Asianet Suvarna News Asianet Suvarna News

Coronavirus: ಚೀನಾದಲ್ಲಿ ಕಂಟ್ರೋಲ್.. ಕೊರಿಯಾದಲ್ಲಿ ಕೊರೋನಾ ಹುಚ್ಚಾಟ

*  ಕೊರಿಯಾದಲ್ಲಿ ದಾಖಲೆಯ 6 ಲಕ್ಷ ಕೇಸು, 429 ಸಾವು

* ಚೀನಾದಲ್ಲಿ 1226 ಹೊಸ ಕೇಸು, ಸತತ 2ನ ದಿನ ಇಳಿಕೆ
* ಭಯ ಹುಟ್ಟಿಸಿದ್ದ ಕೇಸುಗಳ ಸಂಖ್ಯೆ
* ಕರ್ನಾಟಕದಲ್ಲಿ ಸಂಪೂರ್ಣ ನಿಯಂತ್ರಣ

Covid Peak in South Korea Lockdown in China New Variant in Israel mah
Author
Bengaluru, First Published Mar 18, 2022, 3:38 AM IST

ಸಿಯೋಲ್‌/ ಬೀಜಿಂಗ್‌(ಮಾ. 18) ಕೋವಿಡ್‌ನ ಒಮಿಕ್ರೋನ್‌ ರೂಪಾಂತರಿಯ ಆರ್ಭಟ ದಕ್ಷಿಣ ಕೊರಿಯಾದಲ್ಲಿ ಗುರುವಾರವೂ ಮುಂದುವರೆದಿದೆ. ಆದರೆ ಚೀನಾದಲ್ಲಿ ಸೋಂಕಿನ ಹರಡುವಿಕೆಯಲ್ಲಿ ಕೊಂಚ ಇಳಿಕೆ ದಾಖಲಾಗಿದೆ.

ದಕ್ಷಿಣ ಕೊರಿಯಾದಲ್ಲಿ ದಾಖಲೆಮಟ್ಟದಲ್ಲಿ ಕೋವಿಡ್‌ ಕೇಸುಗಳು ದಾಖಲಾಗುತ್ತಿದ್ದು ಒಂದೇ ದಿನ 6 ಲಕ್ಷಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿವೆ. ಇದು ದೇಶದಲ್ಲಿ ಈವರೆಗೆ ದಾಖಲಾದ ದೈನಂದಿನ ಕೋವಿಡ್‌ ಕೇಸುಗಳ ಸಾರ್ವಕಾಲಿಕ ಗರಿಷ್ಠವಾಗಿದ್ದು, ಬುಧವಾರದ 4 ಲಕ್ಷ ಕೇಸಿನ ದಾಖಲೆ ಮುರಿದಿದೆ. ದಕ್ಷಿಣ ಕೊರಿಯಾದಲ್ಲಿ ಕಳೆದ 24 ಗಂಟೆಗಳಲ್ಲಿ 6,21,328 ಕೇಸುಗಳು ದಾಖಲಾಗಿದ್ದು, ಒಂದೇ ದಿನ 429 ಸೋಂಕಿತರು ಸಾವಿಗೀಡಾಗಿದ್ದಾರೆ. ಈ ಮೂಲಕ ಸಕ್ರಿಯ ಸೋಂಕಿತರ ಸಂಖ್ಯೆ 82.5 ಲಕ್ಷಕ್ಕೆ ಏರಿಕೆಯಾಗಿದೆ. ಒಂದೇ ದಿನದಲ್ಲಿ ಸೋಂಕು ಶೇ. 55ರಷ್ಟುಏರಿಕೆಯಾಗಿದೆ. ಬುಧವಾರ 4 ಲಕ್ಷ ಕೇಸು ದಾಖಲಾಗಿದ್ದವು.

ಚೀನಾದಲ್ಲಿ ಕೋವಿಡ್‌ ಇಳಿಕೆ: ಚೀನಾದಲ್ಲಿ ಸ್ಥಳೀಯ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಸತತ 2ನೇ ದಿನ ಇಳಿಕೆಯಾಗಿದೆ. ಕೇವಲ 1226 ಕೋವಿಡ್‌ ಪ್ರಕರಣಗಳು ವರದಿಯಾಗಿವೆ. ಮಂಗಳವಾರ 5 ಸಾವಿರಕ್ಕೂ ಹೆಚ್ಚು ಪ್ರಕರಣ ದಾಖಲಾಗಿದ್ದವು.

