Thailand Nightclub Fire: ಶುಕ್ರವಾರ ಮುಂಜಾನೆ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು  13 ಜನಸಾವನ್ನಪ್ಪಿದ್ದಾರೆ 

ಬ್ಯಾಂಕಾಕ್ (ಆ. 05): ಶುಕ್ರವಾರ ಮುಂಜಾನೆ ಥಾಯಲೆಂಡ್ ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕನಿಷ್ಠ 13 ಜನರು ಸಾವನ್ನಪ್ಪಿದ್ದಾರೆ ಮತ್ತು 40 ಜನರು ಗಾಯಗೊಂಡಿದ್ದಾರೆ ಎಂದು ರಕ್ಷಣಾ ಸೇವೆಗಳ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.‌ ಬ್ಯಾಂಕಾಕ್‌ನಿಂದ ದಕ್ಷಿಣಕ್ಕೆ 150 ಕಿಲೋಮೀಟರ್ ದೂರದಲ್ಲಿರುವ ಚೋನ್‌ಬುರಿ ಪ್ರಾಂತ್ಯದ ಸತ್ತಾಹಿಪ್ ಜಿಲ್ಲೆಯ ಮೌಂಟೇನ್ ಬಿ ನೈಟ್‌ಸ್ಪಾಟ್‌ನಲ್ಲಿ ಬೆಳಗಿನ ಜಾವ 1:00 ಗಂಟೆಯ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. 

ಥಾಯಲೆಂಡಿನ ರೆಸ್ಕ್ಯೂ ದಳ ವಿಡಿಯೋ ಪೋಸ್ಟ್ ಮಾಡಿದೆ. ನೈಟ್‌ಕ್ಲಬ್‌ನಲ್ಲಿ ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಗಾಬರಿಗೊಂಡ ಜನರು ಕ್ಲಬ್‌ನಿಂದ ಕಿರುಚುತ್ತಾ ಓಡಿಹೋಗುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ನೈಟ್‌ಕ್ಲಬ್‌ನಲ್ಲಿದ್ದ ಹಲವರ 
ಬಟ್ಟೆಗಳೂ ಸುಟ್ಟುಹೋಗಿವೆ.

ಮೃತರಲ್ಲಿ ನಾಲ್ಕು ಮಹಿಳೆಯರು ಮತ್ತು ಒಂಬತ್ತು ಪುರುಷರಿದ್ದು ಹೆಚ್ಚಾಗಿ ಪ್ರವೇಶದ್ವಾರದಲ್ಲಿ ಮತ್ತು ಸ್ನಾನಗೃಹದಲ್ಲಿ ಶವಗಳು ಪತ್ತೆಯಾಗಿವೆ. ಅವರ ದೇಹಗಳು ತೀವ್ರವಾಗಿ ಸುಟ್ಟುಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರೆಲ್ಲರು ಥಾಯಲೆಂಡ್ ಮೂಲದವರೇ ಎಂದು ತಿಳಿದು ಬಂದಿದೆ. ಮೃತರಲ್ಲಿ ಯಾರೂ ವಿದೇಶಿಗರಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ. 

ಕ್ಲಬ್‌ನ ಗೋಡೆಗಳ ಮೇಲಿದ್ದ ಅಕೌಸ್ಟಿಕ್ ಫೋಮ್‌ನಿಂದಾಗಿ ಬೆಂಕಿಯ ಇನ್ನಷ್ಟು ಹರಡಿದೆ. ಬೆಂಕಿ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳದವರು ಮೂರು ಗಂಟೆಗಳಿಗೂ ಹೆಚ್ಚು ಸಮಯ ತೆಗೆದುಕೊಂಡರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. 

ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳಲ್ಲಿ ಸಡಿಲ ನಿಯಮ?: ಥೈಲ್ಯಾಂಡ್‌ನ ಆರೋಗ್ಯ ಮತ್ತು ಸುರಕ್ಷತಾ ನಿಯಮಗಳಿಗೆ, ವಿಶೇಷವಾಗಿ ಅದರ ಲೆಕ್ಕವಿಲ್ಲದಷ್ಟು ಬಾರ್‌ಗಳು ಮತ್ತು ನೈಟ್‌ಕ್ಲಬ್‌ಗಳಲ್ಲಿ ಸಡಿಲ ನಿಯಮಗಳ ಈ ಬಗ್ಗೆ ಈ ಹಿಂದಿನಿಂದಲೂ ವಿರೋಧ ಕೇಳಿ ಬಂದಿದೆ. 

2009 ರಲ್ಲಿ ಬ್ಯಾಂಕಾಕ್‌ನ ಸ್ವಾಂಕಿ ಸ್ಯಾಂಟಿಕಾ ಕ್ಲಬ್‌ನಲ್ಲಿ ಹೊಸ ವರ್ಷದ ಮುನ್ನಾದಿನದ ಪಾರ್ಟಿಯಲ್ಲಿ ಬೆಂಕಿ ಕಾಣಿಸಿಕೊಂಡು 67 ಜನರು ಸಾವನ್ನಪ್ಪಿದರು ಮತ್ತು 200 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. 

ವೇದಿಕೆಯಲ್ಲಿ ರಾಕ್ ಬ್ಯಾಂಡ್ ಆರಂಭವಾದಗ ಪಟಾಕಿಗಳನ್ನು ಸಿಡಿಸಿದಾಗ ಬೆಂಕಿಯ ಕಾಣಿಸಿಕೊಂಡಿತ್ತು. ಈ ಬೆನ್ನಲ್ಲೇ ಸಾಂತಿಕಾ ಮಾಲೀಕರಿಗೆ ಮೂರು ವರ್ಷಗಳ ಕಾಲ ಜೈಲು ಶಿಕ್ಷೆ ವಿಧಿಸಲಾಗಿತ್ತು. ಇತ್ತೀಚೆಗಷ್ಟೇ, 2012ರಲ್ಲಿ ವಿದೇಶಿ ಪ್ರವಾಸಿಗರ ಫೇವರೇಟ್‌ ಸ್ಪಾಟ್‌ ಆದ ಫುಕೆಟ್ ದ್ವೀಪದ ಕ್ಲಬ್‌ನಲ್ಲಿ ವಿದ್ಯುತ್ ದೋಷದಿಂದ ಉಂಟಾದ ಬೆಂಕಿಯಲ್ಲಿ ನಾಲ್ಕು ಜನರು ಸಾವನ್ನಪ್ಪಿದರು.