ಕಳೆದ ವರ್ಷ ನೋಡಿ ಭಯಾನಕ ದೃಶ್ಯಗಳು ಇನ್ನಿಲ್ಲ: ಬ್ರಿಟನ್‌ ವೈದ್ಯ ವಿಜ್ಞಾನಿ ಜಾನ್‌ ಬೆಲ್‌ ಒಮಿಕ್ರೋನ್‌ ಸೋಂಕಿನ ತೀವ್ರತೆ ಬಹಳ ಕಮ್ಮಿ ಆಸ್ಪತ್ರೆಗೆ ಹೋದರೂ ಬೇಗ ಹೊರಗೆ ಬರುತ್ತಾರೆ

ಲಂಡನ್‌(ಡಿ.31): ಇಡೀ ಜಗತ್ತು ಕೊರೋನಾ ರೂಪಾಂತರಿ ತಳಿಯಾದ ಒಮಿಕ್ರೋನ್‌(Omicron) ಶರವೇಗದಲ್ಲಿ ಹರಡುತ್ತಿದೆ ಎಂದು ಬೆಚ್ಚಿ ಕುಳಿತಿರುವಾಗ ನೆಮ್ಮದಿ ನೀಡುವ ಸಂಗತಿಯನ್ನು ಬ್ರಿಟನ್ನಿನ ಪ್ರಸಿದ್ಧ ವಿಜ್ಞಾನಿಯೊಬ್ಬರು ಹೇಳಿದ್ದು, ಕಳೆದ ವರ್ಷ ನೋಡಿದ ಭಯಾನಕ ದೃಶ್ಯಗಳು ಈಗ ಮರುಕಳಿಸುವುದಿಲ್ಲ ಎಂದು ಭರವಸೆ ನೀಡಿದ್ದಾರೆ.

‘ಈ ಸೋಂಕು ನಾವು ಹಿಂದಿನ ವರ್ಷ ನೋಡಿದ ಸೋಂಕಿನಂತೆ ತೀವ್ರತೆ ಹೊಂದಿಲ್ಲ. ಒಮಿಕ್ರೋನ್‌ನ ಲಕ್ಷಣಗಳು ಬಹಳ ಸೌಮ್ಯವಾಗಿವೆ. ಈ ಸೋಂಕು ತಗಲಿದವರು ಆಸ್ಪತ್ರೆಗೆ ಹೋಗುವ ಸಾಧ್ಯತೆ ಕಡಿಮೆ. ಒಂದು ವೇಳೆ ಆಸ್ಪತ್ರೆಗೆ ದಾಖಲಾದರೂ ಬಹಳ ಬೇಗ ಹೊರಗೆ ಬರುತ್ತಾರೆ. ನನ್ನ ಪ್ರಕಾರ ಕಳೆದ ವರ್ಷದ ಭಯಾನಕ ದೃಶ್ಯಗಳು ಈಗ ಇತಿಹಾಸವಷ್ಟೆ. ತೀವ್ರ ನಿಗಾ ಘಟಕಗಳು ತುಂಬಿಹೋಗುವುದು, ನೋಡನೋಡುತ್ತಿದ್ದಂತೆ ಜನರು ಸಾಯುವುದು ಇದೆಲ್ಲ ಮರುಕಳಿಸದು. ಕೋವಿಡ್‌ ವಿಷಯದಲ್ಲಿ ಇಂತಹ ಸಮಾಧಾನಕರ ಪರಿಸ್ಥಿತಿಯೇ ಮುಂದುವರಿಯುವ ಸಾಧ್ಯತೆ ಹೆಚ್ಚಿದೆ’ ಎಂದು ಬ್ರಿಟನ್ನಿನ ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯದ ಪ್ರಸಿದ್ಧ ಇಮ್ಯುನಾಲಜಿಸ್ಟ್‌ ಜಾನ್‌ ಬೆಲ್‌ ಹೇಳಿದ್ದಾರೆ.

