96 ವರ್ಷದ Queen Elizabeth II ಆರೋಗ್ಯದ ಬಗ್ಗೆ ಇಡೀ ದೇಶಕ್ಕೆ ಚಿಂತೆಯಾಗಿದೆ: ಬ್ರಿಟನ್‌ ಪ್ರಧಾನಿ

ಇಂಗ್ಲೆಂಡ್ ರಾಣಿ ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದು, ಈ ಹಿನ್ನೆಲೆ ಬಕಿಂಗ್ಹ್ಯಾಮ್ ಅರಮನೆಯು ಇಂಗ್ಲೆಂಡ್ ರಾಣಿಯ ಆರೋಗ್ಯದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

doctors concerned over queen elizabeth ii health as she is under medical supervision ash

ಬ್ರಿಟನ್‌ ರಾಣಿ ಎಲಿಜಬೆತ್ II (Queen Elizabeth II) ಅವರಿಗೆ ತೀವ್ರ ಅನಾರೋಗ್ಯವಾಗಿದ್ದು, ಅವರು ವೈದ್ಯಕೀಯ ಮೇಲ್ವಿಚಾರಣೆಯಲ್ಲಿದ್ದಾರೆ (Medical Supervision) ಎಂದು ತಿಳಿದುಬಂದಿದೆ. ಈ ಹಿನ್ನೆಲೆ 96 ವರ್ಷದ ಬ್ರಿಟನ್‌ನ ರಾಣಿಯ ಆರೋಗ್ಯದ ಬಗ್ಗೆ ವೈದ್ಯರು ಚಿಂತಿತರಾಗಿದ್ದಾರೆಂದು ಬ್ರಿಟನ್‌ ವೈದ್ಯರು ಹೇಳಿಕೆ ನೀಡಿದ್ದಾರೆ. ವೈದ್ಯರ ಹೇಳಿಕೆಯ ಬಳಿಕ ಈಗ ಅವರ ಕುಟುಂಬದ ಸದಸ್ಯರೆಲ್ಲ ರಾಣಿಯವರ ಜತೆಗಿರಲು ಆಗಮಿಸುತ್ತಿದ್ದಾರೆ. ಬ್ರಿಟನ್‌ಗೆ ದೀರ್ಘಾವಧಿಯ ಕಾಲದಿಂದ ರಾಣಿಯಾಗಿರುವ ಹಾಗೂ ವಿಶ್ವದ ಅತ್ಯಂತ ಹಿರಿಯ ದೊರೆ ಎಂದು ಪರಿಗಣಿಸಲಾಗಿರುವ ಕ್ವೀನ್‌ ಎಲಿಜಬೆತ್ II ​​ಕಳೆದ ವರ್ಷದ ಅಂತ್ಯದಿಂದ "ಎಪಿಸೋಡಿಕ್ ಮೊಬಿಲಿಟಿ ಸಮಸ್ಯೆಗಳು" ("Episodic Mobility Problems") ಎಂದು ಕರೆಯುವ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಬಕಿಂಗ್ಹ್ಯಾಮ್‌ ಅರಮನೆಯ (Buckhingham Palace) ಮೂಲಗಳು ಮಾಹಿತಿ ನೀಡಿವೆ.

"ಈ ಬೆಳಗ್ಗೆ ಹೆಚ್ಚಿನ ಮೌಲ್ಯಮಾಪನದ ನಂತರ, ರಾಣಿಯ ವೈದ್ಯರು ಅವರ ಆರೋಗ್ಯದ ಬಗ್ಗೆ ಕಾಳಜಿ ವಹಿಸಿದ್ದಾರೆ ಮತ್ತು ಅವರನ್ನು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಉಳಿಸಿಕೊಳ್ಳಲು ಶಿಫಾರಸು ಮಾಡಿದ್ದಾರೆ" ಎಂದು ಅರಮನೆಯ ಅಧಿಕಾರಿಗಳು ಹೇಳಿಕೆಯಲ್ಲಿ ತಿಳಿಸಿದೆ. ಆದರೂ, "ರಾಣಿಯು ಆರಾಮವಾಗಿ ಮತ್ತು ಬಾಲ್ಮೋರಲ್‌ನಲ್ಲಿದ್ದಾರೆ’’. ಅವರ ಹಿರಿಯ ಮಗ ಮತ್ತು ಉತ್ತರಾಧಿಕಾರಿ ಪ್ರಿನ್ಸ್ ಚಾರ್ಲ್ಸ್ ಹಾಗೂ ಅವರ ಪತ್ನಿ ಕ್ಯಾಮಿಲ್ಲಾ ಅವರು ತಮ್ಮ ಹಿರಿಯ ಮಗ ಪ್ರಿನ್ಸ್ ವಿಲಿಯಂ ಜೊತೆಗೆ ಅವರು ತಂಗಿರುವ ಸ್ಕಾಟಿಷ್ ಮನೆ ಬಾಲ್ಮೋರಲ್‌ ಕ್ಯಾಸಲ್‌ಗೆ ಪ್ರಯಾಣಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು, ರಾಣಿಯ ಆರೋಗ್ಯದ ಬಗ್ಗೆ ಮಾಹಿತಿ ದೊರೆತ ಬೆನ್ನಲ್ಲೇ ಕ್ಯಾಂಟರ್‌ಬರ್ರಿಯ ಆರ್ಚ್‌ ಬಿಷಪ್‌ "ನನ್ನ ಪ್ರಾರ್ಥನೆಗಳು ಹಾಗೂ @churchofengland ಮತ್ತು ರಾಷ್ಟ್ರದಾದ್ಯಂತದ ಜನರ ಪ್ರಾರ್ಥನೆಗಳು ಇಂದು ರಾಣಿಯವರ ಜೊತೆಯಲ್ಲಿವೆ" ಎಂದು ಜಸ್ಟಿನ್ ವೆಲ್ಬಿ ಟ್ವೀಟ್‌ ಮಾಡಿದ್ದಾರೆ. ಕಳೆದ ಅಕ್ಟೋಬರ್‌ನಲ್ಲಿ, ಎಲಿಜಬೆತ್ ಕೇವಲ ಒಂದು ರಾತ್ರಿ ಆಸ್ಪತ್ರೆಯಲ್ಲಿ ಕಳೆದಿದ್ದರು ಮತ್ತು ಅಂದಿನಿಂದ ಅವರು ತನ್ನ ಸಾರ್ವಜನಿಕ ತೊಡಗಿಸಿಕೊಳ್ಳುವಿಕೆಯನ್ನು ಕಡಿತಗೊಳಿಸಬೇಕಾಯಿತು. ಇನ್ನು, ತಮ್ಮ ವೈದ್ಯರು ವಿಶ್ರಾಂತಿ ಪಡೆಯಲು ಸಲಹೆ ನೀಡಿದ ನಂತರ ಹಿರಿಯ ಸಚಿವರೊಂದಿಗಿನ ವರ್ಚುವಲ್ ಸಭೆಯನ್ನು ಬುಧವಾರ ಅವರು ರದ್ದುಗೊಳಿಸಿದರು. ಇದಕ್ಕೂ ಮುನ್ನ, ಮಂಗಳವಾರವಷ್ಟೇ ಬ್ರಿಟನ್‌ನ 15 ನೇ ಪ್ರಧಾನ ಮಂತ್ರಿಯಾದ ಲಿಜ್ ಟ್ರಸ್ ಅವರನ್ನು ಬಾಲ್ಮೋರಲ್‌ನಲ್ಲಿ ಬ್ರಿಟನ್‌ ರಾಣಿ ನೇಮಕ ಮಾಡಿದ ಚಿತ್ರಗಳನ್ನು ಬಿಡುಗಡೆ ಮಾಡಲಾಗಿತ್ತು. 

