Russia Ukraine Crisis: ಕಚ್ಚಾತೈಲ ಆಮದು ಕಡಿತಕ್ಕೆ ಇಂಡಿಯನ್‌ ಆಯಿಲ್‌ ನಿರ್ಣಯ: SBI ವ್ಯವಹಾರ ಕಟ್‌?

*ನಿರ್ಬಂಧಿತ ರಷ್ಯಾ ಕಂಪನಿಗಳ ಜೊತೆ ಎಸ್‌ಬಿಐ ವ್ಯವಹಾರ ಕಟ್‌?
* ಕಚ್ಚಾತೈಲ ಆಮದು ಕಡಿತಕ್ಕೆ ಇಂಡಿಯನ್‌ ಆಯಿಲ್‌ ನಿರ್ಣಯ

Indian Oil Not To Accept Russian Crude On Free On Board Basis mnj

ನವದೆಹಲಿ (ಮಾ. 01): ರಷ್ಯಾದಿಂದ ಆಮದಾಗುವ ಕಚ್ಚಾ ತೈಲವನ್ನು ಫ್ರೀ ಆನ್‌ ಬೋರ್ಡ್‌ (ಎಫ್‌ಒಬಿ) ಆಧಾರದಲ್ಲಿ ಒಪ್ಪಿಕೊಳ್ಳದೇ ಇರಲು ದೇಶದ ಅತಿದೊಡ್ಡ ತೈಲ ಕಂಪನಿಯಾದ ಇಂಡಿಯಲ್‌ ಆಯಿಲ್‌ ನಿರ್ಧರಿಸಿದೆ. ರಷ್ಯಾ ಕಂಪನಿಗಳು ಜಾಗತಿಕ ನಿರ್ಬಂಧಕ್ಕೆ ಒಳಗಾಗಿರುವ ಹಿನ್ನೆಲೆಯಲ್ಲಿ ಐಒಸಿ ಇಂಥದ್ದೊಂದು ನಿರ್ಧಾರ ಕೈಗೊಂಡಿದೆ ಎನ್ನಲಾಗಿದೆ.ಫ್ರೀ ಆನ್‌ ಬೋರ್ಡ್‌ ಎಂಬ ಪದವನ್ನು, ಕಚ್ಚಾ ತೈಲ ಸಾಗಣೆ ವೇಳೆ ಉಂಟಾಗುವ ಅನಾಹುತಕ್ಕೆ ಯಾರು ಹೊಣೆ ಎಂಬುದನ್ನು ಸೂಚಿಸಲು ಬಳಸಲಾಗುತ್ತದೆ. 

ಎಫ್‌ಒಬಿ ಒರಿಜಿನ್‌ ಎಂದರೆ, ಒಮ್ಮೆ ಕಚ್ಚಾತೈಲ ತುಂಬಿದ ಹಡಗು ಪ್ರಯಾಣ ಆರಂಭಿಸಿದ ವೇಳೆ ಅದಕ್ಕೆ ಆಗುವ ಯಾವುದೇ ಅನಾಹುತಕ್ಕೆ ಅದನ್ನು ಖರೀದಿ ಮಾಡಿದವರೇ ಹೊಣೆಯಾಗುತ್ತಾರೆ. ಎಫ್‌ಒಬಿ ಡೆಸ್ಟಿನೇಷನ್‌ ಎಂದರೆ ಉತ್ಪನ್ನ, ಖರೀದಿದಾರನಿಗೆ ತಲುಪುವವವರೆಗೂ ಪೂರೈಸುವವನೇ ಹೊಣೆಯಾಗಿರುತ್ತಾನೆ. ಇದೀಗ ರಷ್ಯಾದಿಂದ ಹೊರಡುವ ಕಚ್ಚಾತೈಲ ಭಾರತ ತಲುಪುವ ಅನುಮಾನ ಇರುವ ಕಾರಣ ಅದನ್ನು ಫ್ರಿ ಆನ್‌ ಬೋರ್ಡ್‌ ರೀತಿಯಲ್ಲಿ ಸ್ವೀಕರಿಸದೇ ಇರಲು ಐಒಸಿ ನಿರ್ಧರಿಸಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Russia Ukraine Crisis: ಜೀವ ಉಳಿಸಿಕೊಳ್ಳಿ ಮತ್ತು ಜಾಗ ಖಾಲಿ ಮಾಡಿ: ರಷ್ಯಾ ಯೋಧರಿಗೆ ಉಕ್ರೇನ್‌ ಅಧ್ಯಕ್ಷ ಆಫರ್‌!

ನಿರ್ಬಂಧಿತ ರಷ್ಯಾ ಕಂಪನಿಗಳ ಜೊತೆ ಎಸ್‌ಬಿಐ ವ್ಯವಹಾರ ಕಟ್‌?:  ಅಂತಾರಾಷ್ಟ್ರೀಯ ನಿರ್ಬಂಧಕ್ಕೆ ಒಳಾಗಿರುವ ರಷ್ಯಾ ಮೂಲದ ಜೊತೆಗಿನ ವ್ಯವಹಾರವನ್ನು ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಸ್ಥಗಿತಗೊಳಿಸಿದೆ ಎಂದು ಸುದ್ದಿಸಂಸ್ಥೆಯೊಂದು ವರದಿ ಮಾಡಿದೆ. ರಷ್ಯಾದ ಸಂಸ್ಥೆಗಳು, ಬ್ಯಾಂಕ್‌ಗಳು, ಬಂದರು ಅಥವಾ ನಿರ್ಬಂಧಕ್ಕೆ ಒಳಗಾದ ಇನ್ಯಾವುದೇ ಸಂಸ್ಥೆಗಳ ಜೊತೆಗೆ ಯಾವುದೇ ವಹಿವಾಟು ನಡೆಸದೇ ಇರಲು ಮತ್ತು ಅವುಗಳಿಗೆ ಸಂಬಂಧಿಸಿದ ಯಾವುದೇ ವ್ಯವಹಾರವನ್ನು ನಡೆಸದೇ ಇರಲು ಬ್ಯಾಂಕ್‌ ನಿರ್ಧರಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ವರದಿ ಮಾಡಿದೆ. ವಿಶ್ವಸಂಸ್ಥೆ, ಯುರೋಪಿಯನ್‌ ಒಕ್ಕೂಟ, ಅಮೆರಿಕದಿಂದ ನಿರ್ಬಂಧಕ್ಕೆ ಒಳಗಾಗಿರುವ ಸಂಸ್ಥೆಗಳಿಗೆ ಈ ನಿಯಮ ಅನ್ವಯವಾಗಲಿದೆ.

ವಿಶ್ವಸಂಸ್ಥೆ ವಿಶೇಷ ಅಧಿವೇಶನ ಪ್ರಸ್ತಾವಕ್ಕೆ ಭಾರತದ ಮತ ಇಲ್ಲ: ಉಕ್ರೇನ್‌ ಬಿಕ್ಕಟ್ಟು ಕುರಿತು ಚರ್ಚಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯುವ ಕುರಿತ ಭದ್ರತಾ ಮಂಡಳಿಯ ಪ್ರಸ್ತಾಪಕ್ಕೆ ಮತ ಹಾಕುವುದರಿಂದ ಭಾರತ ದೂರವೇ ಉಳಿದಿದೆ. ಈ ಮೂಲಕ ಕಳೆದ 4 ದಿನಗಳಲ್ಲಿ ಎರಡನೇ ಬಾರಿ ಈ ವಿಷಯದಲ್ಲಿ ತಟಸ್ಥ ನೀತಿಯನ್ನು ಪ್ರದರ್ಶಿಸಿದೆ. ಜೊತೆಗೆ ಉಕ್ರೇನ್‌ ಬಿಕ್ಕಟ್ಟು ಇತ್ಯರ್ಥಕ್ಕೆ ಸಂಧಾನವೊಂದೇ ಮಾರ್ಗ ಎಂದು ಪ್ರತಿಪಾದಿಸಿದೆ.

ಇದನ್ನೂ ಓದಿ: Russia Ukraine Crisis: ತನ್ನ ಪ್ರಜೆಗಳನ್ನು ರಕ್ಷಿಸಿ ಮಾದರಿಯಾದ ಭಾರತ: ತನ್ನವರ ರಕ್ಷಣೆಗೆ ಮುಂದಾಗದ ಚೀನಾ!