ಕರ್ನಾಟಕದಲ್ಲಿ ಸದ್ದಿಲ್ಲದೇ ಮತ್ತೆ ಹಳ್ಳಿ-ಹಳ್ಳಿಗೂ ಹಬ್ಬತ್ತಿದೆ ಕೊರೋನಾ..?

ಬ್ರಿಟನ್‌ ಸರ್ಕಾರ ಹೊಸ ವರ್ಷಾಚರಣೆಗೆ ಕಠಿಣ ನಿರ್ಬಂಧಗಳನ್ನು ವಿಧಿಸುವುದಿಲ್ಲ ಎಂದು ಹೇಳಿರುವ ವೇಳೆಯಲ್ಲೇ ಜಾನ್‌ ಬೆಲ್‌ ಬಿಬಿಸಿ ರೇಡಿಯೋಕ್ಕೆ ನೀಡಿರುವ ಈ ಸಂದರ್ಶನ ಒಮಿಕ್ರೋನ್‌ ಬಗ್ಗೆ ತೀವ್ರ ಆತಂಕಗೊಂಡಿರುವವರಲ್ಲಿ ಸಮಾಧಾನ ಮೂಡಿಸುವಂತಿದೆ.

ಅಮೆರಿಕದಲ್ಲಿ ಹೆಚ್ಚಿದ ಕೊರೋನಾ :

ಕಳೆದೊಂದು ವಾರದಲ್ಲಿ ಸರಾಸರಿ 2.65 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗುತ್ತಿರುವ ಅಮೆರಿಕದಲ್ಲಿ ಬುಧವಾರ ಕೊರೋನಾ ವೈರಸ್‌ನ ಮಹಾ ಸ್ಫೋಟ ಸಂಭವಿಸಿದೆ. ಅತೀ ವೇಗವಾಗಿ ವ್ಯಾಪಿಸುವ ಕೊರೋನಾ ಹೊಸ ರೂಪಾಂತರಿ ಡೆಲ್ಟಾಮತ್ತು ಒಮಿಕ್ರೋನ್‌ ಪರಿಣಾಮ ಬುಧವಾರ ಒಂದೇ ದಿನ ಅಮೆರಿಕದಲ್ಲಿ ಈವರೆಗಿನ ದಾಖಲೆಯ 4.88 ಲಕ್ಷ ಕೋವಿಡ್‌ ಕೇಸ್‌ಗಳು ಪತ್ತೆಯಾಗಿವೆ.

ಮಂಗಳವಾರವಷ್ಟೇ 2.67 ಲಕ್ಷ ಕೇಸ್‌ನಿಂದ ಒಂದೇ ದಿನಕ್ಕೆ ದೈನಂದಿನ ಕೋವಿಡ್‌ ಪ್ರಕರಣಗಳು 5 ಲಕ್ಷದ ಸಮೀಪಕ್ಕೆ ಜಿಗಿದಿದೆ. ಕಳೆದೊಂದು ವಾರದಲ್ಲಿ ದೇಶಾದ್ಯಂತ 20 ಲಕ್ಷಕ್ಕಿಂತ ಹೆಚ್ಚು ಕೇಸ್‌ಗಳು ದಾಖಲಾಗುತ್ತಿದ್ದು, ಈ ಪೈಕಿ 15 ರಾಜ್ಯಗಳು ಮತ್ತು ಪ್ರಾಂತ್ಯಗಳು ಈ ಹಿಂದಿನ ವಾರದಲ್ಲಿ ದಾಖಲಾಗಿದ್ದಕ್ಕಿಂತ ಹೆಚ್ಚು ಸೋಂಕಿತರು ಪತ್ತೆಯಾಗುತ್ತಿದ್ದಾರೆ.

