ಲಂಕಾ ಬಿಕ್ಕಟ್ಟು ನಿರ್ವಹಣೆಗೆ ಸೇನೆ ರವಾನೆ ಇಲ್ಲ: ಭಾರತ ಸ್ಪಷ್ಟನೆ

* ಮಹಿಂದಾ ಭಾರತದಲ್ಲಿದ್ದಾರೆ ಎನ್ನುವ ಆರೋಪ ಸುಳ್ಳು

* ಲಂಕಾ ಬಿಕ್ಕಟ್ಟು ನಿರ್ವಹಣೆಗೆ ಸೇನೆ ರವಾನೆ ಇಲ್ಲ: ಭಾರತ ಸ್ಪಷ್ಟನೆ

* ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಷನ್‌ ಹೇಳಿಕೆ

India Refutes Reports Of Sending Troops To Sri Lanka pod

ಕೊಲೊಂಬೋ(ಜು.12): ಶ್ರೀಲಂಕಾದ ಬಿಕ್ಕಟ್ಟು ನಿರ್ವಹಣೆಗೆ ಭಾರತದಿಂದ ಸೇನೆಯನ್ನು ಕೊಲೊಂಬೊಗೆ ರವಾನಿಸಲಿದೆ ಎಂಬುದು ಕೇವಲ ಊಹಾಪೋಹವಾಗಿದ್ದು, ಇಂತಹ ಯಾವುದೇ ಬೆಳವಣಿಗೆಗಳು ನಡೆದಿಲ್ಲ ಎಂದು ಶ್ರೀಲಂಕಾದಲ್ಲಿರುವ ಭಾರತದ ಹೈ ಕಮಿಷನ್‌ ಕಚೇರಿ ಸೋಮವಾರ ಸ್ಪಷ್ಟಪಡಿಸಿದೆ.

ಆರ್ಥಿಕ ಬಿಕ್ಕಟಿನಿಂದಾಗಿ ಉದ್ರಿಕ್ತ ಜನತೆಯು ಶನಿವಾರ ಅಧ್ಯಕ್ಷ ಗೊಟಬಯ ರಾಜಪಕ್ಸೆ ಅವರ ಅಧಿಕೃತ ನಿವಾಸ ಹಾಗೂ ಪ್ರಧಾನಿ ರನಿಲ್‌ ವಿಕ್ರಮಸಿಂಘೆ ಅವರ ನಿವಾಸಕ್ಕೆ ಮುಗಿಬಿದ್ದಿದ್ದರು. ಈ ಹಿನ್ನೆಲೆಯಲ್ಲಿ ಬಿಜೆಪಿ ನಾಯಕ ಸುಬ್ರಮಣ್ಯ ಸ್ವಾಮಿ ‘ರಾಜಪಕ್ಸೆ ಅವರಿಗೆ ಸೇನಾ ನೆರವು ಬೇಕಾಗಿದ್ದರೆ ಭಾರತ ನೀಡಲು ಮುಂದಾಗಬೇಕು’ ಎಂದು ಟ್ವೀಟ್‌ ಮಾಡಿದ್ದರು. ಇದರ ಬೆನ್ನಲ್ಲೇ ಬಿಕ್ಕಟ್ಟನ್ನು ನಿರ್ವಹಿಸಲು ಭಾರತ ಸರ್ಕಾರ ತನ್ನ ಸೇನೆಯನ್ನು ಕಳುಹಿಸಲಿದೆ ಎನ್ನುವ ಪೋಸ್ಟ್‌ಗಳು ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದವು.

