ಇರಾನ್‌ನ ತೈಲ ಸಾಗಿಸಿದ 2 ಭಾರತೀಯ ಕಂಪನಿಗಳ ಮೇಲೆ ಅಮೆರಿಕ ನಿರ್ಬಂಧ

ಅಮೆರಿಕ ಇರಾನ್‌ನ ತೈಲ ಸಾಗಿಸುವ ಭಾರತದ ಎರಡು ಕಂಪನಿಗಳ ಮೇಲೆ ನಿರ್ಬಂಧ ವಿಧಿಸಿದೆ. 

India Feels Heat as US Sanctions 2 Indian Companies for Trading with Iran

ವಾಷಿಂಗ್ಟನ್‌: ಇಸ್ರೇಲ್‌ ವಿರುದ್ಧದ ಯುದ್ಧಕ್ಕೆ ನೇರವಾಗಿ ಧುಮುಕಿರುವ ಇರಾನ್‌ಗೆ ಆರ್ಥಿಕವಾಗಿ ಪೆಟ್ಟು ಕೊಡುವ ಸಲುವಾಗಿ ಇದೀಗ ಇರಾನ್‌ನ ತೈಲವನ್ನು ಇತರೆ ದೇಶಗಳಿಗೆ ಸಾಗಿಸುತ್ತಿದ್ದ ಭಾರತದ 2 ಕಂಪನಿಗಳು ಸೇರಿದಂತೆ 35 ಕಂಪನಿಗಳು ಹಾಗೂ ಹಡುಗಗಳ ಮೇಲೆ ಅಮೆರಿಕ ನಿರ್ಬಂಧ ವಿಧಿಸಿದೆ. ಭಾರತದ ವಿಷನ್‌ ಶಿಪ್‌ ಮ್ಯಾನೇಜ್ಮೆಂಟ್‌, ಟೈಟ್‌ಶಿಪ್‌ ಶಿಪ್ಪಿಂಗ್‌ ಮ್ಯಾನೇಜ್ಮೆಂಟ್‌ ಪ್ರೈವೆಟ್‌ ಲಿ. ನಿರ್ಬಂಧಕ್ಕೊಳಗಾದ ಕಂಪನಿಗಳು. ಉಳಿದಂತೆ ಯುಎಇ, ಚೀನಾ, ಲೈಬೀರಿಯಾ, ಹಾಂಗ್‌ಕಾಂಗ್‌ನ ಕಂಪನಿಗಳೂ ಈ ಪಟ್ಟಿಯಲ್ಲಿವೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಅಮೆರಿಕದ ಖಜಾನೆ ಇಲಾಖೆ, ತೈಲದಿಂದ ಬರುವ ಆದಾಯವನ್ನು ಇರಾನ್‌ ತನ್ನ ಪರಮಾಣು, ಡ್ರೋನ್‌, ಮಿಸೈಲ್‌ ಅಭಿವೃದ್ಧಿ ಹಾಗೂ ಉಗ್ರರಿಗೆ ನೆರವು ನೀಡಲು ಬಳಸುತ್ತಿದ್ದು, ಇದೀಗ ಈ ನಿರ್ಬಂಧದಿಂದಾಗಿ ಅದರ ಪೆಟ್ರೋಲಿಯಂ ಕ್ಷೇತ್ರದ ಮೇಲೆ ಹೆಚ್ಚು ವೆಚ್ಚವನ್ನು ಹೇರಿದಂತಾಗುತ್ತದೆ ಎಂದು ತಿಳಿಸಿದೆ.

8ನೇ ವೇತನ ಆಯೋಗ ರಚನೆ ಪ್ರಸ್ತಾಪ ಇಲ್ಲ: ಕೇಂದ್ರ

ನವದೆಹಲಿ: 8 ನೇ ವೇತನ ಆಯೋಗವನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ ಎಂದು ಕೇಂದ್ರ ಹಣಕಾಸು ಸಚಿವಾಲಯ ದೃಢಪಡಿಸಿದೆ. ಇದರಿಂದ 8ನೇ ಆಯೋಗ ಸ್ಥಾಪನೆ ಆಗಬಹುದು ಎಂದು ಕಾದಿದ್ದ 1 ಕೋಟಿಗೂ ಹೆಚ್ಚು ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ದೊಡ್ಡ ನಿರಾಸೆ ಆಗಿದೆ.2025-26ರ ಬಜೆಟ್‌ನಲ್ಲಿ 8ನೇ ವೇತನ ಆಯೋಗ ರಚನೆ ಪ್ರಸ್ತಾಪ ಇರಲಿದೆಯೇ ಎಂದು ಕೆಲವು ಸದಸ್ಯರು ಪ್ರಶ್ನೆ ಕೇಳಿದ್ದರು. ಇದಕ್ಕೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯಿಸಿದ ಹಣಕಾಸು ಖಾತೆ ರಾಜ್ಯ ಸಚಿವ ಪಂಕಜ್ ಚೌಧರಿ, ‘ಆಯೋಗದ ರಚನೆಗೆ ಪ್ರಸ್ತುತ ಯಾವುದೇ ಪ್ರಸ್ತಾವನೆಯು ಪರಿಗಣನೆಯಲ್ಲಿಲ್ಲ’ ಎಂದು ಸ್ಪಷ್ಟವಾಗಿ ಹೇಳಿದರು.