ಈ ವೇಳೆ ದೇಶದಲ್ಲಿ ಕೋವಿಡ್‌ನಿಂದಾಗಿ ಯಾವುದೇ ಸಾವು ಸಂಭವಿಸಿಲ್ಲ. ಇದಲ್ಲದೇ ದೇಶದಲ್ಲಿ ಸೋಂಕಿನ ಲಕ್ಷಣಗಳನ್ನು ಹೊಂದಿರದ 1206 ಕೇಸುಗಳು ವರದಿಯಾಗಿವೆ. ಇದನ್ನು ಚೀನಾ ಸೋಂಕಿತರ ಪಟ್ಟಿಯಲ್ಲಿ ಸೇರಿಸಿಲ್ಲ. ಚೀನಾದ ಕೋವಿಡ್‌ ವಿರುದ್ಧದ ಶೂನ್ಯ ಸಹನೆಯ ನೀತಿಯಡಿಯಲ್ಲಿ ಅಳವಡಿಸಲಾದ ಕಠಿಣ ನಿರ್ಬಂಧಗಳ ಹಿನ್ನೆಲೆಯಲ್ಲಿ ಕೋವಿಡ್‌ ಹರಡುವಿಕೆಯ ಮೇಲೆ ಕಡಿವಾಣ ಹಾಕಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬೆಂಗಳೂರಲ್ಲಿ 99 ಮಂದಿಗೆ ಕೊರೋನಾ: ಬೆಂಗಳೂರು ನಗರದಲ್ಲಿ 99 ಮಂದಿಯಲ್ಲಿ ಕೋವಿಡ್‌ ದೃಢ ಪಟ್ಟಿದೆ. ಇಬ್ಬರು ಮೃತರಾಗಿದ್ದಾರೆ, 116 ಮಂದಿ ಚೇತರಿಸಿಕೊಂಡಿದ್ದಾರೆ.

1,719 ಸಕ್ರಿಯ ಪ್ರಕರಣಗಳಿದ್ದು, ಈ ಪೈಕಿ 44 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 6 ಮಂದಿ ವೆಂಟಿಲೇಟರ್‌ ಸಹಿತ ಐಸಿಯು, 10 ಮಂದಿ ಐಸಿಯು, 6 ಮಂದಿ ಆಮ್ಲಜನಕ ಯುಕ್ತ ಹಾಸಿಗೆ ಮತ್ತು 22 ಮಂದಿ ಜನರಲ್‌ ವಾರ್ಡ್‌ನಲ್ಲಿದ್ದಾರೆ. ನಗರದಲ್ಲಿ ಕೋವಿಡ್‌ನಿಂದ ಚೇತರಿಸಿಕೊಂಡವರ ಪ್ರಮಾಣ ಶೇ. 98.95ಕ್ಕೆ ಏರಿದೆ. ಸಕ್ರಿಯ ಪ್ರಕರಣಗಳ ಪ್ರಮಾಣ ಶೇ. 0.10ಕ್ಕೆ ಇಳಿದಿದೆ. ಬೊಮ್ಮನಹಳ್ಳಿ, ಬೆಂಗಳೂರು ಪೂರ್ವ ಮತ್ತು ಬೆಂಗಳೂರು ದಕ್ಷಿಣ ಭಾಗದಲ್ಲಿ ತಲಾ ಒಂದು ಕಂಟೈನ್ಮೆಂಟ್‌ ವಲಯಗಳಿವೆ. ಬೆಳ್ಳಂದೂರು, ಹಗದೂರು, ದೊಡ್ಡನೆಕ್ಕುಂದಿ ಮತ್ತು ಎಚ್‌ಎಸ್‌ಆರ್‌ ಬಡಾವಣೆ ಭಾಗದಲ್ಲಿ ತುಸು ಹೆಚ್ಚು ಪ್ರಕರಣಗಳಿವೆ.

ಲಸಿಕೆ ಅಭಿಯಾನ: ಗುರುವಾರ 11,973 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ. 989 ಮಂದಿ ಮೊದಲ ಡೋಸ್‌, 9,545 ಮಂದಿ ಎರಡನೇ ಡೋಸ್‌ ಮತ್ತು 1,439 ಮಂದಿ ಮುನ್ನೆಚ್ಚರಿಕೆ ಡೋಸ್‌ ಸ್ವೀಕರಿಸಿದ್ದಾರೆ.

 

 

Follow Us:
Download App:
  • android
  • ios