ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಸತತ ನಾಲ್ಕನೇ ವರ್ಷವೂ ಫಿನ್ಲೆಂಡ್‌ ಜಗತ್ತಿನ ಅತ್ಯಂತ ಸಂತುಷ್ಟ ದೇಶ| 149ರ ಪೈಕಿ ಭಾರತ 144, ಫಿನ್ಲೆಂಡ್‌ ವಿಶ್ವ ನಂ.1

ಫಿನ್ಲೆಂಡ್(ಮಾ.20)‌: ಕೊರೋನಾ ಸಾಂಕ್ರಾಮಿಕ ರೋಗದ ನಡುವೆಯೂ ಸತತ ನಾಲ್ಕನೇ ವರ್ಷವೂ ಫಿನ್ಲೆಂಡ್‌ ಜಗತ್ತಿನ ಅತ್ಯಂತ ಸಂತುಷ್ಟದೇಶ ಎಂಬ ಹಿರಿಮೆಗೆ ಪಾತ್ರವಾಗಿದೆ ಎಂದು ವಿಶ್ವಸಂಸ್ಥೆ ವರದಿಯೊಂದು ತಿಳಿಸಿದೆ.

149 ದೇಶಗಳ ಜಿಡಿಪಿ, ಸಾಮಾಜಿಕ ಬೆಂಬಲ, ವೈಯಕ್ತಿಕ ಸ್ವಾತಂತ್ರ್ಯ, ಭ್ರಷ್ಟಾಚಾರದ ಮಟ್ಟಮತ್ತಿತರ ಅಂಶಗಳ ಆಧಾರದ ಮೇಲೆ ಜನರ ಸಂತೋಷವನ್ನು ಅಳೆದು ಸಮೀಕ್ಷೆ ಕೈಗೊಳ್ಳಲಾಗಿದೆ. ಇನ್ನು ಜನಸಂಖ್ಯೆಯಲ್ಲಿ ವಿಶ್ವದಲ್ಲೇ 2ನೇ ಸ್ಥಾನದಲ್ಲಿರುವ ಭಾರತ 144ನೇ ಸ್ಥಾನ ಪಡೆದು ಅತ್ಯಂತ ಕಡೆಯಲ್ಲಿದೆ.

ಈ ಸಮೀಕ್ಷೆಯಲ್ಲಿ ಈ ವರ್ಷವೂ ಯುರೋಪ್‌ ದೇಶಗಳೇ ಅಗ್ರ ಸ್ಥಾನದಲ್ಲಿದ್ದು, ಡೆನ್ಮಾರ್ಕ್ ಎರಡನೇ ಸ್ಥಾನ ಪಡೆದಿದೆ. ಉಳಿದಂತೆ ಸ್ವಿಜರ್‌ಲೆಂಡ್‌, ಐಸ್‌ಲ್ಯಾಂಡ್‌ ಮತ್ತು ನೆದರ್‌ಲೆಂಡ್‌ ನಂತರದ ಸ್ಥಾನ ಪಡೆದಿವೆ. ಇನ್ನು ಜರ್ಮನಿ 17ನೇ ಸ್ಥಾನದಿಂದ 13 ನೇ ಸ್ಥಾನಕ್ಕೆ ಜಿಗಿತ ಕಂಡಿದೆ.

ಆದರೆ ಬ್ರಿಟನ್‌ 13ನೇ ಸ್ಥಾನದಿಂದ 17ನೇ ಸ್ಥಾನಕ್ಕೆ, ಅಮೆರಿಕ 18ನೇ ಸ್ಥಾನದಿಂದ 19ನೇ ಸ್ಥಾನಕ್ಕೆ ಕುಸಿದಿದೆ. ಫಿನ್ಲೆಂಡ್‌ ಜನರು ಅತ್ಯುತ್ತಮ ಗುಣಮಟ್ಟದ ಜೀವನ, ಭದ್ರತೆ ಮತ್ತು ಸಾರ್ವಜನಿಕ ಸೇವೆಯನ್ನು ಪಡೆಯುತ್ತಿದ್ದಾರೆ.