ವೈದ್ಯರ ಸಲಹೆಯ ಬಳಿಕ ಬ್ರಿಟನ್‌ ರಾಣಿಯ ತಕ್ಷಣದ ಕುಟುಂಬ ಸದಸ್ಯರಿಗೆ ತಿಳಿಸಲಾಗಿದೆ.  ಆದರೆ, ರಾಣಿಯು ಕುಸಿದು ಬಿದ್ದಿದ್ದಾರೆ ಎಂಬ ಊಹಾಪೋಹಗಳನ್ನು ಬಕಿಂಗ್ಹ್ಯಾಮ್‌ ಅರಮನೆಯ ಮೂಲಗಳು ತಳ್ಳಿಹಾಕಿವೆ. ಎಲಿಜಬೆತ್ II 1952 ರಿಂದ ಅಂದರೆ 70 ವರ್ಷಗಳಿಂದ ಕೆನಡಾ, ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಸೇರಿದಂತೆ ಬ್ರಿಟನ್ ಮತ್ತು 12 ಇತರ ದೇಶಗಳ ರಾಣಿಯಾಗಿದ್ದಾರೆ. 

ಬ್ರಿಟನ್‌ ನೂತನ ಪ್ರಧಾನಿ ಲಿಜ್‌ ಟ್ರಸ್‌ ಪ್ರತಿಕ್ರಿಯೆ
ಬ್ರಿಟನ್‌ ರಾಣಿ ಎಲಿಜಬೆತ್‌  II ಆರೋಗ್ಯದ ಬಗ್ಗೆ ಟ್ವೀಟ್‌ ಮಾಡಿದ ನೂತನ ಪ್ರಧಾನಿ ಲಿಜ್‌ ಟ್ರಸ್‌, ‘’ಈ ಸುದ್ದಿಯಿಂದ ಇಡೀ ದೇಶ ತೀವ್ರ ಕಳವಳಕ್ಕೆ ಒಳಗಾಗಲಿದೆ’’ ಎಂದು ಹೇಳಿದ್ದಾರೆ. "ನನ್ನ ಆಲೋಚನೆಗಳು - ಮತ್ತು ನಮ್ಮ ಯುನೈಟೆಡ್ ಕಿಂಗ್‌ಡಮ್‌ನಾದ್ಯಂತದ ಜನರ ಆಲೋಚನೆಗಳು - ಈ ಸಮಯದಲ್ಲಿ ಹರ್ ಮೆಜೆಸ್ಟಿ ದಿ ಕ್ವೀನ್ ಮತ್ತು ಅವರ ಕುಟುಂಬದೊಂದಿಗೆ ಇವೆ" ಎಂದೂ ಟ್ವೀಟ್‌ ಮಾಡಿದ್ದಾರೆ. ಇನ್ನು, ಅಲ್ಲಿನ ವಿರೋಧ ಪಕ್ಷದ ಲೇಬರ್ ನಾಯಕ ಕೀರ್ ಸ್ಟಾರ್ಮರ್ ಸಹ ಈ ಬಗ್ಗೆ ಆಘಾತ ವ್ಯಕ್ತಪಡಿಸಿದ್ದು, "ದೇಶದ ಉಳಿದ ಭಾಗಗಳ ಜೊತೆಗೆ, ಇಂದು ಮಧ್ಯಾಹ್ನ ಬಕಿಂಗ್ಹ್ಯಾಮ್‌ ಅರಮನೆಯಿಂದ ಬಂದ ಸುದ್ದಿಯಿಂದ ನಾನು ತುಂಬಾ ಚಿಂತಿತನಾಗಿದ್ದೇನೆ" ಎಂದು ಹೇಳಿದ್ದಾರೆ.

Latest Videos
Follow Us:
Download App:
  • android
  • ios