ಲಂಡನ್(ನ.01): ದೇಶದಲ್ಲಿ ದಿನೇ ದಿನೇ ಭಾರೀ ಪ್ರಮಾಣದಲ್ಲಿ ಕೊರೋನಾ ಕೇಸು ಪತ್ತೆಯಾಗುತ್ತಿರುವ ಬೆನ್ನಲ್ಲೇ, ಜರ್ಮನಿ, ಫ್ರಾನ್ಸ್‌ ಮಾದರಿಯಲ್ಲೇ ಬ್ರಿಟನ್‌ ಕೂಡಾ ಮತ್ತೆ ಒಂದು ತಿಂಗಳು ದೇಶವ್ಯಾಪಿ ಲಾಕ್ಡೌನ್‌ ಘೋಷಣೆ ಬಗ್ಗೆ ಚಿಂತನೆ ನಡೆಸಿದೆ. ಪ್ರಾಯಶಃ ಸೋಮವಾರವೇ ಈ ಕುರಿತು ಅಧಿಕೃತ ಘೋಷಣೆ ಹೊರಬೀಳುವ ನಿರೀಕ್ಷೆ ಇದೆ ಎಂದು ಮೂಲಗಳು ತಿಳಿಸಿವೆ.

ಕೊರೋನಾ ವೈರಸ್‌ ಹೆಚ್ಚಳ ಹಾಗೂ ಆಸ್ಪತ್ರೆಗೆ ದಾಖಲಾಗುವವರ ಸಂಖ್ಯೆ ಏರಿಕೆ ಹಿನ್ನೆಲೆಯಲ್ಲಿ ಪ್ರಧಾನಿ ಬೋರಿಸ್‌ ಜಾನ್ಸನ್‌ ಅವರು ಸಂಪುಟದ ಹಿರಿಯ ಸಹೋದ್ಯೋಗಿಗಳ ಜತೆ ಶುಕ್ರವಾರ ಮಾತುಕತೆ ನಡೆಸಿದ್ದಾರೆ. ನಿರ್ಬಂಧಗಳನ್ನು ಬಲಗೊಳಿಸುವ ಕುರಿತು ಚರ್ಚಿಸಿದ್ದಾರೆ. ಈ ಸಭೆಯಲ್ಲಿ ಬ್ರಿಟನ್‌ ಹಣಕಾಸು ಸಚಿವರೂ ಆಗಿರುವ ಇನ್ಪೋಸಿಸ್‌ ನಾರಾಯಣಮೂರ್ತಿ ಅವರ ಅಳಿಯ ರಿಶಿ ಸುನಾಕ್‌, ಆರೋಗ್ಯ ಸಚಿವ ಮ್ಯಾಟ್‌ ಹ್ಯಾಂಕಾಕ್‌ ಸೇರಿ ಹಲವರು ಭಾಗಿಯಾಗಿದ್ದರು ಎಂದು ಮೂಲಗಳು ವಿವರಿಸಿವೆ.

ಲಾಕ್‌ಡೌನ್‌ ಸಂದರ್ಭದಲ್ಲಿ ಅವಶ್ಯ ವಸ್ತುಗಳ ಅಂಗಡಿ ಹಾಗೂ ಶಾಲೆ ಹೊರತುಪಡಿಸಿ ಎಲ್ಲವನ್ನೂ ಮುಚ್ಚಿಸಲಾಗುತ್ತದೆ. ಕ್ರಿಸ್‌ಮಸ್‌ಗೆ ಮುನ್ನ ಲಾಕ್‌ಡೌನ್‌ ತೆರವುಗೊಳಿಸಲಾಗುತ್ತದೆ ಎಂದು ಹೇಳಲಾಗಿದೆ. ಹಾಗೊಂದು ವೇಳೆ, ಬ್ರಿಟನ್‌ ಕೂಡ ಲಾಕ್‌ಡೌನ್‌ ಘೋಷಿಸಿದ್ದೇ ಆದಲ್ಲಿ ಇಂತಹ ಕ್ರಮ ಕೈಗೊಂಡ ಯುರೋಪಿನ 4ನೇ ದೇಶವಾಗಲಿದೆ. ಈಗಾಗಲೇ ಫ್ರಾನ್ಸ್‌, ಜರ್ಮನಿ, ಬೆಲ್ಜಿಯಂನಲ್ಲಿ ಲಾಕ್‌ಡೌನ್‌ ಇದೆ.

ಏಪ್ರಿಲ್‌ನಲ್ಲಿ ಕೊರೋನಾ ಮೊದಲ ಅಲೆ ಕಾಣಿಸಿಕೊಂಡಾಗ ಬ್ರಿಟನ್‌ನಲ್ಲಿ ದಿನವೊಂದಕ್ಕೆ ಗರಿಷ್ಠ 7800 ಪ್ರಕರಣಗಳು ಕಂಡುಬಂದಿದ್ದವು. ಆದರೆ ಈಗ ನಿತ್ಯ ಸರಾಸರಿ 25 ಸಾವಿರ ಪ್ರಕರಣಗಳು ವರದಿಯಾಗುತ್ತಿವೆ. ಆಗ 1100ರ ಆಸುಪಾಸಿನಲ್ಲಿದ್ದ ಸಾವಿನ ಸಂಖ್ಯೆ ಈಗ 300ಕ್ಕೆ ಕುಸಿದಿದೆ. ಆದರೆ ಬ್ರಿಟನ್‌ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಳ್ಳದೇ ಬಿಟ್ಟಲ್ಲಿ ನಿತ್ಯ ಸಾವು 4000ಕ್ಕೆ ಏರಿಕೆಯಾಗಬಹುದು ಎಂಬ ವೈಜ್ಞಾನಿಕ ಮಾದರಿಗಳು ತಿಳಿಸಿವೆ ಎಂದು ಹೇಳಲಾಗಿದೆ.