ಇಸ್ರೇಲ್‌ನ ಟೆಲ್‌ ಅವಿವ್‌ ವಿಮಾನ ನಿಲ್ದಾಣದ ಮೇಲೆ ಯೆಮೆನ್‌ನ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ರನ್‌ವೇ ಬಳಿ ಕ್ಷಿಪಣಿ ಬಿದ್ದು, ಇಬ್ಬರಿಗೆ ಗಾಯಗಳಾಗಿವೆ ಮತ್ತು ವಿಮಾನ ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಇಸ್ರೇಲ್ ಪ್ರತೀಕಾರದ ಬೆದರಿಕೆ ಹಾಕಿದೆ.

ಟೆಲ್ ಅವಿವ್: ಇಸ್ರೇಲ್‌ನ ಟೆಲ್‌ ಅವಿವ್‌ ವಿಮಾನ ಅಂತಾರಾಷ್ಟ್ರೀಯ ನಿಲ್ದಾಣದ ಮೇಲೆ ಭಾನುವಾರ ಯೆಮೆನ್‌ನ ಹೌತಿ ಉಗ್ರರು ಕ್ಷಿಪಣಿ ದಾಳಿ ನಡೆಸಿದ್ದಾರೆ. ರನ್‌ವೇನಿಂದ ಕೇವಲ 75 ಮೀ. ದೂರದಲ್ಲಿ ಕ್ಷಿಪಣಿ ಬಿದ್ದು, 25 ಮೀ. ಆಳದ ಕಂದಕ ಸೃಷ್ಟಿಯಾಗಿದೆ ಹಾಗೂ ಇಬ್ಬರಿಗೆ ಗಾಯವಾಗಿದೆ. ಇದರ ಬೆನ್ನಲ್ಲೇ ತಾತ್ಕಾಲಿಕವಾಗಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ.

ಈ ನಡುವೆ ದಾಳಿಗೆ ಕಿಡಿಕಾರಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್‌ ನೆತನ್ಯಾಹು, ‘ಹೌತಿ ಉಗ್ರರ ಒಂದಲ್ಲ.. ಬಹುದಾಳಿ ನಡೆಸಿ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಎಂದು ಎಚ್ಚರಿಸಿದ್ದಾರೆ. ಇದೇ ವೇಳೆ, ‘ನಮಗೆ ಹಾನಿ ಮಾಡಿದವರ ಮೇಲೆ ಏಳು ಪಟ್ಟು ದಾಳಿ ನಡೆಸುತ್ತೇವೆ’ ಎಂದು ಇಸ್ರೇಲ್‌ನ ರಕ್ಷಣಾ ಸಚಿವ ಕಾಟ್ಜ್‌ ಗುಡುಗಿದ್ದಾರೆ.

ಆಗಿದ್ದೇನು?:
ಇಸ್ರೇಲ್‌ನ ದೊಡ್ಡ ವಿಮಾನ ನಿಲ್ದಾಣವಾದ ಟೆಲ್ ಅವಿವ್‌ನ ‘ಬೆನ್‌ ಗುರಿಯಾನ್‌ ವಿಮಾನ ನಿಲ್ದಾಣ’ದ ಟರ್ಮಿನಲ್‌ 3 ಗೆ ಕೇವಲ 75 ಮೀ. ದೂರದಲ್ಲಿ ಹೌತಿಗಳ ಕ್ಷಿಪಣಿ ದಾಳಿ ನಡೆದಿದೆ.

ಇಸ್ರೇಲ್ ಮಾಧ್ಯಮಗಳು ಹಂಚಿಕೊಂಡಿರುವ ವಿಡಿಯೋ ಪ್ರಕಾರ ಕ್ಷಿಪಣಿ ಉಡಾವಣೆ ಬಳಿಕ ವಿಮಾನ ನಿಲ್ದಾಣದಲ್ಲಿ ಹೊಗೆ ಕಾಣಿಸಿದೆ. ಈ ವೇಳೆ ಪ್ರಯಾಣಿಕರು ಕಿರುಚುವುದಕ್ಕೆ ಆರಂಭಿಸಿದ್ದಾರೆ. ಕ್ಷಿಪಣಿಯು ವಿಮಾನ ನಿಲ್ದಾಣದ ಪಾರ್ಕಿಂಗ್ ಸ್ಥಳಕ್ಕೆ ಹೋಗುವ ರಸ್ತೆಯ ಬಳಿಯ ಹೊಲದಲ್ಲಿ ಬಿದ್ದಿದೆ. ಪರಿಣಾಮ ಅಲ್ಲಿ 25 ಮೀ ಆಳದ ಕಂದಕ ಸೃಷ್ಟಿಯಾಗಿದೆ. ಇನ್ನು ದಾಳಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ.

ನಾಳೆವರೆಗೆ ಭಾರತದಿಂದ ಇಸ್ರೇಲ್‌ಗೆ ವಿಮಾನ ಬಂದ್‌
ಟೆಲ್‌ ಅವಿವ್‌: ಇಸ್ರೇಲ್‌ನ ಅತಿದೊಡ್ಡ ಏರ್‌ಪೋರ್ಟ್‌ ಮೇಲೆ ಹೌತಿ ದಾಳಿ ಹಿನ್ನೆಲೆ ದೆಹಲಿಯಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಏರಿಂಡಿಯಾ ವಿಮಾನವನ್ನು ಭಾನುವಾರ ಅಬುಧಾಬಿಗೆ ತಿರುಗಿಸಲಾಗಿದೆ. ಇದರ ಜೊತೆಗೆ ಮೇ 6 ತನಕ ಟೆಲ್‌ ಅವಿವ್‌ಗೆ ವಿಮಾನ ಹಾರಾಟವನ್ನು ಏರ್‌ ಇಂಡಿಯಾ ರದ್ದುಪಡಿಸಿದೆ.

