ವಾಷಿಂಗ್ಟನ್(ಡಿ.13): ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾನೂನು ವಿರೋಧಿಸಿ ವಿದೇಶಗಳಲ್ಲೂ ಪ್ರತಿಭಟನೆಡ ನಡೆಯುತ್ತಿದೆ. ಆದರೀಗ ದೇಶ ವಿರೋಧಿ ಸಂಘಟನೆಗಳೂ ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ. ಅಮೆರಿಕದ ವಾಷಿಂಗ್ಟನ್ ಡಿಸಿಯಲ್ಲಿ ಕೃಷಿ ಕಾನೂನು ವಿರೋಧಿ ಪ್ರತಿಭಟನೆ ಭಾರತ ವಿರೋಧಿಯಾಗಿ ರೂಪ ಪಡೆದಿದೆ. ಖಲಿಸ್ತಾನಿ ಪ್ರತ್ಯೇಕತಾವಾದಿ ಸದಸ್ಯರು ಭಾರತದಲ್ಲಿ ಇತ್ತೀಚೆಗಷ್ಟೇ ಜಾರಿಗೊಳಿಸಿರುವ ಕೃಷಿ ಕಾನೂನು ವಿರುದ್ಧ ಪ್ರತಿಭಟಿಸುತ್ತಿರುವ ರೈತರನ್ನು ಸಮರ್ಥಿಸಿ ಸಿಖ್ ಅಮೆರಿಕನ್ ಯುವಕರು ನಡೆಸುತ್ತಿರುವ ಪ್ರತಿಭಟನೆ ವೇಳೆ ಮಹಾತ್ಮ ಗಾಂಧಿ ಪ್ರತಿಮೆಯನ್ನು ಹಾನಿಗೊಳಿಸಿದ್ದಾರೆ. 

ವಾಷಿಂಗ್ಟನ್ ಡಿಸಿಯ ಮೇರಿಲ್ಯಾಂಡ್ ಹಾಗೂ ವರ್ಜೀನಿಯಾ ಆಸುಪಾಸಿನಲ್ಲಿ ಸಾವಿರಾರು ಸಿಖ್ಖರೊಂದಿಗೆ ಅನ್ಯ ರಾಜ್ಯಗಳಾದ ನ್ಯೂಯಾರ್ಕ್, ನ್ಯೂ ಜರ್ಸಿ, ಪೆನ್ಸಿಲ್ವೇನಿಯಾ, ಇಂಡಿಯಾನಾ, ಓಹಿಯೋ ಹಾಗೂ ನಾರ್ತ್ ಕ್ಯಾರೋಲಿನಾದ ಸಿಖ್ಖರೂ ಶನಿವಾರದಂದು ಇಲ್ಲಿನ ಭಾರತೀಯ ರಾಯಭಾರಿ ಕಚೇರಿವರೆಗೆ ಕಾರು ರ್ಯಾಲಿ ನಡೆಸಿದ್ದಾರೆ. ಈ ಮೂಲಕ ರೈತರೊಂದಿಗೆ ತಾವೂ ಇದ್ದೇವೆ ಎಂಬ ಸಂದೇಶ ಸಾರಿದ್ದಾರೆ.

ಆದರೆ ಶಾಂತಿಯುತವಾಗಿ ನಡೆಯುತ್ತಿದ್ದ ಈ ಪ್ರತಿಭಟನೆ ಕೆಲವೇ ಸಮಯದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳಿಂದಾಗಿ ಹಿಂಸಾತ್ಮಕ ರೂಪ ಪಡೆದುಕೊಂಡಿದೆ. ಇವರು ಭಾರತ ವಿರೋಧಿ ಪೋಸ್ಟರ್ ಹಾಗೂ ಬ್ಯಾನರ್ ಜೊತೆ ಖಲಿಸ್ತಾನಿ ಬಾವುಟ ಹಿಡಿದಿದ್ದರು. ಪ್ರತಿಭಟನಾಕಾರರ ಸೋಗಿನಲ್ಲಿ ನಡೆದ ಈ ಕೃತ್ಯವನ್ನು ಭಾರತೀಯ ರಾಯಭಾರ ಕಚೇರಿಯು ಟೀಕಿಸಿದೆ. ಇದೊಂದು ದುಷ್ಕೃತ್ಯ ಎಂದು ಖಂಡಿಸಿದೆ.

ಗಾಂಧೀಜಿ ಪ್ರತಿಮೆ ಧ್ವಂಸ

'ರಾಯಭಾರ ಕಚೇರಿಯ ಮುಂಭಾಗದಲ್ಲಿರುವ ಮಹಾತ್ಮ ಗಾಂಧಿ ಸ್ಮಾರಕ ಪ್ಲಾಜಾದಲ್ಲಿರುವ ಗಾಂಧಿಯವರ ಪ್ರತಿಮೆಯನ್ನು ಡಿಸೆಂಬರ್ 12 ರಂದು ಖಲಿಸ್ತಾನಿಗಳು ಹಾನಿಗೊಳಿಸಿದ್ದಾರೆ. ಶಾಂತಿ ಮತ್ತು ನ್ಯಾಯದ ಪ್ರತಿಪಾದಿಸಿದ ಗಾಂಧೀಜಿ  ಪ್ರತಿಮೆಯನ್ನು ಪ್ರತಿಭಟನಾಕಾರರ ಸೋಗಿನಲ್ಲಿ ಬಂದ ಗೂಂಡಾಗಳು ಹಾನಿಗೊಳಿಸಿರುವುದು ದುಷ್ಕೃತ್ಯ' ಎಂದು ಭಾರತೀಯ ರಾಯಭಾರ ಕಚೇರಿ ಹೇಳಿದೆ.

ಘಟನೆ ಸಂಬಂಧ ರಾಯಭಾರ ಕಚೇರಿಯು ಕಾನೂನು ಕ್ರಮ ಆರಂಭಿಸಿದೆ. ವಾಷಿಂಗ್ಟನ್ ಡಿಸಿ ಪೊಲೀಸ್ ಮತ್ತು ಸೀಕ್ರೆಟ್ ಸರ್ವೀಸಸ್ ಸಂಸ್ಥೆಯ ಉಪಸ್ಥಿತಿಯಲ್ಲೇ ಈ ಘಟನೆ ನಡೆದಿರುವುದು ಗಮನಾರ್ಹ.