ವಾಷಿಂಗ್ಟನ್‌(ನ.09): ಜಗತ್ತಿನಲ್ಲೇ ಅಮೆರಿಕಕ್ಕೆ ಅತಿ ಹೆಚ್ಚು ನಷ್ಟಉಂಟು ಮಾಡಿರುವ ಕೊರೋನಾ ವೈರಸ್ಸನ್ನು ನಿಯಂತ್ರಿಸಲು ಅಮೆರಿಕದ ನಿಯೋಜಿತ ಅಧ್ಯಕ್ಷ ಜೋ ಬೈಡೆನ್‌ ಟಾಸ್ಕ್‌ಫೋರ್ಸ್‌ ರಚನೆ ಮಾಡಲಿದ್ದು, ಅದರಲ್ಲಿ ಮಂಡ್ಯ ಮೂಲದ ಡಾ| ವಿವೇಕ್‌ ಮೂರ್ತಿ ಹಲ್ಲೇಗೆರೆ ಸ್ಥಾನ ಪಡೆಯುವುದು ನಿಚ್ಚಳವಾಗಿದೆ.

ಕೊರೋನಾ ನಿಗ್ರಹಕ್ಕೆ ಟಾಸ್ಕ್‌ಫೋರ್ಸ್‌ ಸೇರಿದಂತೆ ತಮ್ಮ ಯೋಜನೆಯನ್ನು ಸೋಮವಾರ ಬೈಡೆನ್‌ ಪ್ರಕಟಿಸಲಿದ್ದಾರೆ. ಟಾಸ್ಕ್‌ಫೋರ್ಸ್‌ನಲ್ಲಿ ಅಮೆರಿಕದ ಮಾಜಿ ಸರ್ಜನ್‌ ಜನರಲ್‌ ವಿವೇಕ್‌ ಮೂರ್ತಿ (43) ಹಾಗೂ ಡೇವಿಡ್‌ ಕೆಸ್ಲರ್‌ ಇರುವುದು ಬಹುತೇಕ ಖಚಿತವಾಗಿದೆ. ಆದರೆ, ವಿವೇಕ್‌ ಮೂರ್ತಿ ಈ ಟಾಸ್ಕ್‌ಫೋರ್ಸ್‌ನ ಮುಖ್ಯಸ್ಥರಾಗಲಿದ್ದಾರೆಯೇ ಎಂಬುದು ಖಚಿತವಾಗಿಲ್ಲ.

ಬರಾಕ್‌ ಒಬಾಮಾ ಅಧ್ಯಕ್ಷರಾಗಿದ್ದಾಗ 37 ವರ್ಷದ ವಿವೇಕ್‌ ಮೂರ್ತಿ ಅವನ್ನು ಅಮೆರಿಕದ ಸರ್ಜನ್‌ ಜನರಲ್‌ ಆಗಿ ನೇಮಕ ಮಾಡಿದ್ದರು. ನಂತರ ಡೊನಾಲ್ಡ್‌ ಟ್ರಂಪ್‌ ಬಂದ ಮೇಲೆ ಇವರನ್ನು ಕೆಳಗಿಳಿಸಿದ್ದರು. ಈಗ ಬೈಡೆನ್‌ರ ಚುನಾವಣಾ ಪ್ರಚಾರದ ವೇಳೆ ಆರೋಗ್ಯ ಯೋಜನೆಗಳಿಗೆ ಸಂಬಂಧಿಸಿದ ಸಂಪೂರ್ಣ ಉಸ್ತುವಾರಿಯನ್ನು ವಿವೇಕ್‌ ನೋಡಿಕೊಂಡಿದ್ದಾರೆ. ಇವರು ಬೈಡೆನ್‌ಗೆ ಅತ್ಯಾಪ್ತರಾಗಿದ್ದು, ಅವರ ಸಂಪುಟದಲ್ಲಿ ಆರೋಗ್ಯ ಸಚಿವರಾಗುವ ಸಾಧ್ಯತೆಯೂ ಇದೆ.