ಅಮೆರಿಕದ ಕೊರೋನಾ ತಜ್ಞರ ಸಮಿತಿಗೆ ಮಂಡ್ಯ ವಿವೇಕ್ ಹಲ್ಲೇಗೆರೆ ಬಾಸ್!
ಅಮೆರಿಕದ ಕೊರೋನಾ ತಜ್ಞರ ಸಮಿತಿಗೆ ಮಂಡ್ಯದ ವಿವೇಕ್| 3 ತಜ್ಞರ ಟಾಸ್ಕ್‌ಫೋರ್ಸ್ ರಚಿಸಿದ ಭಾವಿ ಅಧ್ಯಕ್ಷ ಬೈಡೆನ್| ಕೊರೋನಾ ನಿಯಂತ್ರಣಕ್ಕೆ ಸಲಹೆ ನೀಡುವ ಸಮಿತಿಯಿದು
ವಾಷಿಂಗ್ಟನ್(ನ.10): ಜಗತ್ತಿನಲ್ಲೇ ಕೊರೋನಾದಿಂದ ಅತಿಹೆಚ್ಚು ಸಾವು-ನೋವು ಅನುಭವಿಸುತ್ತಿರುವ ಅಮೆರಿಕದಲ್ಲಿ ಈ ಮಹಾಮಾರಿಯನ್ನು ನಿಯಂತ್ರಿಸಲು ನಿಯೋಜಿತ ಅಧ್ಯಕ್ಷ ಜೋ ಬೈಡೆನ್ ಅವರಿಗೆ ಸಲಹೆ ನೀಡುವ ಮಹತ್ವದ ಸಮಿತಿಗೆ ಮಂಡ್ಯ ಮೂಲದ ವಿವೇಕ್ ಮೂರ್ತಿ ಹಲ್ಲೇಗೆರೆ (43) ನೇಮಕವಾಗಿದ್ದಾರೆ.
ಕೊರೋನಾ ನಿಯಂತ್ರಣಕ್ಕೆ ಸಲಹೆ ನೀಡಲು ಮೂವರು ತಜ್ಞರ ಟಾಸ್ಕ್‌ಫೋರ್ಸನ್ನು ಬೈಡೆನ್ ಸೋಮವಾರ ರಚಿಸಿದ್ದಾರೆ. ಅದಕ್ಕೆ ವಿವೇಕ್ ಮೂರ್ತಿ, ಡಾ| ಡೇವಿಡ್ ಕೆಸ್ಲರ್ ಹಾಗೂ ಡಾ| ಮರ್ಕೆಲಾ ಸ್ಮಿತ್ ನೇಮಕಗೊಂಡಿದ್ದಾರೆ. ಇವರಿಗೆ ಸಲಹೆ ನೀಡಲು ಹತ್ತು ಮಂದಿ ಆರೋಗ್ಯ ತಜ್ಞರ ಮಂಡಳಿಯೊಂದನ್ನು ನೇಮಿಸಲಾಗಿದ್ದು, ಅದರಲ್ಲೂ ಭಾರತೀಯ ಮೂಲದ ಅತುಲ್ ಗಾವಂಡೆ ಎಂಬುವರು ಇದ್ದಾರೆ.
ಹಿಂದೆ ಬರಾಕ್ ಒಬಾಮಾ ಅಧ್ಯಕ್ಷರಾಗಿದ್ದಾಗ ವಿವೇಕ್ ಮೂರ್ತಿ 2014ರಲ್ಲಿ ಅಮೆರಿಕದ ಸರ್ಜನ್ ಜನರಲ್ ಆಗಿ ನೇಮಕಗೊಂಡಿದ್ದರು. ನಂತರ ಡೊನಾಲ್ಡ್ ಟ್ರಂಪ್ ಬಂದಮೇಲೆ ರಾಜೀನಾಮೆ ನೀಡಬೇಕಾಗಿ ಬಂದಿತ್ತು. ಈಗ ಕೊರೋನಾ ನಿಯಂತ್ರಿಸುವುದು ತಮಗೆ ಬೇರೆಲ್ಲದಕ್ಕಿಂತ ಪ್ರಮುಖ ಗುರಿ ಎಂದು ಬೈಡೆನ್ ಹೇಳಿಕೊಂಡಿರುವುದರಿಂದ ಮತ್ತು ತಾವು ತಜ್ಞರ ಮಾತನ್ನು ಮಾತ್ರ ಕೇಳುವುದಾಗಿ ಹೇಳಿರುವುದರಿಂದ ಆ ತಜ್ಞರ ಸಮಿತಿಗೆ ಮೂರ್ತಿ ನೇಮಕಗೊಳ್ಳುವ ಮೂಲಕ ಅವರಿಗೆ ಮತ್ತೆ ಮಹತ್ವದ ಹುದ್ದೆ ದೊರಕಿದಂತಾಗಿದೆ.