* ಚೆಕ್‌ ದೇಶದಲ್ಲಿ ಓಡಾಟಕ್ಕೆ ಲಸಿಕೆ/ಸೋಂಕಿಂದ ಚೇತರಿಕೆ ಕಡ್ಡಾಯ* ಸ್ವತಃ ಕೋವಿಡ್‌ ಅಂಟಿಸಿಕೊಂಡ ಲಸಿಕೆ ವಿರೋಧಿ ಗಾಯಕಿ ಸಾವು! * ಲಸಿಕೆ ಬೇಡ, ಸೋಂಕೇ ಓಕೆ ಎಂದು ಪ್ರಾಣ ತೆತ್ತ ಜನಪದ ಗಾಯಕಿ

ಪ್ರೇಗ್‌ (ಜ.20): ಲಸಿಕೆ ಪಡೆಯುವುದನ್ನು ವಿರೋಧಿಸಿ, ಉದ್ದೇಶಪೂರ್ವಕವಾಗಿ ಕೋವಿಡ್‌ ಅಂಟಿಸಿಕೊಂಡಿದ್ದ ಚೆಕ್‌ ಗಣರಾಜ್ಯದ ಜಾನಪದ ಗಾಯಕಿ ಹಾನಾ ಹೋರ್ಕಾ (57) ಎಂಬಾಕೆ ಭಾನುವಾರ ಸೋಂಕಿಗೆ ಬಲಿಯಾಗಿದ್ದಾರೆ.

ಐರೋಪ್ಯ ಒಕ್ಕೂಟದ ರಾಷ್ಟ್ರಗಳಲ್ಲಿ ಸಾಂಸ್ಕೃತಿಕ ಮತ್ತು ಕ್ರೀಡಾ ಸೌಲಭ್ಯ ಪಡೆಯಲು ಅಥವಾ ಬಾರ್‌ ಮತ್ತು ರೆಸ್ಟೋರೆಂಟ್‌ಗಳಿಗೆ ಭೇಟಿ ನೀಡಲು ಲಸಿಕೆ ಪಡೆದ ಅಥವಾ ಇತ್ತೀಚೆಗೆ ಸೋಂಕಿಗೆ ಒಳಗಾಗಿದ್ದ ಬಗ್ಗೆ ಸಾಕ್ಷ್ಯ ಒದಗಿಸಿ ಆರೋಗ್ಯ ಪಾಸ್‌ ಪಡೆಯಬೇಕು. ಆದರೆ ಲಸಿಕೆ ಪಡೆಯಲು ಮನಸ್ಸಿಲ್ಲದ ಹಾನಾ, ಲಸಿಕೆ ವಿರೋಧಿ ಹೋರಾಟಗಾರ್ತಿಯಾಗಿದ್ದರು. ಹೀಗಾಗಿ ಆರೋಗ್ಯ ಪಾಸ್‌ ಪಡೆಯಲು ಹಾನಾ ಉದ್ದೇಶಪೂರ್ವಕವಾಗಿ ಸೋಂಕು ಅಂಟಿಸಿಕೊಳ್ಳುವ ‘ಸಾಹಸ’ಕ್ಕೆ ಮುಂದಾಗಿದ್ದರು. ಲಸಿಕೆ ಪಡೆದಿದ್ದರೂ ಸೋಂಕಿತರಾಗಿದ್ದ ಪತಿ ಹಾಗೂ ಪುತ್ರನ ಬಳಿ ಯಾವುದೇ ಕೋವಿಡ್‌ ನಿಯಮ ಪಾಲಿಸದೆ ಬೇಕಾಬಿಟ್ಟಿವರ್ತಿಸುವ ಮೂಲಕ ಕೋವಿಡ್‌ ತರಿಸಿಕೊಂಡಿದ್ದರು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಪುತ್ರ ಜಾನ್‌ರೆಕ್‌, ‘ನಾನು ಮತ್ತು ತಂದೆ ಇಬ್ಬರೂ ಕೋವಿಡ್‌ ಲಸಿಕೆ ಪಡೆದಿದ್ದರೂ ಕೊರೋನಾ ಸೋಂಕಿಗೆ ತುತ್ತಾಗಿದ್ದೆವು. ಆದರೆ ಹಾನಾ ಅವರು ಲಸಿಕೆಗೆ ವಿರೋಧ ವ್ಯಕ್ತಪಡಿಸಿದ್ದರು. ಆರೋಗ್ಯ ಪಾಸ್‌ ಪಡೆದು ಸೌನಾ, ಥಿಯೇಟರ್‌ಗೆ ಭೇಟಿ ನೀಡಲೆಂದೇ ಉದ್ದೇಶಪೂರ್ವಕವಾಗಿ ಕೋವಿಡ್‌ ಸೋಂಕು ಬರಿಸಿಕೊಂಡರು’ ಎಂದು ತಿಳಿಸಿದ್ದಾರೆ.