ತಾಂತ್ರಿಕ ಸಮಸ್ಯೆ: ಪ್ರೋಬಾ-3 ಉಪಗ್ರಹ ಉಡಾವಣೆ ಇಂದಿಗೆ ಮುಂದೂಡಿಕೆ

ಶ್ರೀಹರಿಕೋಟಾ: ಬುಧವಾರ ಉಡಾವಣೆ ಮಾಡಬೇಕಿದ್ದ ಯುರೋಪ್‌ನ ಪ್ರೋಬಾ- 3 ಉಪಗ್ರಹದಲ್ಲಿ ಕೆಲವು ತಾಂತ್ರಿಕ ಸಮಸ್ಯೆ ಕಂಡು ಬಂದ ಹಿನ್ನೆಲೆಯಲ್ಲಿ ಈ ಉಪಗ್ರಹ ಉಡಾವಣೆಯನ್ನು ಇಸ್ರೋ ಗುರುವಾರಕ್ಕೆ ಮಂದೂಡಿದೆ.ಶ್ರೀಹರಿಕೋಟಾದ ಸತೀಶ್‌ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯುರೋಪಿಯನ್ ಬಾಹ್ಯಾಕಾಶ ಸಂಸ್ಥೆಯ ಪ್ರೋಬಾ-3 ಉಪಗ್ರಹವನ್ನು ಬುಧವಾರ ಸಂಜೆ 4.08ಕ್ಕೆ ಉಪಗ್ರಹ ಉಡಾವಣೆ ಮಾಡಲು ಯೋಜಿಸಿತ್ತು. ಆದರೆ ಪ್ರೋಬಾ- 3ಯಲ್ಲಿ ವೈಪರಿತ್ಯ ಪತ್ತೆ ಹಿನ್ನೆಲೆ ಗುರುವಾರ ಸಂಜೆ 4.12ಕ್ಕೆ ಉಡಾವಣೆ ಮಾಡಲಾಗುವುದು ಎಂದು ಇಸ್ರೋ ಹೇಳಿದೆ.

ಪ್ರೋಬಾ- 3 ಎರಡು ಉಪಗ್ರಹಗಳನ್ನು ಹೊಂದಿದೆ. 2 ರಾಕೆಟ್‌ಗಳು ಒಟ್ಟಿಗೆ ಹಾರುತ್ತವೆ. ಸೂರ್ಯನ ಹೊರಗಿನ ವಾತಾವರಣವನ್ನು ಅಧ್ಯಯನ ಮಾಡಲು ಒಂದೇ ಮಿಲಿಮೀಟರ್‌ರವರಗೆ ನಿಖರವಾದ ರಚನೆಯನ್ನು ಹೊಂದಿರುತ್ತದೆ. ‘ಪ್ರೋಬಾಸ್‌’ ಮೂಲತಃ ಲ್ಯಾಟಿನ್ ಪದವಾಗಿದ್ದು, ಇದರ ಅರ್ಥ ‘ಪ್ರಯತ್ನಿಸೋಣ’.

