ವಾಷಿಂಗ್ಟನ್‌[ಡಿ.19]: ಅಧಿಕಾರ ದುರುಪಯೋಗದ ಆರೋಪಕ್ಕೆ ತುತ್ತಾಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರನ್ನು ಅಮೆರಿಕದ ಸಂಸತ್ತಿನ ಕೆಳಮನೆಯಾದ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌(ಜನಪ್ರತಿನಿಧಿ ಸಭೆ ) ಬುಧವಾರ ವಾಗ್ದಂಡನೆಗೆ ಗುರಿಪಡಿಸಿದೆ. ಈ ಮೂಲಕ ವಾಗ್ದಂಡನೆಗೆ ಗುರಿಯಾದ 3ನೇ ಅಧ್ಯಕ್ಷ ಎಂಬ ಅಪಖ್ಯಾತಿಗೆ ಡೊನಾಲ್ಡ್‌ ಟ್ರಂಪ್‌ ಗುರಿಯಾಗಿದ್ದಾರೆ. ಮುಂದಿನ ತಿಂಗಳು ಸಂಸತ್ತಿನ ಮೇಲ್ಮನೆ ಆದ ಸೆನೆಟ್‌ನಲ್ಲಿ ವಾಗ್ದಂಡನೆ ಪ್ರಕ್ರಿಯೆಯ ಮೇಲೆ ಮತದಾನ ನಡೆಯಲಿದೆ. ಆದರೆ, ಸೆನೆಟ್‌ನಲ್ಲಿ ರಿಪಬ್ಲಿಕ್‌ಕನ್‌ ಪಕ್ಷ ಬಹುಮತ ಹೊಂದಿರುವ ಕಾರಣದಿಂದ ವಾಗ್ದಂಡನೆ ಪ್ರಕ್ರಿಯೆಗೆ ಸೋಲಾಗಲಿದೆ. ಹೀಗಾಗಿ ಟ್ರಂಪ್‌ ಪದಚ್ಯುತಿ ಆಗುವ ಭೀತಿ ಇಲ್ಲ. ಇದೇ ವೇಳೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ ತಮ್ಮನ್ನು ವಾಗ್ದಂಡನೆ ಪ್ರಕ್ರಿಯೆಗೆ ಗುರಿಪಡಿಸಿದ್ದಕ್ಕೆ ಟ್ರಂಪ್‌ ಸರಣಿ ಟ್ವೀಟ್‌ ಮೂಲಕ ತೀವ್ರ ಆಕ್ರೋಶ ಹೊರಹಾಕಿದ್ದಾರೆ.

ವಾಗ್ದಂಡನೆ ಮೇಲೆ ಸುದೀರ್ಘ ಚರ್ಚೆ:

ಟ್ರಂಪ್‌ ಅವರಿಗೆ ವಾಗ್ದಂಡನೆ ವಿಧಿಸುವ ಕುರಿತಂತೆ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ ಬುಧವಾರ ಸುಮಾರು ಆರು ತಾಸುಗಳ ಕಾಲ ಸುದೀರ್ಘ ಚರ್ಚೆ ನಡೆಸಲಾಯಿತು. ಬಳಿಕ ವಾಗ್ದಂಡನೆಯನ್ನು ಮತಕ್ಕೆ ಹಾಕಾಯಿತು. 435 ಸದಸ್ಯರ ಸದನದಲ್ಲಿ ಡೆಮಾಕ್ರೆಟ್‌ ಪಕ್ಷದ 232 ಸದಸ್ಯರು ವಾಗ್ದಂಡನೆಯ ಪರವಾಗಿ ಮತ ಚಲಾಯಿಸಿದ್ದಾರೆ. ಈ ಮೂಲಕ ವಾಗ್ದಂಡನೆಗೆ ಅನುಮೋದನೆ ನೀಡಲಾಯಿತು.

