* ಸೋಂಕು ಕಡಿಮೆ ಅಥವಾ ಸ್ಥಳೀಯ ಮಟ್ಟದಲ್ಲಿ ಪ್ರಸರಣಗೊಳ್ಳುತ್ತಿದೆ* ಭಾರತದಲ್ಲಿ ಕೊರೋನಾ ವೈರಸ್ ಎಂಡೆಮಿಕ್ ಹಂತಕ್ಕೆ* ಹೀಗಾಗಿ ಕೊರೋನಾ ಏಕಾಏಕಿ ಏರಿಕೆ ಆಗುವ ಸಾಧ್ಯತೆ ಕಡಿಮೆ* ಭಾರತೀಯರು ವೈರಸ್ ಜೊತೆ ಬದುಕುವ ಅಭ್ಯಾಸ ಮಾಡಿಕೊಂಡಿದ್ದಾರೆ* ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಹೇಳಿಕೆ
ನವದೆಹಲಿ(ಆ.26): ಕಳೆದ 2 ತಿಂಗಳಿನಿಂದ ಹೊಸ ಸೋಂಕು ಮತ್ತು ಸಾವಿನ ಪ್ರಮಾಣದಲ್ಲಿ ಸ್ಥಿರತೆ ದಾಖಲಿಸುತ್ತಿರುವ ಭಾರತ ಇದೀಗ ಎನ್‌ಡೆಮಿಕ್ ಹಂತ (ಸಾಂಕ್ರಾಮಿಕ ಹಂತವನ್ನು ದಾಟಿ ಸ್ಥಳೀಯವಾಗಿ ಹರಡುವ ಹಂತ) ತಲುಪಿರಬಹುದು. ಇದು ಭಾರತದಲ್ಲಿ ಕೊರೋನಾದ ಯುಗಾಂತ್ಯವಾಗುವ ದಿನಗಳು ಹತ್ತಿರವಾಗುತ್ತಿರುವ ಲಕ್ಷಣಗಳು ಎಂದು ವಿಶ್ವ ಆರೋಗ್ಯ ಸಂಸ್ಥೆಯ ವಿಜ್ಞಾನಿ ಡಾ.ಸೌಮ್ಯ ಸ್ವಾಮಿನಾಥನ್ ಅಭಿಪ್ರಾಯಪಟ್ಟಿದ್ದಾರೆ.
ಶೀಘ್ರವೇ ದೇಶದಲ್ಲಿ ಕೋವಿಡ್ 3ನೇ ಅಲೆ ಕಾಣಿಸಿಕೊಂಡು ಅಕ್ಟೋಬರ್‌ನಲ್ಲಿ ಅದು ತಾರಕಕ್ಕೇರಬಹುದು ಎಂಬ ಆತಂಕದ ಬೆನ್ನಲ್ಲೇ ಹೊರಬಿದ್ದಿರುವ ಈ ಹೇಳಿಕೆ ಆಶಾದಾಯಕವಾಗಿ ಕಾಣಿಸಿದೆ.
"
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿರುವ ಸೌಮ್ಯಾ, ‘ಜನರು ವೈರಸ್ ಜೊತೆ ಜೀವಿಸುವುದನ್ನು ಕಲಿತಾಗ ಎಂಡೆಮಿಕ್ ಹಂತವನ್ನು ತಲುಪುತ್ತೇವೆ. ಸಾಂಕ್ರಾಮಿಕ ಹಂತದಲ್ಲಿ ವೈರಸ್ ಬಹುಪಾಲು ಜನರನ್ನು ಆವರಿಸಿಕೊಳ್ಳುತ್ತದೆ. ಆದರೆ, ಎಂಡೆಮಿಕ್ ಎನ್ನುವುದು ಸಾಂಕ್ರಾಮಿಕ ಹಂತಕ್ಕಿಂತ ತುಂಬಾ ಭಿನ್ನವಾಗಿದೆ. ಈ ಹಂತದಲ್ಲಿ ಸೋಂಕು ಕಡಿಮೆ ಅಥವಾ ಮಧ್ಯಮ ಮಟ್ಟದಲ್ಲಿ ಪ್ರಸರಣಗೊಳ್ಳುತ್ತದೆ. ಜೊತೆಗೆ ಈ ಹಂತದಲ್ಲಿ ರೋಗ ಹರಡುವ ಪ್ರಮಾಣವನ್ನು ಅಂದಾಜಿಸಬಹುದು. ಸದ್ಯ ಭಾರತ ಈ ಹಂತದಲ್ಲಿದೆ’ ಎಂದು ತಿಳಿಸಿದ್ದಾರೆ.
