ಮಾಸ್ಕೋ(ಅ.29): ರಷ್ಯಾದ ಯೂಟ್ಯೂಬರ್‌ ಒಬ್ಬ ಪದೇ ಪದೇ ಕೆಟ್ಟು ನಿಲ್ಲುತ್ತಿದ್ದ ಮರ್ಸಿಡಿಸ್‌ ಕಾರಿಗೆ ಬೆಂಕಿ ಹಚ್ಚಿ ಸುಟ್ಟುಹಾಕಿದ್ದಲ್ಲದೇ, ಆ ವಿಡಿಯೋವನ್ನೇ ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಯೂಟ್ಯೂಬ್‌ನಲ್ಲಿ 4.97 ಲಕ್ಷ ಹಿಂಬಾಲಕರನ್ನು ಹೊಂದಿರುವ ಮಿಖಾಯಿಲ್‌ ಲಿಟ್ವಿನ್‌ ಎಂಬಾತ 2.4 ಕೋಟಿ ರು. ಕೊಟ್ಟು ಮರ್ಸಿಡಿಸ್‌ ಕಾರನ್ನು ಖರೀದಿಸಿದ್ದ. ಆದರೆ, ಕಾರು ಆಗಾಗ ರಸ್ತೆ ಮಧ್ಯೆ ಕೆಟ್ಟು ನಿಲ್ಲುತ್ತಿತ್ತು. ಕಾರಿನ ಡೀಲರ್‌ ಬಳಿ 5 ಬಾರಿ ದುರಸ್ತಿಗೆಂದು ಕಳುಹಿಸಿ ಕೊಟ್ಟಿದ್ದ. ಕಾರನ್ನು ರಿಪೇರಿ ಮಾಡಿಸಲು 40ಕ್ಕೂ ಹೆಚ್ಚು ದಿನಗಳನ್ನು ವ್ಯಯಿಸಿದ್ದ. ಈ ಬಾರಿ ಕೆಟ್ಟು ನಿಂತಾಗ ಕಾರು ಡೀಲರ್‌ಗಳಿಂದ ಯಾವುದೇ ಪ್ರತಿಕ್ರಿಯೆ ಬಂದಿರಲಿಲ್ಲ.

ಇದರಿಂದ ತೀವ್ರ ಹತಾಶೆಗೊಂಡ ಲಿಟ್ವಿನ್‌, ಬಯಲಿಗೆ ಕಾರನ್ನು ಒಯ್ದು ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ್ದಾನೆ. ಅಲ್ಲದೆ ತನ್ನ ಕಾರನ್ನು ಸುಡುತ್ತಿರುವ ದೃಶ್ಯವನ್ನು ಚಿತ್ರೀಕರಿಸಿ ಯುಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡಿದ್ದಾನೆ. ಐಷಾರಾಮಿ ಕಾರಿಗೆ ಬೆಂಕಿ ಹಾಕಿದ ಬಳಿಕ ಆತ ತನ್ನ ಹಳೆಯ ಕಾರಿನಲ್ಲಿ ಮನೆಗೆ ತೆರಳಿದ್ದಾನೆ. ಈ ವಿಡಿಯೋ ಕೂಡ ಯೂಟ್ಯೂಬ್‌ನಲ್ಲಿ ಹಿಟ್‌ ಆಗಿದ್ದು, 1.1 ಕೋಟಿ ಮಂದಿ ವೀಕ್ಷಿಸಿದ್ದಾರೆ.