ಚೀನಾದ 10 ಕೋಟಿ ಜನರಿರುವ ಪ್ರಾಂತ್ಯದಲ್ಲಿ ನಿಗೂಢ ಸೋಂಕು| ವುಹಾನ್‌ ರೀತಿ ಲಾಕ್‌ಡೌನ್‌ ಘೋಷಿಸಿದ ನೆರೆ ದೇಶ| ಮತ್ತೆ ಕೊರೋನಾ ಕಾಡುವ ಆತಂಕದಿಂದ ಬಿಗಿ ಕ್ರಮ

ಬೀಜಿಂಗ್(ಮೇ.22)‌: ವಿಶ್ವದಲ್ಲೇ ಮೊದಲಿಗೆ ತನ್ನ ನೆಲದಲ್ಲಿ ಕೊರೋನಾ ವೈರಸ್‌ ಕಾಣಿಸಿಕೊಂಡರೂ, ಇತರೆಲ್ಲಾ ದೇಶಗಳಿಗಿಂತ ಅದನ್ನು ಯಶಸ್ವಿಯಾಗಿ ನಿರ್ವಹಿಸಿರುವ ಚೀನಾಕ್ಕೆ ಇದೀಗ ನಿಗೂಢ ಸೋಂಕಿನ ಆತಂಕ ಕಾಡತೊಡಗಿದೆ. ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಇಳಿಮುಖವಾಗಿ ಲಾಕ್‌ಡೌನ್‌ ತೆರವುಗೊಳಿಸಿದ ಬೆನ್ನಲ್ಲೇ ರಷ್ಯಾ- ಉತ್ತರ ಕೊರಿಯಾ ಗಡಿಯಲ್ಲಿರುವ ಜಿಲಿನ್‌ ಪ್ರಾಂತ್ಯದಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ.

ಹೈಡ್ರಾಮಾ ಬಳಿಕ ಕೊರೋನಾ ಮೂಲ ತನಿಖೆ ನಿರ್ಣಯಕ್ಕೆ ಚೀನಾ ಬೆಂಬಲ!

ಲಾಂಡ್ರಿ ಕೆಲಸ ಮಾಡುವ ಮಹಿಳೆಯೊಬ್ಬಳಲ್ಲಿ ಕೊರೋನಾ ಪತ್ತೆಯಾಗಿದ್ದು, ಅದು ಈಗ ಕ್ಲಸ್ಟರ್‌ ರೂಪ ಪಡೆದಿದೆ. ಈವರೆಗೆ 39 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ. ಲಾಂಡ್ರಿ ಮಹಿಳೆಗೆ ಎಲ್ಲಿಂದ ಸೋಂಕು ಬಂತು ಎಂಬುದು ಈವರೆಗೂ ಗೊತ್ತಾಗಿಲ್ಲ. ಸೋಂಕು ಹಬ್ಬುತ್ತಿದ್ದಂತೆ ಚೀನಾಕ್ಕೆ ಜಿಲಿನ್‌ ಒಳಗೊಂಡ, 10.8 ಕೋಟಿ ಜನರು ನೆಲೆಸಿರುವ ಡಾಂಗ್‌ಬೀ ವಲಯದ ಆತಂಕ ಕಾಡತೊಡಗಿದೆ.

ಚೀನಾಗೆ ಬಿಗ್ ಶಾಕ್: Apple, ಲಾವಾ ಬೆನ್ನಲ್ಲೇ ಮತ್ತೊಂದು ಕಂಪನಿ ಭಾರತಕ್ಕೆ!

ಸೋಂಕಿನ ಹಿನ್ನೆಲೆಯಲ್ಲಿ ಜಿಲಿನ್‌ ಪ್ರಾಂತ್ಯದಲ್ಲಿರುವ 50 ಲಕ್ಷ ಜನರು ವಾಸಿಸುವ 2 ನಗರಗಳನ್ನು ಸಂಪೂರ್ಣವಾಗಿ ವುಹಾನ್‌ ಪ್ರಾಂತ್ಯದ ರೀತಿ ಲಾಕ್‌ಡೌನ್‌ ಮಾಡಲಾಗಿದೆ. 40 ಸಾವಿರ ಜನರನ್ನು ಕೊರೋನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಸಂಚಾರ, ಶಾಲೆ, ಕಾಲೇಜು ಎಲ್ಲವನ್ನೂ ಬಂದ್‌ ಮಾಡಲಾಗಿದೆ. ಕೊರೋನಾ ಚಿಕಿತ್ಸೆಗೆಂದೇ ಎರಡು ಆಸ್ಪತ್ರೆಗಳನ್ನು ಮೀಸಲಿಟ್ಟಿದೆ.