ವಿಶ್ವಸಂಸ್ಥೆ ಸಾಮಾನ್ಯ ಸಭೆಯ ವಿಶೇಷ ಅಧಿವೇಶನ ಕರೆಯುವ ಬಗ್ಗೆ ನಿರ್ಧಾರ ಕೈಗೊಳ್ಳಲು, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಾನುವಾರ ಮಧ್ಯಾಹ್ನ ಸಭೆ ಸೇರಿತ್ತು. ಸಭೆಯಲ್ಲಿ ವಿಶೇಷ ಅಧಿವೇಶನ ಕರೆಯುವ ಪ್ರಸ್ತಾಪವನ್ನು ಮತಕ್ಕೆ ಹಾಕಿದ ವೇಳೆ, 15 ಸದಸ್ಯ ದೇಶಗಳ ಪೈಕಿ ಭಾರತ, ಚೀನಾ, ಯುಎಇ ಮತದಿಂದ ದೂರ ಉಳಿದವು. ರಷ್ಯಾ ಪ್ರಸ್ತಾವದ ವಿರುದ್ಧವಾಗಿ ಮತ ಚಲಾಯಿತು. ಉಳಿದ 11 ದೇಶಗಳು ಪ್ರಸ್ತಾವದ ಪರವಾಗಿ ಮತ ಹಾಕಿದವು.

ಈ ವೇಳೆ ಮಾತನಾಡಿದ ವಿಶ್ವಸಂಸ್ಥೆಯಲ್ಲಿನ ಭಾರತದ ಕಾಯಂ ಪ್ರತಿನಿಧಿ ಟಿ.ಎಸ್‌.ತಿರುಮೂರ್ತಿ, ‘ಉಕ್ರೇನ್‌ನಲ್ಲಿ ಪರಿಸ್ಥಿತಿ ದಿನೇ ದಿನೇ ವಿಷಮವಾಗುತ್ತಿರುವುದು ವಿಷಾದಕರ ಸಂಗತಿ. ಬಿಕ್ಕಟ್ಟಿಗೆ ಪರಿಹಾರ ಕಂಡುಹಿಡಿಯಲು ತಕ್ಷಣವೇ ಹಿಂಸಾಚಾರ ನಿಲ್ಲಿಸಬೇಕು ಮತ್ತು ದ್ವೇಷವನ್ನು ಕೈಬಿಡಬೇಕು. ವಿವಾದ ಇತ್ಯರ್ಥಕ್ಕೆ ರಾಜತಾಂತ್ರಿಕ ಮತ್ತು ಸಂಧಾನಕ್ಕೆ ಮರಳುವುದರ ಹೊರತಾಗಿಯ ಬೇರಾವುದೇ ಆಯ್ಕೆಗಳು ಇಲ್ಲ’ ಎಂದು ಪ್ರತಿಪಾದಿಸಿದರು.

ವೈಯಕ್ತಿಕ ಸಂಪರ್ಕ ಬಳಸಿ ಭಾರತೀಯರ ರಕ್ಷಣೆ: ಉಕ್ರೇನ್‌ ರಾಯಭಾರಿ:  ಉಕ್ರೇನಿನಲ್ಲಿ ಭೀಕರ ಯುದ್ಧ ನಡೆಯುತ್ತಿದ್ದು ಪರಿಸ್ಥಿತಿಯು ಗಂಭೀರವಾಗಿದ್ದರೂ ಉಕ್ರೇನಿನ ಅಧಿಕಾರಿಗಳು ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ಸಹಾಯ ಮಾಡುತ್ತಿದ್ದಾರೆ ಎಂದು ಉಕ್ರೇನಿನ ರಾಯಭಾರಿ ಇಗೋರ್‌ ಪೊಲಿಖಾ ಸೋಮವಾರ ಹೇಳಿದ್ದಾರೆ.

‘ಉಕ್ರೇನಿನಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ನಾವು ಆಕ್ರಮಣಕ್ಕೆ ಬಲಿಯಾಗಿದ್ದೇವೆ. ನಮ್ಮಲ್ಲಿ ಮಿತವಾದ ಸಂಪನ್ಮೂಲವಿದೆ. ಆದರೂ ನಾನೇ ಸ್ವತಃ ಉಕ್ರೇನಿನ ಭದ್ರತಾ ಪಡೆಗಳೊಂದಿಗೆ ಮಾತನಾಡಿ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲು ಸಹಾಯ ಮಾಡುವಂತೆ ಕೋರಿದ್ದೇನೆ. ನನ್ನ ವೈಯಕ್ತಿಕ ಸಂಪರ್ಕವನ್ನು ಬಳಸಿಕೊಂಡು ಭಾರತೀಯರಿಗೆ ಸಹಾಯ ಒದಗಿಸಲು ಪ್ರಯತ್ನಿಸುತ್ತಿದ್ದೇನೆ’ ಎಂದಿದ್ದಾರೆ.

Latest Videos
Follow Us:
Download App:
  • android
  • ios