‘ಇದೇ ವೇಳೆ ಸ್ಥಳೀಯ ಲಸಿಕೆ ವಿರೋಧಿ ನಾಯಕರು ತಮ್ಮ ತಾಯಿಗೆ ಲಸಿಕೆ ಪಡೆಯದಂತೆ ಮನವೊಲಿಸಿದ್ದರು. ಅವರನ್ನು ಪ್ರಭಾವಿಸಿದ್ದವರು ಯಾರೆಂದೂ ನನಗೆ ಗೊತ್ತಿದೆ. ನನ್ನ ತಾಯಿ ಕುಟುಂಬಕ್ಕಿಂತ ಹೆಚ್ಚಾಗಿ ಅಪರಿಚಿತರನ್ನು ನಂಬುತ್ತಿದ್ದರು’ ಎಂದು ಪುತ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಾವಿಗೂ ಎರಡು ದಿನ ಮುಂಚೆ ಸಾಮಾಜಿಕ ಜಾಲತಾಣಗಳಲ್ಲಿ ಹಾನಾ ‘ನಾನು ಬದುಕುಳಿದಿದ್ದೇನೆ. ಕಾಯಿಲೆ ತೀವ್ರವಾಗಿತ್ತು. ಆದರೆ ನಾನೀಗ ಥೆಯೇಟರ್‌, ಸೌನಾ, ಕನ್ಸರ್ಟ್‌...ತುರ್ತಾಗಿ ಸಮುದ್ರಕ್ಕೆ ಪ್ರವಾಸ ಹೋಗಬೇಕು’ ಎಂದು ಬರೆದುಕೊಂಡಿದ್ದರು. ಆದರೆ ಇದರ ಬೆನ್ನಲ್ಲೇ ವಿಧಿಯು ಗಾಯಕಿಯನ್ನು ಬಲಿಪಡೆದಿದೆ.

ಏನಿದು ಪ್ರಕರಣ?

- ಚೆಕ್‌ನಲ್ಲಿ ಪ್ರಯಾಣ, ಹೋಟೆಲ್‌, ಕಾರ‍್ಯಕ್ರಮಕ್ಕೆ ತೆರಳಲು ಲಸಿಕೆ ಪ್ರಮಾಣಪತ್ರ ಅಥವಾ ಇತ್ತೀಚೆಗೆ ಕೋವಿಡ್‌ನಿಂದ ಚೇತರಿಕೆ ಕಡ್ಡಾಯ

- ಆದರೆ, ಸೋಂಕು ಬೇಕಾದರೂ ಬರಿಸಿಕೊಂಡೇನು, ಲಸಿಕೆ ಹಾಕಿಸಿಕೊಳ್ಳಲ್ಲ ಎಂಬ ನಿಲುವು ತಾಳಿದ್ದ ಜಾನಪದ ಗಾಯಕಿ ಹನಾ ಹೋರ್ಕಾ

- ಇದೇ ವೇಳೆ, ಲಸಿಕೆ ಹಾಕಿಸಿಕೊಂಡಿದ್ದ ಆಕೆಯ ಪತಿ, ಪುತ್ರಗೆ ಕೋವಿಡ್‌ ಸೋಂಕು. ಅವರ ಜತೆಗಿದ್ದು ಸೋಂಕು ಬರಿಸಿಕೊಂಡಿದ್ದ ಗಾಯಕಿ

- ಕೇವಲ 2 ದಿನ ಹಿಂದಷ್ಟೇ ‘ಭಾರೀ ಸೋಂಕಿಂದ ಚೇತರಿಸಿದ್ದೇನೆ. ಇನ್ನು ಎಲ್ಲಿ ಬೇಕಾದರೂ ಓಡಾಡಬಹುದು’ ಎಂದಿದ್ದಾಕೆ ಹಠಾತ್‌ ಸಾವು