ವಾಷಿಂಗ್ಟನ್‌(ಆ.21): ನವೆಂಬರ್‌ನಲ್ಲಿ ನಡೆಯಲಿರುವ ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಡೆಮಾಕ್ರೆಟಿಕ್‌ ಪಕ್ಷದಿಂದ ಉಪಾಧ್ಯಕ್ಷ ಹುದ್ದೆಯ ನಾಮನಿರ್ದೇಶನವನ್ನು ಭಾರತೀಯ ಮೂಲದ ಕಮಲಾ ಹ್ಯಾರಿಸ್‌ ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ.

ಅಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಇತ್ತೀಚೆಗಷ್ಟೇ ತಮ್ಮ ಉಪಾಧ್ಯಕ್ಷರಾಗಿ ಕಮಲಾ ಹ್ಯಾರಿಸ್‌ರನ್ನು ಆಯ್ಕೆ ಮಾಡಿದ್ದರು. ಆ ನಾಮನಿರ್ದೇಶನವನ್ನು ಬುಧವಾರ ನಡೆದ ಡೆಮಾಕ್ರೆಟಿಕ್‌ ಪಕ್ಷದ ರಾಷ್ಟ್ರೀಯ ಅಧಿವೇಶನದಲ್ಲಿ ಕಮಲಾ ಒಪ್ಪಿಕೊಂಡಿದ್ದಾರೆ. ತನ್ಮೂಲಕ ಅಮೆರಿಕದ ಉಪಾಧ್ಯಕ್ಷ ಹುದ್ದೆಗೆ ಪ್ರಮುಖ ಪಕ್ಷವೊಂದರಿಂದ ಸ್ಪರ್ಧಿಸುತ್ತಿರುವ ಪ್ರಥಮ ಭಾರತೀಯ ಮೂಲದ ಹಾಗೂ ಕಪ್ಪು ಮಹಿಳೆಯಾಗಿ ದಾಖಲೆ ಬರೆದಿದ್ದಾರೆ.

ಇದೇ ವೇಳೆ ಮಾತನಾಡಿದ ಕಮಲಾ ಹ್ಯಾರಿಸ್‌, ಈ ಚುನಾವಣೆಯಲ್ಲಿ ಭಾರತೀಯ ಮೂಲದ ಅಮೆರಿಕನ್ನರೂ ಸೇರಿದಂತೆ ಏಷ್ಯನ್‌ ಅಮೆರಿಕನ್ನರು ಮಹತ್ವದ ಪಾತ್ರ ವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

55 ವರ್ಷದ ಕಮಲಾ ಅಮೆರಿಕದ ಸೆನೆಟ್‌ ಸದಸ್ಯೆಯಾಗಿದ್ದು, ಖ್ಯಾತ ವಕೀಲೆಯೂ ಆಗಿದ್ದಾರೆ. ಇವರ ತಾಯಿ ಚೆನ್ನೈ ಮೂಲದವರು. ತಂದೆ ಆಫ್ರಿಕಾದ ಜಮೈಕಾದವರು. ಕಮಲಾ ಅಮೆರಿಕದಲ್ಲೇ ಹುಟ್ಟಿಬೆಳೆದಿದ್ದಾರೆ. ನ.3ರಂದು ಅಮೆರಿಕದ ಅಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದ್ದು, ರಿಪಬ್ಲಿಕನ್‌ ಪಕ್ಷದ ಅಭ್ಯರ್ಥಿ, ದೇಶದ ಹಾಲಿ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ವಿರುದ್ಧ ಡೆಮಾಕ್ರೆಟಿಕ್‌ ಪಕ್ಷದ ಅಭ್ಯರ್ಥಿ ಜೋ ಬೈಡನ್‌ ಗೆದ್ದರೆ ಕಮಲಾ ಉಪಾಧ್ಯಕ್ಷೆಯಾಗಲಿದ್ದಾರೆ.