ಇಸ್ಲಾಮಾಬಾದ್‌[ಜ.15]: ವೈದ್ಯಕೀಯ ಚಿಕಿತ್ಸೆಗಾಗಿ ಜಾಮೀನು ಪಡೆದು ಬ್ರಿಟನ್‌ನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾದ ಪಾಕಿಸ್ತಾನ ಮಾಜಿ ಪ್ರಧಾನಿ ನವಾಜ್‌ ಷರೀಫ್‌ ಅವರು ಕುಟುಂಬ ಸದಸ್ಯರೊಂದಿಗೆ ಹೋಟೆಲ್‌ನಲ್ಲಿ ಮೋಜಿನಲ್ಲಿ ತೊಡಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಬ್ರಿಟನ್‌ನ ರೆಸ್ಟೋರೆಂಟ್‌ವೊಂದರಲ್ಲಿ ಕುಟುಂಬದ ಕೆಲ ಸದಸ್ಯರೊಂದಿಗೆ ಷರೀಫ್‌ ಅವರು ಕುಳಿತಿರುವ ಫೋಟೋವೊಂದನ್ನು ಪಾಕಿಸ್ತಾನ ವಿಜ್ಞಾನ ಸಚಿವ ಫವಾದ್‌ ಚೌಧರಿ ಟ್ವೀಟ್‌ ಮಾಡಿದ್ದು, ಇದು ಭಾರೀ ವೈರಲ್‌ ಆಗಿದೆ.

ಪನಾಮ ಭ್ರಷ್ಟಾಚಾರದಲ್ಲಿ 7 ವರ್ಷಗಳ ಕಾಲ ಜೈಲು ಶಿಕ್ಷೆಗೆ ಗುರಿಯಾಗಿದ್ದ ಷರೀಫ್‌ ಅವರು, ಜೈಲು ಶಿಕ್ಷೆಯಿಂದ ಪಾರಾಗಿ ವಿದೇಶದಲ್ಲಿ ಮೋಜು-ಮಸ್ತಿ ಮಾಡಲು ಆರೋಗ್ಯದ ನೆಪದಲ್ಲಿ ಜಾಮೀನು ಪಡೆದಿದ್ದಾರೆ ಎಂದು ಪಾಕಿಸ್ತಾನ ಆಡಳಿತಾರೂಢ ಪಾಕಿಸ್ತಾನ ತೆಹ್ರಿಕ್‌-ಇ-ಇನ್ಸಾಫ್‌ ಪಕ್ಷ ದೂರಿದೆ.