* ವಿಜ್ಞಾನಿಗಳಿಗೇ ಅಚ್ಚರಿ ಮೂಡಿಸಿದ ಅಮೆರಿಕ ವಿದ್ಯಮಾನ* ಲಸಿಕೆ ಪಡೆದಾಕ್ಷಣ ಸುರಕ್ಷಿತವಲ್ಲ ಎಂದು ಸಾಬೀತು* ಲಸಿಕೆ ಪಡೆದವರಲ್ಲೂ ಹೆಚ್ಚುತ್ತಿದೆ ಸೋಂಕು* ಈ ಬೆಳವಣಿಗೆಗೆ ಡೆಲ್ಟಾವೈರಸ್‌? ಜನರ ನಡವಳಿಕೆ ಕಾರಣ?

ನ್ಯೂಯಾರ್ಕ್(ಆ.25): ಕೋವಿಡ್‌ ಲಸಿಕೆ ಪಡೆದವರಿಗೆ ಮತ್ತೆ ಸೋಂಕು ಕಾಣಿಸದು, ಕಾಣಿಸಿದರೂ ಅಂಥ ಪ್ರಮಾಣ ಕಡಿಮೆ ಎಂಬುದು ಇದುವರೆಗಿನ ಎಲ್ಲರ ನಂಬಿಕೆ. ಆದರೆ ಲಸಿಕೆ ಪಡೆದವರಲ್ಲೂ ನಿಧಾನವಾಗಿ ಸೋಂಕಿನ ಪ್ರಮಾಣ ಅಚ್ಚರಿಯ ರೀತಿಯಲ್ಲಿ ಹೆಚ್ಚುತ್ತಿದೆ. ಜೊತೆಗೆ ಅವರಲ್ಲೂ ಆಸ್ಪತ್ರೆ ದಾಖಲಾತಿ ಹೆಚ್ಚುತ್ತಿದೆ ಎಂದು ಅಮೆರಿಕದ ತಜ್ಞರು ಎಚ್ಚರಿಕೆ ನೀಡಿದ್ದಾರೆ.

ಆದರೆ ಇಂಥ ಎಚ್ಚರಿಕೆಯ ನಡುವೆಯೆ, ಇದಕ್ಕೆ ಡೆಲ್ಟಾವೈರಸ್‌ ಕಾರಣವೋ ಅಥವಾ ಲಸಿಕೆ ಪಡೆದಾಯ್ತು ಇನ್ನೇನೂ ತೊಂದರೆ ಇಲ್ಲ ಎಂದು ಜನರು ಎಲ್ಲಾ ಕೋವಿಡ್‌ ಮಾರ್ಗಸೂಚಿ ಮರೆತಿದ್ದು ಕಾರಣವೋ ಎಂಬುದೂ ಗೊತ್ತಿಲ್ಲ ಎಂದು ಅಮೆರಿಕದ ತಜ್ಞರು ಹೇಳಿದ್ದಾರೆ.

ಲಸಿಕೆ ಪಡೆದವರ ವರ್ತನೆ ಹೇಗಿರಬೇಕು ಎಂಬ ಬಗ್ಗೆ ಸರ್ಕಾರ, ವಿಜ್ಞಾನಿಗಳೇ ಇನ್ನೂ ಸ್ಪಷ್ಟವಾಗಿ ಏನೂ ಹೇಳದ ಸ್ಥಿತಿಯಲ್ಲಿರುವ ಕಾರಣ, ಲಸಿಕೆ ಪಡೆದವರು ತಾವು ಹೇಗಿರಬೇಕೆಂಬ ಬಗ್ಗೆಯೇ ಗೊಂದಲದಲ್ಲಿರುವಂತಾಗಿದೆ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೋಂಕು ಏರಿಕೆ:

ಅಮೆರಿಕದ ಮೆಸಾಚ್ಯುಸೆಟ್ಸ್‌ನ ಪ್ರಾವಿನ್ಸ್‌ಟೌನ್‌ನಲ್ಲಿ ಜುಲೈ ತಿಂಗಳ ಅಂತ್ಯದಲ್ಲಿ ಸಾವಿರಾರು ಜನರ ಲಸಿಕೆ ಪಡೆದವರು ಮತ್ತು ಪಡೆಯದೇ ಇದ್ದವರು ಒಂದಾಗಿ ಪಾರ್ಟಿ ಮಾಡಿದ್ದರು. ಅದಾದ ಕೆಲವೇ ದಿನಗಳಲ್ಲಿ 469 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಶೇ.75ರಷ್ಟುಜನರು ಲಸಿಕೆ ಪಡೆದಿದ್ದವರೇ ಆಗಿದ್ದರು. ಇದು ಎಚ್ಚರಿಕೆಯ ಕರೆಗಂಟೆ ಎಂದು ತಜ್ಞರು ಹೇಳಿದ್ದಾರೆ.

