ವಾಷಿಂಗ್ಟನ್‌(ಜ.13): ಅಮೆರಿಕ ಸಂಸತ್‌ ಭವನದಲ್ಲಿ ಹಿಂಸಾಚಾರ ನಡೆಸಲು ಕರೆ ಕೊಟ್ಟಹಿನ್ನೆಲೆಯಲ್ಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಖಾತೆಯನ್ನು ಜ.20ರವರೆಗೂ ಅಮಾನತಿನಲ್ಲಿಟ್ಟಿರುವ ವಿಶ್ವಪ್ರಸಿದ್ಧ ಸಾಮಾಜಿಕ ಜಾಲತಾಣ ಫೇಸ್‌ಬುಕ್‌, ನಿರ್ಗಮಿತ ಅಧ್ಯಕ್ಷರಿಗೆ ಮತ್ತೊಂದು ಶಾಕ್‌ ನೀಡಿದೆ.

ಟ್ರಂಪ್‌ ಹಾಗೂ ಅವರ ಬೆಂಬಲಿಗರು ಬಹುವಾಗಿ ಬಳಸುವ ‘ಸ್ಟಾಪ್‌ ದ ಸ್ಟೀಲ್‌’ (ವಂಚನೆ ತಡೆಯಿರಿ) ನುಡಿಗಟ್ಟು ಇರುವ ಎಲ್ಲ ಮಾಹಿತಿಯನ್ನು ತೆಗೆದುಹಾಕುವುದಾಗಿ ಪ್ರಕಟಿಸಿದೆ.

ನ.3ರಂದು ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಬೃಹತ್‌ ವಂಚನೆ ನಡೆದಿದೆ ಎಂದು ಆರೋಪಿಸುತ್ತಾ ಬಂದಿರುವ ಟ್ರಂಪ್‌, ಅವರ ಬೆಂಬಲಿಗರು ಸಾಮಾಜಿಕ ಜಾಲತಾಣಗಳಲ್ಲಿ ‘ಸ್ಟಾಪ್‌ ದ ಸ್ಟೀಲ್‌’ ನುಡಿಗಟ್ಟನ್ನು ಬಳಸುತ್ತಿದ್ದರು. ತನ್ಮೂಲಕ ಒಗ್ಗೂಡಿ, ಪ್ರತಿಭಟನೆ ನಡೆಸುತ್ತಿದ್ದರು.

ಈ ಹಿನ್ನೆಲೆಯಲ್ಲಿ ಫೇಸ್‌ಬುಕ್‌ ಈ ಕ್ರಮ ಕೈಗೊಂಡಿದೆ.