ಇದನ್ನು ಸಂಪೂರ್ಣವಾಗಿ ನಿರಾಕರಿಸಿದ ಹೈ ಕಮಿಷನ್‌ ‘ಪ್ರಜಾಸತ್ತಾತ್ಮಕ ವಿಧಾನಗಳು ಮತ್ತು ಮೌಲ್ಯಗಳು, ಸ್ಥಾಪಿತ ಸಂಸ್ಥೆಗಳು ಮತ್ತು ಸಾಂವಿಧಾನಿಕ ಚೌಕಟ್ಟಿನ ಮೂಲಕ ಸಮೃದ್ಧಿ ಮತ್ತು ಪ್ರಗತಿಯ ಆಕಾಂಕ್ಷೆಗಳನ್ನು ಸಾಧಿಸಲು ಪ್ರಯತ್ನಿಸುತ್ತಿರುವ ಶ್ರೀಲಂಕಾದ ಜನರೊಂದಿಗೆ ಭಾರತ ನಿಂತಿದೆ ಎಂದು ಭಾರತದ ವಿದೇಶಾಂಗ ಸಚಿವಾಲಯ ಹೇಳಿಕೆ ನೀಡಿದೆ. ಆದರೆ ಸೇನೆ ರವಾನಿಸುವಂತಹ ಯಾವುದೇ ಬೆಳವಣಿಗೆ ನಡೆದಿಲ್ಲ’ ಎಂದು ಸ್ಪಷ್ಟಪಡಿಸಿದೆ.

ಅಲ್ಲದೇ ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸೆ ಹಾಗೂ ಅವರ ಕುಟುಂಬ ಭಾರತದಲ್ಲಿ ನೆಲೆಸಿದೆ ಎನ್ನುವ ಊಹಾಪೋಹಗಳು ಸುಳ್ಳು ಎಂದು ತಿಳಿಸಿದೆ.

ಲಂಕಾ ಅಧ್ಯಕ್ಷ ಗೊಟಬಯ ವಿದೇಶಕ್ಕೆ ಪರಾರಿ?

 

 ಸಮಸ್ಯೆಯ ಸುಳಿಗೆ ಸಿಲುಕಿಕೊಂಡಿರುವ ಶ್ರೀಲಂಕಾದ ಅಧ್ಯಕ್ಷ ಗೊಟಬಯ ರಾಜಪಕ್ಸ ಅವರು ಸೋಮವಾರ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ವಾಯುನೆಲೆಯೊಂದಕ್ಕೆ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಗೊಟಬಯ ಅವರು ವಿದೇಶಕ್ಕೆ ಪರಾರಿಯಾಗಲು ಸಿದ್ಧತೆ ನಡೆಸಿದ್ದಾರೆ ಎಂಬ ವದಂತಿ ಹರಿದಾಡುತ್ತಿದೆ.

ಬಂಡಾರನಾಯಿಕೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಇರುವ ವಾಯುನೆಲೆಗೆ ಸ್ಥಳಾಂತರವಾಗುವ ಮೊದಲು ಗೊಟಬಯ ಅವರು ನೌಕಾನೆಲೆಯೊಂದರಲ್ಲಿ ಆಶ್ರಯ ಪಡೆದುಕೊಂಡಿದ್ದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಈ ಕುರಿತಾಗಿ ಅಧ್ಯಕ್ಷರ ಕಚೇರಿಯಿಂದ ಯಾವುದೇ ಅಧಿಕೃತ ಹೇಳಿಕೆಗಳು ಹೊರಬಿದ್ದಿಲ್ಲ. ಆದರೂ ಗೊಟಬಯ ಅವರು ದುಬೈಗೆ ಪರಾರಿಯಾಗಲು ಸಿದ್ಧತೆ ನಡೆಸಿದ್ದಾರೆ ಎಂದು ಹಲವು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಶನಿವಾರ ನಡೆದ ಜನತಾ ದಂಗೆಯ ನಂತರ ಗೊಟಬಯ ಅರಮನೆ ತೊರೆದು ಅವಿತುಕೊಂಡಿದ್ದರು. ಇದಾದ ಕೆಲವು ಗಂಟೆಗಳ ನಂತರ ಬುಧವಾರ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದರು.

Latest Videos
Follow Us:
Download App:
  • android
  • ios