ನವದೆಹಲಿ(ಫೆ.25): ಎಲೆಕ್ಟ್ರಿಕ್‌ ಕಾರು, ಸ್ಕೂಟರ್‌ಗಳ ಮಾರಾಟ ಹೆಚ್ಚಳವಾಗುತ್ತಿದ್ದಂತೆ, ವಿಶ್ವದ ಮೊದಲ ಬ್ಯಾಟರಿ ಚಾಲಿತ ರೈಲು ಲೋಕೋಮೋಟಿವ್‌ (ಎಂಜಿನ್‌) ನಿರ್ಮಾಣ ಕಾರ್ಯವೊಂದು ಸದ್ದಿಲ್ಲದೆ ಅಮೆರಿಕದಲ್ಲಿ ನಡೆಯುತ್ತಿದೆ. ಈ ಬ್ಯಾಟರಿ ಚಾಲಿತ ರೈಲು ಎಂಜಿನ್‌ ಉತ್ಪಾದನೆಯಾಗುತ್ತಿರುವುದು ಅಮೆರಿಕದಲ್ಲಿ. ಆದರೆ ಅದರ ಬಹುಪಾಲು ವಿನ್ಯಾಸ ನಡೆದಿರುವುದು ಭಾರತದಲ್ಲಿ. ಅದರಲ್ಲೂ ಬ್ಯಾಟರಿಯ ವಿನ್ಯಾಸ, ಪರೀಕ್ಷೆ ನಡೆಯುತ್ತಿರುವುದು ಬೆಂಗಳೂರಿನಲ್ಲಿ ಎಂಬುದು ಗಮನಾರ್ಹ.

ವಿಶ್ವದ ಶ್ರೀಮಂತ ಹೂಡಿಕೆದಾರ ಎನಿಸಿಕೊಂಡಿರುವ ವಾರನ್‌ ಬಫೆಟ್‌ ಅವರ ಬರ್ಕ್ಶೈರ್‌ ಹಾಥವೇ ಕಂಪನಿಯ ಮಾಲೀಕತ್ವದ ಬಿಎನ್‌ಎಸ್‌ಎಫ್‌ ರೈಲ್ವೆ ಕಂಪನಿಯ ಜತೆಗೂಡಿ ಅಮೆರಿಕದ ವ್ಯಾಬ್‌ಟೆಕ್‌ ಸಂಸ್ಥೆ ಬ್ಯಾಟರಿಚಾಲಿತ ಲೋಕೋಮೋಟಿವ್‌ ಉತ್ಪಾದಿಸುತ್ತಿದೆ. ಸರಕು ಸಾಗಣೆ ರೈಲಿನಲ್ಲಿ ಈ ತಂತ್ರಜ್ಞಾನದ ಪರೀಕ್ಷೆ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನಡೆಯುತ್ತಿದೆ. ಮಾಚ್‌ರ್‍ನಲ್ಲಿ ವರದಿ ಬರುವ ನಿರೀಕ್ಷೆ ಇದೆ. ಅಮೆರಿಕದಲ್ಲಿ ಬ್ಯಾಟರಿ ಚಾಲಿತ ಎಂಜಿನ್‌ ಉತ್ಪಾದನೆ ನಡೆಯುತ್ತಿದ್ದರೂ, ಬಹುತೇಕ ಭಾಗದ ವಿನ್ಯಾಸ ಭಾರತದಲ್ಲಿ ನಡೆದಿದೆ ಎಂದು ವ್ಯಾಬ್‌ಟೆಕ್‌ ಕಂಪನಿ ಭಾರತೀಯ ಘಟಕದ ಉಪಾಧ್ಯಕ್ಷ ಗೋಪಾಲಕೃಷ್ಣ ಮದಭೂಷಿ ಅವರು ತಿಳಿಸಿದ್ದಾರೆ.

ಒಂದು ಸಾವಿರ ಟನ್‌ ಸರಕನ್ನು ಸಾಗಿಸುವ ಸಾಮರ್ಥ್ಯವನ್ನು ಈ ಬ್ಯಾಟರಿ ಲೋಕೋಮೋಟಿವ್‌ ಹೊಂದಿರಲಿದೆ. ಭಾರತದಲ್ಲಿ 1200 ಹಾಗೂ ವಿಶ್ವಾದ್ಯಂತ 5000 ಜನರು ಇದರ ವಿನ್ಯಾಸ, ಪರೀಕ್ಷಾ ತಂಡದಲ್ಲಿದ್ದಾರೆ. 20 ಸಾವಿರ ಬ್ಯಾಟರಿ ಸೆಲ್‌ಗಳನ್ನು ಈ ರೈಲು ಹೊಂದಿರುತ್ತದೆ. ಬೆಂಗಳೂರಿನ ಕೇಂದ್ರ ಅದರ ವಿನ್ಯಾಸ ಮಾಡುತ್ತಿದೆ. ಬ್ಯಾಟರಿಯನ್ನು ಹಿಡಿದಿಡುವ ಕ್ಯಾಬ್‌ ವಿನ್ಯಾಸ, ಕೆಪಾಸಿಟ​ರ್‍ಸ್, ಫಿಲ್ಟರ್‌ ಹಾಗೂ ಹಾರ್ಮೋನಿಕ್ಸ್‌ಗಳ ಪರೀಕ್ಷೆಯನ್ನು ಬೆಂಗಳೂರಿನಲ್ಲಿ ನಡೆಸಲಾಗುತ್ತಿದೆ ಎಂದು ವಿವರಿಸಿದ್ದಾರೆ.