ನವದೆಹಲಿ(ಸೆ.07): ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳನ್ನು ನಡೆಸಿರುವ ಹಿಜ್ಬುಲ್‌ ಮುಜಾಹಿದೀನ್‌ ಉಗ್ರ ಸಂಘಟನೆ ಸಂಸ್ಥಾಪಕ ಸೈಯದ್‌ ಸಲಾಹುದ್ದೀನ್‌ಗೆ ಶಿಕ್ಷೆ ಕೊಡಿಸುವ ಬದಲಿಗೆ ಪಾಕಿಸ್ತಾನ ಆತನಿಗೆ ಅಧಿಕಾರಿಗಳಿಗೆ ನೀಡುವಂತಹ ಸ್ಥಾನಮಾನ ನೀಡಿರುವ ಕಳವಳಕಾರಿ ಸಂಗತಿ ಬೆಳಕಿಗೆ ಬಂದಿದೆ.

ಸಲಾಹುದ್ದೀನ್‌ ತನ್ನ ಗುಪ್ತಚರ ಸಂಸ್ಥೆ ಐಎಸ್‌ಐನಲ್ಲಿ ಕೆಲಸ ಮಾಡುತ್ತಿರುವ ಅಧಿಕಾರಿ ಇದ್ದಂತೆ. ಆತ ಸಂಚರಿಸುವ ವಾಹನಗಳನ್ನು ಸುಖಾಸುಮ್ಮನೆ ತಡೆಯಬಾರದು ಎಂದು ಗುಪ್ತಚರ ನಿರ್ದೇಶನಾಲಯ ಪ್ರಮಾಣಪತ್ರ ನೀಡಿದೆ. ಇದು 2020ರ ಡಿಸೆಂಬರ್‌ 31ರವರೆಗೂ ವಾಯಿದೆ ಹೊಂದಿದೆ.

ನಿರ್ದೇಶನಾಲಯದ ನಿರ್ದೇಶಕ/ಕಮಾಂಡಿಂಗ್‌ ಅಧಿಕಾರಿ ವಜಾಹತ್‌ ಅಲಿ ಖಾನ್‌ ಅವರು ಹೊರಡಿಸಿರುವ ಪತ್ರ ಭಾರತೀಯ ಭದ್ರತಾ ಸಂಸ್ಥೆಗಳಿಗೆ ದೊರೆತಿದ್ದು, ಪಾಕಿಸ್ತಾನದ ನಿಜಬಣ್ಣವನ್ನು ಮತ್ತೊಮ್ಮೆ ಬಯಲು ಮಾಡಲು ಸಿಕ್ಕ ಅಸ್ತ್ರದಂತಾಗಿದೆ.

ಭಾರತ ಹಾಗೂ ಅಮೆರಿಕದಲ್ಲಿ ನಿಷೇಧಿತ ಉಗ್ರ ಸಂಘಟನೆಯಾಗಿರುವ ಹಿಜ್ಬುಲ್‌ ಮುಜಾಹಿದೀನ್‌ನ ಸಂಸ್ಥಾಪಕನಾಗಿರುವ ಸಲಾಹುದ್ದೀನ್‌, ಯುನೈಟೆಡ್‌ ಜಿಹಾದ್‌ ಕೌನ್ಸಿಲ್‌ ಎಂಬ ಸಂಘಟನೆಗೂ ಮುಖ್ಯಸ್ಥನಾಗಿದ್ದಾನೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಿಂದಲೇ ನಿಷೇಧಕ್ಕೆ ಒಳಗಾಗಿರುವ ಲಷ್ಕರ್‌ ಎ ತೊಯ್ಬಾ, ಜೈಷ್‌ ಎ ಮೊಹಮದ್‌ನಂತಹ ಉಗ್ರಗಾಮಿ ಸಂಘಟನೆಗಳು ಜಿಹಾದ್‌ ಕೌನ್ಸಿಲ್‌ ಸದಸ್ಯ ಸಂಘಟನೆಗಳಾಗಿವೆ. ತಾನು ಕಾಶ್ಮೀರದಲ್ಲಿ ಪಾಕಿಸ್ತಾನ ಪರ ಯುದ್ಧ ಮಾಡುತ್ತಿರುವುದಾಗಿ ಈ ಹಿಂದೆ ಸಲಾಹುದ್ದೀನ್‌ ಹೇಳಿಕೊಂಡಿದ್ದ.

ಇಂತಹ ಸಲಾಹುದ್ದೀನ್‌ಗೆ ಪಾಕಿಸ್ತಾನ ಅಧಿಕಾರಿಯಂತಹ ಸ್ಥಾನಮಾನ ನೀಡಿರುವುದು, ಆ ದೇಶ ಭಯೋತ್ಪಾದನೆಗೆ ಯಾವ ರೀತಿ ಪ್ರೋತ್ಸಾಹ ನೀಡುತ್ತಿದೆ ಎಂಬುದರ ದ್ಯೋತಕವಾಗಿದೆ. ಭಯೋತ್ಪಾದನೆಗೆ ಹಣಕಾಸು ಹರಿವು ತಡೆಯಲು ರಚನೆಗೊಂಡಿರುವ ಹಣಕಾಸು ಕಾರ್ಯಪಡೆ (ಎಫ್‌ಎಟಿಎಫ್‌) ನ ಸಭೆ ಅಕ್ಟೋಬರ್‌ನಲ್ಲಿ ನಡೆಯಲಿದೆ. ಸದ್ಯ ಗ್ರೇ ಲಿಸ್ಟ್‌ನಲ್ಲಿರುವ ಪಾಕಿಸ್ತಾನಕ್ಕೆ ಉಗ್ರನಿಗೆ ಮನ್ನಣೆ ನೀಡುವ ಆದೇಶ ಮುಳುವಾಗುವ ಸಾಧ್ಯತೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ.