Asianet Suvarna News Asianet Suvarna News

ಬಾಲಾಕೋಟ್‌ ಏರ್‌ಸ್ಟ್ರೈಕ್ ನಿಜ, ಒಪ್ಪಿಕೊಂಡ ಪಾಕಿಸ್ತಾನ: ರಾಹುಲ್‌, ಕೇಜ್ರಿಗೆ ಮುಖಭಂಗ!

* ಭಾರತ ನಮ್ಮ ದೇಶದ ಬಾಲಾಕೋಟ್‌ ಪ್ರದೇಶದ ಮೇಲೆ ವಾಯುದಾಳಿ ನಡೆಸಿದ್ದು ನಿಜ 

* ನೀವು ಸಾಕ್ಷ್ಯ ಕೇಳಿದರೆ ಬಾಂಬ್‌ ಹಾಕಿದರು: ಇಮ್ರಾನ್‌

* ದಾಳಿಗೆ ಸಾಕ್ಷ್ಯ ಕೇಳಿದ್ದ ರಾಹುಲ್‌, ಕೇಜ್ರಿಗೆ ಮುಖಭಂಗ

India bombed Pakistan after Pulwama; operates like Israel Says Imran Khan pod
Author
Bangalore, First Published Oct 12, 2021, 7:59 AM IST

ನವದೆಹಲಿ(ಅ.12): ಜಮ್ಮು ಮತ್ತು ಕಾಶ್ಮೀರದ(Jammu Kashmir) ಪುಲ್ವಾಮಾದಲ್ಲಿ(Pulwama) ನಡೆದ ಉಗ್ರರ ಆತ್ಮಾಹುತಿ ದಾಳಿಗೆ 40 ಯೋಧರು ಹತರಾಗಿದ್ದಕ್ಕೆ ಪ್ರತೀಕಾರವಾಗಿ ಭಾರತ(India) ನಮ್ಮ ದೇಶದ ಬಾಲಾಕೋಟ್‌(Balakot) ಪ್ರದೇಶದ ಮೇಲೆ ವಾಯುದಾಳಿ(Airstrike) ನಡೆಸಿದ್ದು ನಿಜ ಎಂದು ಸ್ವತಃ ಪಾಕಿಸ್ತಾನದ ಪ್ರಧಾನಿ ಇಮ್ರಾನ್‌ ಖಾನ್‌(Pakistan PM Imran Khan) ಒಪ್ಪಿಕೊಂಡಿದ್ದಾರೆ. ದಾಳಿಯ ಕುರಿತು ಸ್ವತಃ ಇಮ್ರಾನ್‌ ಖಾನ್‌ ನೀಡಿರುವ ಈ ಹೇಳಿಕೆಯು, ಭಾರತೀಯ ವಾಯುಪಡೆಯ(Indian Air Force) ಸಾಹಸಕ್ಕೆ ಸಾಕ್ಷ್ಯ ಕೇಳಿದ್ದ ವಿಪಕ್ಷ ನಾಯಕರಾದ ರಾಹುಲ್‌ ಗಾಂಧಿ(rahul gandhi) ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್‌(Delhi CM Arvind Kejriwal) ಮುಂತಾದವರಿಗೆ ಮುಖಭಂಗ ಉಂಟುಮಾಡಿದೆ.

‘ಮಿಡಲ್‌ ಈಸ್ಟ್‌ ಐ’ ಎಂಬ ಸುದ್ದಿವಾಹಿನಿಗೆ ಸಂದರ್ಶನ ನೀಡಿರುವ ಇಮ್ರಾನ್‌ ಖಾನ್‌, ‘ಕಾಶ್ಮೀರದಲ್ಲಿ(kashmir) ಸಣ್ಣದೊಂದು ತಿಕ್ಕಾಟವಾಗಿತ್ತು. ಅಲ್ಲಿ ಆತ್ಮಾಹುತಿ ದಾಳಿಯೊಂದು ನಡೆದು ಭಾರತದ ಹಲವು ಯೋಧರು ಸಾವನ್ನಪ್ಪಿದ್ದರು. ಅವರು ಘಟನೆಗೆ ನಮ್ಮನ್ನೇ ಹೊಣೆಯನ್ನಾಗಿಸಿದ್ದರು. ಆದರೆ, ನಾವು ಪದೇ ಪದೇ ದಾಳಿಕೋರರ ಕುರಿತು ಸಾಕ್ಷ್ಯ ಕೊಡಿ, ನಾವು ಅವರನ್ನು ಸೆರೆಹಿಡಿದು ಶಿಕ್ಷಿಸುತ್ತೇವೆ, ಬೇಕಿದ್ದರೆ ನಿಮಗೆ ಹಸ್ತಾಂತರ ಮಾಡುತ್ತೇವೆ ಎಂದು ಭರವಸೆ ನೀಡಿದ್ದೆವು. ಆದರೆ ನಮಗೆ ಸಾಕ್ಷ್ಯ ನೀಡುವ ಬದಲು ಅವರು (ಭಾರತ) ನಮ್ಮ ಮೇಲೆ ಬಾಂಬ್‌ ದಾಳಿ ನಡೆಸಿದರು’ ಎಂದು ಹೇಳಿದ್ದಾರೆ.