ದೆಹಲಿಯಿಂದ ಹೊರಟಿದ್ದ ಬೋಯಿಂಗ್ 787 ವಿಮಾನವು ಟೆಲ್ ಅವಿವ್‌ನಲ್ಲಿ ಇಳಿಯುವ ಒಂದು ಗಂಟೆಗೂ ಮುನ್ನ ದಾಳಿಯಾಗಿದೆ. ಆ ಬಳಿಕ ವಿಮಾನವನ್ನು ಅಬುಧಾಬಿಗೆ ತಿರುಗಿಸಲಾಗಿದೆ. ಇನ್ನು ಭಾನುವಾರ ಟೆಲ್‌ ಅವಿವ್‌ನಿಂದ ದೆಹಲಿಗೆ ತೆರಳಬೇಕಿದ್ದ ವಿಮಾನವನ್ನು ರದ್ದುಗೊಳಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಏರಿಂಡಿಯಾ ಮಂಗಳವಾರವರೆಗೆ ಇಸ್ರೇಲ್‌ಗೆ ವಿಮಾನ ಹಾರಾಟ ರದ್ದುಗೊಳಿಸಿದೆ.

ಟ್ರಂಪ್‌ರ ಯೆಮೆನ್‌ ದಾಳಿ ರಹಸ್ಯ ಚಾಟಿಂಗ್ ಸೋರಿಕೆ
ಯೆಮೆನ್‌ನ ಹೌತಿ ಉಗ್ರರ ಮೇಲೆ ವಾಯುದಾಳಿಯ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ತಮ್ಮ ಸರ್ಕಾರದ ಪ್ರಮುಖರ ಜತೆ ಚರ್ಚಿಸಲು ‘ಸಿಗ್ನಲ್‌’ ಆ್ಯಪ್‌ನಲ್ಲಿ ರಚಿಸಿಕೊಂಡಿದ್ದ ಗ್ರೂಪ್‌ಗೆ ಆಕಸ್ಮಿಕವಾಗಿ ಪತ್ರಕರ್ತರೊಬ್ಬರು ಸೇರ್ಪಡೆಗೊಂಡ ಪ್ರಸಂಗ ನಡೆದಿದೆ. ಅಲ್ಲದೆ ಅದರಲ್ಲಿನ ಚಾಟಿಂಗ್‌ ಮಾಹಿತಿ ಸೋರಿಕೆ ಆಗಿತ್ತು.

ಅಟ್ಲಾಂಟಿಕ್‌ ವೆಬ್‌ಸೈಟ್‌ನ ಪ್ರಧಾನ ಸಂಪಾದಕ ಜೆಫ್ರಿ ಗೋಲ್ಡ್‌ಬರ್ಗ್ ಅವರು ಈ ಗುಂಪಿಗೆ ಸೇರಿದದ ಪತ್ರಕರ್ತ. ಶ್ವೇತಭವನದ ಅಧಿಕಾರಿಯೊಬ್ಬರೇ ಅವರನ್ನು ಸೇರಿಸಿದ್ದರು ಎನ್ನಲಾಗಿದೆ. ಈ ಎಡವಟ್ಟು ಬೆಳಕಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಿರುವ ಶ್ವೇತಭವನ, ‘ಗ್ರೂಪ್‌ ನಲ್ಲಿ ಅತಿ ಸೂಕ್ಷ್ಮ ವಿಚಾರ ಚರ್ಚಿಸಿಲ್ಲ. ರಹಸ್ಯ ದಾಖಲೆಗಳನ್ನು ಬಹಿರಂಗಪಡಿಸಿಲ್ಲ’ ಎಂದು ಹೇಳಿದೆ.

ಕೆಲದಿನಗಳ ಹಿಂದೆ ಇರಾನ್‌ ಬೆಂಬಲಿತ ಯೆಮೆನ್‌ನ ಹೌತಿ ಉಗ್ರರ ನೆಲೆಗಳ ಮೇಲೆ ಅಮೆರಿಕ ಹೌತಿ ನೆಲೆಗಳ ಮೇಲೆ ವಾಯುದಾಳಿ ನಡೆಸಿದೆ. ಘಟನೆಯಲ್ಲಿ 31 ಜನರು ಹತರಾಗಿದ್ದರು. ಯೆಮೆನ್‌ ರಾಜಧಾನಿ ಸನಾ, ಸಾದಾ ಮತ್ತು ಸೌದಿ ಅರೇಬಿಯಾದ ಗಡಿ ಭಾಗದಲ್ಲಿ ಅಮೆರಿಕದ ಪಡೆಗಳು ಭೀಕರ ವಾಯುದಾಳಿ ನಡೆಸಿವೆ. ಈ ವೇಳೆ 100ಕ್ಕೂ ಹೆಚ್ಚಿನ ಜನರು ಗಾಯಗೊಂಡಿದ್ದರು.