ಇನ್ನು ಅಮೆರಿಕದ ಸೋಂಕು ನಿಯಂತ್ರಣ ಮತ್ತು ತಡೆ ಕೇಂದ್ರ ಸಿಡಿಸಿ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿ ಅನ್ವಯ, ಕಳೆದ ಮೇ ತಿಂಗಳ ಬಳಿಕ ಲಸಿಕೆ ಪಡೆದವರಲ್ಲಿ ಸೋಂಕಿನ ಪ್ರಮಾಣ ನಿಧಾನವಾಗಿ ಏರುತ್ತಿದೆ. ಜುಲೈ ಮಧ್ಯಭಾಗದ ವೇಳೆ ಇಂಥವರ ಪ್ರಮಾಣ ಒಟ್ಟು ಸೋಂಕಿತರಲ್ಲಿ ಶೇ.4ಕ್ಕೆ ತಲುಪಿದೆ. ಇದಕ್ಕೆ ವಿಶ್ವದಲ್ಲೇ ಅತ್ಯಂತ ಸಾಂಕ್ರಾಮಿಕ ಎನ್ನಲಾದ ಡೆಲ್ಟಾರೂಪಾಂತರಿ ವೈರಸ್‌ ಪ್ರಮಾಣ ಹೆಚ್ಚಳ ಮತ್ತು ಲಸಿಕೆ ಪಡೆದವರು ಕೋವಿಡ್‌ ಮಾರ್ಗಸೂಚಿ ಪಾಲಿಸದೇ ಇರುವುದೇ ಕಾರಣವಾಗಿರಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ.

ಇನ್ನು ಕೊಲರಾಡೋ ರಾಜ್ಯದಲ್ಲಿ ನಡೆದ ಮತ್ತೊಂದು ಅಧ್ಯಯನ ವರದಿ ಅನ್ವಯ, ಇತರೆ ಭಾಗಗಳಿಗೆ ಹೋಲಿಸಿದರೆ ಮೆಸಾ ಕೌಂಟಿ ಪ್ರದೇಶದಲ್ಲಿ ಲಸಿಕೆ ಪಡೆದವರಲ್ಲಿ ಸೋಂಕು ಕಾಣಿಸಿಕೊಳ್ಳುವ ಪ್ರಮಾಣ ಹೆಚ್ಚಿದೆ. ಅಲ್ಲಿ ಡೆಲ್ಟಾವೈರಸ್‌ ಹಾವಳಿ ಹೆಚ್ಚಿರುವುದು ಮತ್ತು ಈ ಕೌಂಟಿ ಪ್ರದೇಶದಲ್ಲಿ ಒಟ್ಟಾರೆ ಲಸಿಕೆ ನೀಡಿಕೆ ಪ್ರಮಾಣ ಕಡಿಮೆ ಇರುವುದು ಕಾರಣವಾಗಿರಬಹುದು ಎಂದು ಹೇಳಿದೆ.

ಇನ್ನು ‘ದಿನ ಕಳೆದಂತೆ ಲಸಿಕೆಯ ಪರಿಣಾಮ ಕಡಿಮೆಯಾಗುತ್ತ ಹೋಗುವುದೇ, ಲಸಿಕೆ ಪಡೆದವರಲ್ಲೂ ಸೋಂಕು ಕಾಣಿಸಿಕೊಂಡು ಅವರು ಆಸ್ಪತ್ರೆಗೆ ದಾಖಲಾಗುವ ಪ್ರಮಾಣ ಹೆಚ್ಚಳಕ್ಕೆ ಕಾರಣವಾಗುತ್ತಿರಬಹುದು. ಇದು ಮುಂದಿನ ದಿನಗಳಲ್ಲಿ ಬೂಸ್ಟರ್‌ ಡೋಸ್‌ ಪಡೆಯಬೇಕಾದ ಅಗತ್ಯವನ್ನು ಹೇಳುತ್ತಿದೆ ’ ಎಂದು ಇಸ್ರೇಲ್‌ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.