ಟ್ರಂಪ್‌ ತೀವ್ರ ಆಕ್ರೋಶ:

ತಮ್ಮ ವಿರುದ್ಧ ಹೌಸ್‌ ಆಫ್‌ ರೆಪ್ರೆಸೆಂಟೇಟಿವ್‌ನಲ್ಲಿ ವಾಗ್ದಂಡನೆ ವಿಧಿಸುತ್ತಿದ್ದಂತೆ ಕೆಂಡಾಮಂಡಲರಾದ ಟ್ರಂಪ್‌ ಸರಣಿ ಟ್ವೀಟ್‌ಗಳ ಮೂಲಕ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ. ಡೆಮೋಕ್ರಾಟ್‌ ಸದಸ್ಯರು ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ನನ್ನನ್ನು ವಾಗ್ದಂಡನೆ ಪ್ರಕ್ರಿಯೆಗೆ ಗುರಿಪಡಿಸಿದ್ದಾರೆ. ಇದೊಂದು ಅಸಂವಿಧಾನಿಕ, ಅಮೆರಿಕ ಶಾಸಕಾಂಗ ಇತಿಹಾಸದಲ್ಲೇ ಈ ರೀತಿ ಎಂದೂ ಆಗಿರಲಿಲ್ಲ. ಮುಂದಿನ ಅಧ್ಯಕ್ಷರಿಗೆ ಈ ರೀತಿ ಆಗದಿರಲಿ ಎಂದು ಪ್ರಾರ್ಥಿಸುತ್ತೇನೆ. ವಾಗ್ದಂಡನೆಗೆ ಗುರಿಪಡಿಸುವಂತಹ ತಪ್ಪನ್ನು ನಾನು ಮಾಡಿಲ್ಲ. ಅವರಿಗೆ ಅಧ್ಯಕ್ಷ ಹುದ್ದೆ ಬೇಕಾಗಿದೆ. ಅವರಿಗೆ ತನಿಖೆ ನಡೆಸುವ ಧೈರ್ಯ ಇಲ್ಲ. ಕ್ಷುಲ್ಲಕ ಕಾರಣಕ್ಕೆ ನನ್ನ ವಿರುದ್ಧ ವಾಗ್ದಂಡನೆ ವಿಧಿಸಲಾಗಿದೆ’ ಎಂದು ಹೇಳಿದ್ದಾರೆ. ಇದಕ್ಕೂ ಮುನ್ನ ಗುರುವಾರ ಮುಂಜಾನೆ ತಮ್ಮ ವಿರುದ್ಧದ ವಾಗ್ದಂಡನೆಯನ್ನು ತಡೆ ಹಿಡಿಯುವಂತೆ ಕೋರಿ ಸದನದ ಸ್ಪೀಕರ್‌ಗೆ ಟ್ರಂಪ್‌ ಪತ್ರ ಬರೆದಿದ್ದರು.

ಟ್ರಂಪ್‌ ವಿರುದ್ಧದ ಆರೋಪವೇನು?

ಮುಂಬರುವ ಅಧ್ಯಕ್ಷೀಯ ಚುನಾವಣೆಯಲ್ಲಿ ತಮ್ಮ ಎದುರಾಳಿಯಾಗಬಹುದಾದ ಜೋ ಬಿಡೆನ್‌ ಅವರ ವ್ಯಕ್ತಿತ್ವಕ್ಕೆ ಚ್ಯುತಿ ತರುವ ಮಾಹಿತಿಯನ್ನು ಬಹಿರಂಗಪಡಿಸುವಂತೆ ಟ್ರಂಪ್‌ ಅವರು ಉಕ್ರೇನ್‌ ಅಧ್ಯಕ್ಷ ವ್ಲಾಡಿಮಿರ್‌ ಝೆಲೆನ್ಸಿ$್ಕ ಅವರ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇದಕ್ಕಾಗಿ ಅಮೆರಿಕದಿಂದ ಉಕ್ರೇನ್‌ ಸೇನಾ ಕಾರ್ಯಾಚರಣೆಗಾಗಿ ಬಿಡುಗಡೆಯಾದ 400 ಮಿಲಿಯನ್‌ ಡಾಲರ್‌ ಅನ್ನು ಟ್ರಂಪ್‌ ತಡೆ ಹಿಡಿದಿದ್ದಾರೆ ಎನ್ನಲಾಗಿದೆ.