ಹಫೀಜ್ ಸಯೀದ್ ಬಾಂಗ್ಲಾದೇಶದಲ್ಲಿ 'ಜಿಹಾದ್' ಎಂಬ ಸೋಗಿನಲ್ಲಿ ಸ್ಥಳೀಯ ಯುವಕರನ್ನು ಮೂಲಭೂತವಾದಿಗಳಾಗಿ ಪರಿವರ್ತಿಸಿ, ಅವರಿಗೆ ಭಯೋತ್ಪಾದಕ ತರಬೇತಿ ನೀಡಲು ತನ್ನ ವಿಶ್ವಸ್ಥ ಸಹಾಯಕನನ್ನು ಕಳುಹಿಸಿದ್ದಾರೆ. ಈ ವೀಡಿಯೋದಲ್ಲಿ ಸೈಫ್ ಭಾರತದ ವಿರುದ್ಧ ನೇರವಾಗಿ ಹಿಂಸೆಗೆ ಕರೆ ನೀಡುತ್ತಿರುವುದು ದಾಖಲಾಗಿದೆ.
ಆತಂಕಕಾರಿ ಅಂಶಗಳು: ರ್ಯಾಲಿಯ ಜನಸಮೂಹದಲ್ಲಿ ಮಕ್ಕಳು ಪಾಲ್ಗೊಂಡಿರುವುದು ಗಮನಾರ್ಹ. ಇದು ಭಯೋತ್ಪಾದಕ ಸಂಘಟನೆಗಳು ಅಪ್ರಾಪ್ತ ವಯಸ್ಕರನ್ನು ಭವಿಷ್ಯದ ನೇಮಕಾತಿಗಾಗಿ ಆರಂಭದಿಂದಲೇ ಮೂಲಭೂತವಾದಿಗಳನ್ನಾಗಿ ಮಾಡುತ್ತಿವೆ ಎಂಬ ಆತಂಕವನ್ನು ಉಂಟುಮಾಡಿದೆ. ಈ ಪ್ರಚೋದನಾತ್ಮಕ ಹೇಳಿಕೆಗಳು ಭಾರತ-ಪಾಕಿಸ್ತಾನ ಗಡಿಯಾಚೆಗಿನ ಮೂಲಭೂತವಾದಿ ಇಸ್ಲಾಮಿಸ್ಟ್‌ಗಳ ಬೆಳವಣಿಗೆಯನ್ನು ಮತ್ತು ಪಾಕಿಸ್ತಾನದ ರಾಜತಂತ್ರೀಯ ಭಯೋತ್ಪಾದನೆಯನ್ನು ಮತ್ತೊಮ್ಮೆ ಬಯಲು ಮಾಡಿದೆ.
ಆಪರೇಷನ್ ಸಿಂದೂರ್‌ಗೆ ದೆಹಲಿ ಸ್ಫೋಟ ಪ್ರತಿಕ್ರಿಯೆ?
ಮೇ 9-10ರ ರಾತ್ರಿಯ 'ಆಪರೇಷನ್ ಸಿಂದೂರ್'ಗೆ ಪ್ರತಿಕ್ರಿಯೆಯಾಗಿ ಪಾಕಿಸ್ತಾನಿ ಸೇನೆಯು ಪ್ರತೀಕಾರ ತೀರಿಸಿಕೊಂಡಿದೆ ಎಂದು ಸೈಫ್ ಹೇಳಿಕೊಂಡಿದ್ದಾರೆ. 'ಈಗ ಅಮೆರಿಕ ನಮ್ಮೊಂದಿಗಿದ್ದು, ಬಾಂಗ್ಲಾದೇಶವೂ ಪಾಕಿಸ್ತಾನಕ್ಕೆ ಮತ್ತೆ ಹತ್ತಿರವಾಗುತ್ತಿದೆ' ಎಂದು ಅವರು ಹೇಳಿದ್ದಾರೆ. ಈ ಒಳನುಸುಳುವಿಕೆಯ ಭೀತಿಯ ಹಿನ್ನೆಲೆಯಲ್ಲಿ, ಭಾರತೀಯ ಭದ್ರತಾ ಸಂಸ್ಥೆಗಳು ಈಗಾಗಲೇ ಕಟ್ಟೆಚ್ಚರ ವಹಿಸಿವೆ. ಬಾಂಗ್ಲಾದೇಶ-ಪಾಕಿಸ್ತಾನ ಸಂಬಂಧಗಳ ಬೆಳವಣಿಗೆಯನ್ನು ಗುಪ್ತಚರ ಸಂಸ್ಥೆಗಳು ಗಮನಿಸುತ್ತಿರುವುದರಿಂದ, ಭಾರತ-ಬಾಂಗ್ಲಾದೇಶ ಗಡಿಯಲ್ಲಿ ಕಣ್ಗಾವಲು ತೀವ್ರಗೊಳಿಸಲಾಗಿದೆ. ಈ ಬೆಳವಣಿಗೆಯು ದಕ್ಷಿಣ ಏಷ್ಯಾದ ಭದ್ರತೆಗೆ ಹೊಸ ಸವಾಲುಗಳನ್ನು ಎದುರಿಸುವಂತಾಗಿದೆ.