ಆದಾಗ್ಯೂ, ಸೋಂಕಿಗೆ ತುತ್ತಾದವರಲ್ಲಿ ವೈರಸ್‌ ತೀವ್ರತೆ ಈ ಹಿಂದಿನಂತಿಲ್ಲ. ಜತೆಗೆ ಆಸ್ಪತ್ರೆಗೆ ದಾಖಲಾಗುವವರ ಪ್ರಮಾಣವು ಶೇ.11ರಷ್ಟುಮಾತ್ರ ಹೆಚ್ಚಿದೆ. ಅಲ್ಲದೆ ಕಳೆದ 2 ವಾರಗಳಲ್ಲಿ ಕೋವಿಡ್‌ಗೆ ಬಲಿಯಾಗುವವರ ಪ್ರಮಾಣವೂ ಸ್ವಲ್ಪ ಸರಿಹಾದಿಗೆ ಬಂದಿದೆ ಎನ್ನಲಾಗಿದೆ.

ಪ್ರಪಂಚಾದ್ಯಂತ ಕೊರೋನಾ ವೈರಸ್‌ ಮಹಾ ಸ್ಫೋಟ ಉಂಟಾಗಿದೆ. ಸೋಮವಾರ ಒಂದೇ ದಿನ ವಿಶ್ವಾದ್ಯಂತ ದಾಖಲೆಯ 14.4 ಕೋವಿಡ್‌ ಪ್ರಕರಣಗಳು ಪತ್ತೆಯಾಗಿವೆ. 2019ರಲ್ಲಿ ಮೊದಲ ಬಾರಿ ಕೋವಿಡ್‌ ಕೇಸು ಪತ್ತೆಯಾದ ಬಳಿಕ ಯಾವುದೇ ಒಂದು ದಿನದಲ್ಲಿ ಇಷ್ಟುಕೇಸು ಪತ್ತೆಯಾಗಿದ್ದು ಇದೇ ಮೊದಲು. ಇಷ್ಟೊಂದು ಪ್ರಮಾಣದಲ್ಲಿ ಕೇಸುಗಳು ಏರಲು ಕೋವಿಡ್‌ ಹೊಸ ತಳಿ ಒಮಿಕ್ರೋನ್‌ ಕಾರಣ ಎಂದು ಹೇಳಲಾಗಿದೆ. ತೀವ್ರತೆ ಕಡಿಮೆ ಇದ್ದರೂ ಅತ್ಯಂತ ಸಾಂಕ್ರಾಮಿಕ ಎಂಬ ಕುಖ್ಯಾತಿ ಹೊಂದಿರುವ ಒಮಿಕ್ರೋನ್‌ ರೂಪಾಂತರಿ ಕೋವಿಡ್‌ ವೈರಸ್‌, ಜಾಗತಿಕ ಮಟ್ಟದಲ್ಲಿ ತನ್ನ ಹಾವಳಿಯನ್ನು ಸಾಬೀತುಪಡಿಸಿದೆ.

ಪತ್ತೆಯಾದ ಎಲ್ಲಾ ಪ್ರಕರಣಗಳು ಒಮಿಕ್ರೋನ್‌ ಎಂದು ದೃಢಪಟ್ಟಿಲ್ಲವಾದರೂ, ಸೋಂಕಿನ ಪ್ರಮಾಣ ಏರಿಕೆಗೆ ಒಮಿಕ್ರೋನ್‌ ಕಾರಣ ಎಂಬುದನ್ನು ಅಂಕಿ ಅಂಶಗಳು ಸಾಬೀತುಪಡಿಸಿವೆ. ಕಳೆದ 1 ವಾರದಲ್ಲಿ ನಿತ್ಯ ಸರಾಸರಿ 8.41 ಲಕ್ಷ ಪ್ರಕರಣಗಳು ವರದಿಯಾಗಿವೆ. ನ.24ರಂದು ಆಫ್ರಿಕಾದಲ್ಲಿ ಮೊದಲ ಒಮಿಕ್ರೋನ್‌ ಪತ್ತೆಯಾದ ವಾರಕ್ಕೆ ಹೋಲಿಸಿದರೆ, ಸರಾಸರಿ ವಾರದ ಕೋವಿಡ್‌ ಪ್ರಮಾಣದಲ್ಲಿ ಶೇ.49ರಷ್ಟುಏರಿಕೆಯಾದಂತಾಗಿದೆ.