ಹೆಚ್ಚಿನ ರ‍್ಯಾಂಕ್‌ ಪಡೆಯಲು ಅಧಿಕಾರಿಗಳಿಗೆ ಹಣ ಉದ್ಯಮ ಸ್ನೇಹಿ ದೇಶ ರ‍್ಯಾಂಕಿಂಗ್‌ ಬಿಡುಗಡೆ ಸ್ಥಗಿತ

ನವದೆಹಲಿ(ಸೆ.18): ಉದ್ಯಮಸ್ನೇಹಿ ರಾಷ್ಟ್ರಗಳ ರ‍್ಯಾಂಕಿಂಗ್‌ ಪಟ್ಟಿಬಿಡುಗಡೆ ನಿಲ್ಲಿಸಲು ವಿಶ್ವಬ್ಯಾಂಕ್‌ ನಿರ್ಧಾರ ಕೈಗೊಂಡಿದೆ. ವರದಿ ತಯಾರಿಕೆ ವೇಳೆ 2017ರಲ್ಲಿ ಚೀನಾ ಪರ ಲಾಬಿ ಮಾಡಿ ಅಕ್ರಮ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಹಿನ್ನೆಲೆಯಲ್ಲಿ ಬ್ಯಾಂಕ್‌ ಈ ನಿರ್ಧಾರ ಕೈಗೊಂಡಿದೆ.

ಇದರ ಬೆನ್ನಲ್ಲೇ ಭಾರತ ಪ್ರತಿಕ್ರಿಯೆ ನೀಡಿದ್ದು, ‘ಚೀನಾ ಹೇಗೆ ವಂಚನೆಯ ಮಾರ್ಗದ ಮೂಲಕ ವ್ಯವಹಾರ ನಡೆಸುತ್ತಿದೆ ಎಂಬುದು ಇದರಿಂದ ಸಾಬೀತಾಗಿದೆ. ಇನ್ನು ಉದ್ದಿಮೆಗಳು ನಿಧಾನವಾಗಿ ಭಾರತದತ್ತ ತಮ್ಮ ಗಮನ ಹರಿಸಲಿವೆ’ ಎಂದು ಪ್ರತಿಕ್ರಿಯಿಸಿದೆ.

ಏನಿದು ಅಕ್ರಮ?:

2017ರಲ್ಲಿ ಕೆಲವು ಬ್ಯಾಂಕ್‌ ಅಧಿಕಾರಿಗಳು ಒತ್ತಡಕ್ಕೆ ಮಣಿದು ಚೀನಾ ಪರ ಕೆಲಸ ಮಾಡಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ. 2018ರಿಂದ 2020ರವರೆಗಿನ ವರದಿಯಲ್ಲಿನ ದತ್ತಾಂಶಗಳಲ್ಲಿ ಹೆಚ್ಚೂ ಕಡಿಮೆ ಆಗಿದ್ದು ಗೊತ್ತಾಗಿದೆ. ಚೀನಾದ ರ‍್ಯಾಂಕಿಂಗ್‌ ಹೆಚ್ಚು ಮಾಡಲು ಅವರು ಕೃತ್ಯ ಎಸಗಿದ್ದರು ಎಂದು ಹೇಳಲಾಗಿದೆ.

ಈ ಆರೋಪದ ಬಗ್ಗೆ ಇದ್ದ ಎಲ್ಲ ಮಾಹಿತಿಗಳನ್ನು ಪರಿಶೀಲಿಸಿದ ನಂತರ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಬಿಡುಗಡೆ ಮಾಡುವುದನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ. ಇನ್ನು ಮುಂದೆ ಹೊಸ ದೃಷ್ಟಿಕೋನದಲ್ಲಿ ಕೆಲಸ ಮಾಡಲಿದ್ದೇವೆ ಎಂದು ವಿಶ್ವಬ್ಯಾಂಕ್‌ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.

ಭಾರತದ ಆಕ್ರೋಶ:

ಚೀನಾ ತನ್ನನ್ನು ತಾನು ಉದ್ಯಮ ಸ್ನೇಹಿ ಎಂದು ಬಿಂಬಿಸಿಕೊಳ್ಳಲು ಈ ಕೃತ್ಯ ಎಸಗಿದ್ದು ಸಾಬೀತಾಗಿದೆ. ಆದರೆ ಭಾರತದ ದತ್ತಾಂಶಗಳಲ್ಲಿ ಯಾವುದೇ ಅಕ್ರಮ ನಡೆದಿಲ್ಲ. ಭಾರತವು ವಿಶ್ವದ ವಿಶ್ವಾಸಾರ್ಹ ಉದ್ಯಮ ಸ್ನೇಹಿ ದೇಶವಾಗಿದೆ. ಚೀನಾದ ವಂಚನೆ ಬೆಳಕಿಗೆ ಬಂದ ಕಾರಣ ಇನ್ನು ಉದ್ಯಮಗಳು ಭಾರತದತ್ತ ತಮ್ಮ ದೃಷ್ಟಿಹರಿಸಲಿವೆ ಎಂದು ಭಾರತ ಸರ್ಕಾರದ ಮೂಲಗಳು ಹೇಳಿವೆ.

2020ರ ಔದ್ಯಮಿಕ ಸ್ನೇಹಿ ದೇಶಗಳ ಪಟ್ಟಿಯಲ್ಲಿ ಭಾರತ 14 ಸ್ಥಾನ ಜಿಗಿದು 63ನೇ ಸ್ಥಾನ ಪಡೆದಿತ್ತು. 2014ರಿಂದ 19ರ ನಡುವಿನ ಅವಧಿಯಲ್ಲಿ ಭಾರತ 79 ಸ್ಥಾನ ಸುಧಾರಿಸಿಕೊಂಡಿದೆ.