ಯುಪಿಐ ಲೈಟ್‌ ಮಿತಿ 2000 ರು.ನಿಂದ ₹5000ಕ್ಕೆ ಏರಿಕೆ

ನವದೆಹಲಿ: ಭೀಮ್ ಯುಪಿಐ ಲೈಟ್‌ ಆ್ಯಪ್‌ ಮಿತಿಯನ್ನು ರಿಸರ್ವ್‌ ಬ್ಯಾಂಕ್‌ ಬುಧವಾರ 2000 ರು.ನಿಂದ 5000 ರು.ಗೆ ಏರಿಸಿದೆ. ಜೊತೆಗೆ ಪ್ರತಿ ಪಾವತಿ ಮಿತಿಯನ್ನು 500 ರು.ನಿಂದ 1000 ರು.ಗೆ ಏರಿಕೆ ಮಾಡಿದೆ.ಪ್ರಸ್ತುತ ಯುಪಿಐ ಲೈಟ್‌ ಆಫ್ಲೈನ್‌ ಪಾವತಿಯಲ್ಲಿ ಒಟ್ಟು ಮಿತಿಯು 2000 ರು. ಇದ್ದು, ಪ್ರತಿ ಪಾವತಿ ಮಿತಿಯು 500 ಇದೆ. ಇವುಗಳನ್ನು ಏರಿಕೆ ಮಾಡಿ ಜನರಿಗೆ ಆರ್‌ಬಿಐ ಅನುಕೂಲ ಮಾಡಿದೆ.

ಆಫ್ಲೈನ್‌ ಪಾವತಿಗೆ ಯಾವುದೇ ಇಂಟರ್ನೆಟ್‌ ಅಗತ್ಯವಿರುವುದಿಲ್ಲ. ಇದರಿಂದಾಗಿ ಸರ್ವರ್‌ ಸಮಸ್ಯೆಯೂ ಇರುವುದಿಲ್ಲ. ಈ ಸೇವೆಯು ಸಣ್ಣ ಪಾವತಿಗಳಿಗೆ ತುಂಬಾ ಅನುಕೂಲವಾಗುತ್ತದೆ.

ರೈಲ್ವೆ ಟಿಕೆಟ್‌ ಮೇಲೆ ಪ್ರತಿ ವರ್ಷ ₹56,993 ಕೋಟಿ ರು. ಸಬ್ಸಿಡಿ

ಪಿಟಿಐ ನವದೆಹಲಿಭಾರತೀಯ ರೈಲ್ವೆಯು ಎಲ್ಲ ವರ್ಗದ ಪ್ರಯಾಣಿಕರಿಗೆ ಪ್ರತಿ ವರ್ಷ ಪ್ರತಿ ಟಿಕೆಟ್‌ ಮೇಲೆ ಶೇ.46 ರಿಯಾಯಿತಿಯೊಂದಿಗೆ ಒಟ್ಟು 56,993 ಕೋಟಿ ರು. ಸಬ್ಸಿಡಿ ನೀಡುತ್ತಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ಬುಧವಾರ ಹೇಳಿದ್ದಾರೆ.

ಲೋಕಸಭೆಯಲ್ಲಿ ಪ್ರಶ್ನೋತ್ತರ ಅವಧಿಯಲ್ಲಿ ರೈಲ್ವೆ ಪ್ರಯಾಣಿಕರಿಗೆ ನೀಡುತ್ತಿದ್ದ ರಿಯಾಯಿತಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳಿಗೆ ಉತ್ತರಿಸಿದ ಅವರು ‘ಒಂದು ವೇಳೆ ಟಿಕೆಟ್‌ ದರ 100 ರು. ಇದ್ದರೆ ರೈಲ್ವೆಯು ಶೇ.46 ರಿಯಾಯಿತಿಯೊಂದಿಗೆ ಕೇವಲ 54 ರು. ಮಾತ್ರ ವಿಧಿಸುತ್ತದೆ’ ಎಂದು ಉದಾಹರಿಸಿದರು.ಇದೇ ವೇಳೆ, ಎಸಿ1, ಎಸಿ2, ಎಸಿ3 ಗಿಂತ ಹೆಚ್ಚಾಗಿ ಸಾಮಾನ್ಯ ಕಂಪಾರ್ಟ್‌ಮೆಂಟ್ ಕೋಚ್‌ಗಳನ್ನು ಹೆಚ್ಚಿಸಲು ರೈಲ್ವೆ ಹೆಚ್ಚು ಗಮನಹರಿಸಿದೆ ಮತ್ತು ಡಿಸೆಂಬರ್ ಅಂತ್ಯದ ವೇಳೆಗೆ ಅಂತಹ 1,000 ಕೋಚ್‌ಗಳನ್ನು ಸೇರಿಸಲಾಗುವುದು ಎಂದು ಸಚಿವರು ಉತ್ತರಿಸಿದರು.

ಇದೇ ವೇಳೆ ಹಲವು ಸದಸ್ಯರು ಹಿರಿಯ ನಾಗರಿಕರ ಟಿಕೆಟ್‌ ರಿಯಾಯ್ತಿ ಮರುಜಾರಿಗೆ ಆಗ್ರಹಿಸಿದರು

Latest Videos
Follow Us:
Download App:
  • android
  • ios