‘ಭಾರತದ(India) ದಾಳಿಗೆ ಪಾಕಿಸ್ತಾನ(Pakistan) ಕೂಡಾ ತಿರುಗೇಟು ನೀಡಿ, ಭಾರತದ ವಿಮಾನವೊಂದನ್ನು ಹೊಡೆದು ಉರುಳಿಸಿತು. ಆದರೆ ಯಾವುದೇ ಹಂತ ತಲುಪಬಹುದಾಗಿದ್ದ ಪರಿಸ್ಥಿತಿಯನ್ನು ಶಾಂತವಾಗಿಸಲು ಅವರ ಪೈಲಟ್‌ ಅನ್ನು ಸುರಕ್ಷಿತವಾಗಿ ಅವರಿಗೆ ಮರಳಿಸಿದೆವು’ ಎಂದು ಹೇಳುವ ಮೂಲಕ ಭಾರತ ಬಾಲಾಕೋಟ್‌ನ ಉಗ್ರತಾಣಗಳ ಮೇಲೆ ದಾಳಿ ನಡೆಸಿದ ಘಟನೆಯನ್ನು ಬಹಿರಂಗವಾಗಿಯೇ ಒಪ್ಪಿಕೊಂಡಿದ್ದಾರೆ.

ಜೊತೆಗೆ ಪರಮಾಣು ಶಕ್ತಿ ಹೊಂದಿರುವ ಎರಡು ದೇಶಗಳು ಇಂಥ ಸ್ಥಿತಿಯನ್ನು ಎದುರಿಸಿದಾಗ ಪರಿಸ್ಥಿತಿ ಯಾವುದೇ ಹಂತವನ್ನು ಬೇಕಾದರೂ ತಲುಪಬಹುದು ಎನ್ನುವ ಮೂಲಕ, ಭಾರತ ನಡೆಸಿದ ಬಾಲಾಕೋಟ್‌ ದಾಳಿ ಉಭಯ ದೇಶಗಳ ನಡುವಿನ ಪರಮಾಣು ಬಾಂಬ್‌ ದಾಳಿಗೂ ಕಾರಣವಾಗಬಲ್ಲದಾಗಿತ್ತು ಎಂದು ಪರೋಕ್ಷವಾಗಿ ಭಾರತಕ್ಕೆ ಎಚ್ಚರಿಕೆ ನೀಡಿದ್ದಾರೆ.

ಬಾಲಾಕೋಟ್‌ ದಾಳಿ ಹಿನ್ನೆಲೆ:

2019ರ ಫೆ.14ರಂದು ಕಾಶ್ಮೀರದ ಪುಲ್ವಾಮಾದಲ್ಲಿ ಪಾಕ್‌ ಉಗ್ರರು ನಡೆಸಿದ ದಾಳಿಗೆ ಭಾರತೀಯ ಸೇನೆಯ 40 ಯೋಧರು ಹತರಾಗಿದ್ದರು. ದಾಳಿಯಲ್ಲಿ ಪಾಕ್‌ ಮೂಲದ ಉಗ್ರ ಸಂಘಟನೆಗಳ ಕೈವಾಡ ಸ್ಪಷ್ಟವಾದ ಹಿನ್ನೆಲೆಯಲ್ಲಿ 2019ರ ಫೆ.26ರಂದು ಭಾರತೀಯ ವಾಯುಪಡೆಯು ಪಾಕಿಸ್ತಾನದಲ್ಲಿ ಉಗ್ರರ ನೆಲೆ ಇರುವ ಬಾಲಾಕೋಟ್‌ ಪ್ರದೇಶದ ಮೇಲೆ ಸರಣಿ ವೈಮಾನಿಕ ಬಾಂಬ್‌ ದಾಳಿ ನಡೆಸಿತ್ತು. ಇದರಲ್ಲಿ ನೂರಾರು ಉಗ್ರರು ಹತರಾಗಿದ್ದರು.

ಆದರೆ ದಾಳಿ ನಡೆಸಿ ಮರಳುವಾಗ ಭಾರತದ ಮಿಗ್‌ ವಿಮಾನವನ್ನು ಪಾಕ್‌ ಹೊಡೆದುರುಳಿಸಿತ್ತು. ಅದರೊಳಗಿದ್ದ ವಿಂಗ್‌ ಕಮಾಂಡರ್‌ ಅಭಿನಂದನ್‌ ವರ್ತಮಾನ್‌ ಪಾಕ್‌ ಯೋಧರ ಕೈಗೆ ಸೆರೆ ಸಿಕ್ಕಿದ್ದರು. ಆದರೆ ಈ ವೇಳೆ ಭಾರತ ಹೇರಿದ ಒತ್ತಡದ ಪರಿಣಾಮ ಅಭಿನಂದನ್‌ ಅವರನ್ನು 3 ದಿನಗಳ ಬಳಿಕ ಸುರಕ್ಷಿತವಾಗಿ ಬಿಡುಗಡೆ ಮಾಡಿತ್ತು.

Follow Us:
Download App:
  • android
  • ios