ಇದೇ ವೇಳೆ ಭಾರತದ ಗಾತ್ರ ಮತ್ತು ದೇಶದ ಜನಸಂಖ್ಯೆಯ ವೈವಿಧ್ಯತೆ ಮತ್ತು ರೋಗನಿರೋಧಕ ಶಕ್ತಿಯ ಸ್ಥಿತಿಗತಿಗಳನ್ನು ಗಮನಿಸಿದರೆ, ದೇಶದ ವಿವಿಧ ಭಾಗಗಳಲ್ಲಿ ಕೊರೋನಾ ಪ್ರಕರಣಗಳ ಏರಿಳಿತಗಳು ಇದೇ ರೀತಿಯಲ್ಲಿ ಮುಂದುವರಿಯಬಹುದಾದ ಎಲ್ಲಾ ಸಾಧ್ಯತೆಗಳು ಇವೆ. ಆದರೆ, ಈ ಹಂತದಿಂದ ಕೊರೋನ 2ನೇ ಅಲೆಯಲ್ಲಿ ಎದುರಿಸಿಂತೆ ಗಂಭೀರ ಸ್ಥಿತಿಯನ್ನು ತಲುಪುವ ಸಾಧ್ಯತೆಗಳು ಕಡಿಮೆ. ಸೋಂಕು ಕಡಿಮೆ ಇಲ್ಲವೇ ಸಾಧಾರಣ ಮಟ್ಟದಲ್ಲಿ ಪ್ರಸರಣಗೊಳ್ಳುವ ಎಂಡೆಮಿಕ್ ಹಂತವನ್ನು ನಾವು ಈಗಾಗಲೇ ಪ್ರವೇಶಿಸಿರಬಹುದು. ನಾವು ಕೆಲವು ತಿಂಗಳ ಹಿಂದೆ ನೋಡಿದಂತೆ ಸೋಂಕು ಏಕಾಏಕಿ ಏರಿಕೆ ಆಗುವುದು ಮತ್ತು ಉಚ್ಛ್ರಾಯ ಹಂತಕ್ಕೆ ತಲುಪುವುದನ್ನು ಈಗ ನೋಡುತ್ತಿಲ್ಲ ಎಂದು ಹೇಳಿದ್ದಾರೆ.
3ನೇ ಅಲೆ ಬಗ್ಗೆ ಏನನ್ನೂ ಹೇಳಲಾಗದು:
ಕೊರೊನಾ ಮೂರನೇ ಅಲೆ ಯಾವಾಗ? ಎಲ್ಲಿ ಸಂಭವಿಸಲಿದೆ? ಮತ್ತು ಎಷ್ಟುಗಂಭೀರ ಸ್ವರೂಪದ್ದಾಗಿರಲಿದೆ ಎಂದು ಯಾರೂ ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆ ಬಗ್ಗೆ ಕೇವಲ ಊಹೆ ಮಾಡಬಹುದಷ್ಟೇ. ಸೋಂಕು ಸ್ಥಳೀಯ ಮತ್ತು ಪ್ರದೇಶಿಕ ಏರಿಳಿತವವನ್ನು ಕಾಣಬಹುದು. ಆದರೆ, 2ನೇ ಅಲೆಯಂತೆ ರಾಷ್ಟ್ರವ್ಯಾಪಿ ಮೂರನೇ ಅಲೆಯನ್ನು ಕಾಣಸಲು ಸಾಧ್ಯವಿಲ್ಲ ಎಂದು ಸೌಮ್ಯ ಸ್ವಾಮಿನಾಥನ್ ಹೇಳಿದ್ದಾರೆ.
ಮಕ್ಕಳ ಮೇಲೆ 3ನೇ ಅಲೆ ಪ್ರಭಾವ ಕಡಿಮೆ:
ಮಕ್ಕಳು 3ನೇ ಅಲೆಯ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಸೋಂಕಿಗೆ ತುತ್ತಾಗುವ ಸಾಧ್ಯತೆ ಇದೆ. ಆದರೆ, ಅವರು ತೀವ್ರವಾಗಿ ಅನಾರೋಗ್ಯಕ್ಕೀಡಾಗುವ ಸಾಧ್ಯತೆಗಳು ಇಲ್ಲ. ಈ ಹಂತದಲ್ಲಿ ಭಯ ಪಡುವ ಅಗತ್ಯವಿಲ್ಲ. ಆದರೆ, ಮಕ್ಕಳಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವುದು ಉತ್ತಮ ಎಂದು ಹೇಳಿದ್ದಾರೆ.
ಕೋವ್ಯಾಕ್ಸಿನ್‌ಗೆ ಶೀಘ್ರದಲ್ಲೇ ಮಾನ್ಯತೆ:
ಇದೇ ವೇಳೆ ಭಾರತದ ಸ್ವದೇಶಿ ಲಸಿಕೆಯಾದ ಕೋವ್ಯಾಕ್ಸಿನ್ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯ ತಾಂತ್ರಿಕ ಗುಂಪು ಸಮಾಧಾನ ವ್ಯಕ್ತಪಡಿಸಿದ್ದಾರೆ. ಸೆಪ್ಟೆಂಬರ್ ಮಧ್ಯಭಾಗದಲ್ಲಿ ಲಸಿಕೆಗೆ ಅಧಿಕೃತ ಮಾನ್ಯತೆ ಲಭ್ಯವಾಗುವ ನಿರೀಕ್ಷೆ ಇದೆ. ಸ್ವತಂತ್ರ ಮೌಲ್ಯಮಾಪನ ಸಮಿತಿ ಸೆಪ್ಟೆಂಬರ್ ಮೊದಲ ವಾರದಲ್ಲಿ ಸಭೆ ಸೇರಲಿದ್ದು, ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದೆ. ಜುಲೈನಲ್ಲಷ್ಟೇ ಭಾರತ್ ಬಯೋಟೆಕ್ ಲಸಿಕೆಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡಿತ್ತು. ಸೂಕ್ತ ದಾಖಲೆಗಳನ್ನು ಒದಗಿಸಲು ಭಾರತ್ ಬಯೋಟೆಕ್ ವಿಳಂಬ ಮಾಡಿದ್ದರಿಂದ ಲಸಿಕೆ ಮಾನ್ಯತೆ ನೀಡುವ ಪ್ರಕ್ರಿಯೆ ವಿಳಂಬಗೊಂಡಿದೆ ಎಂದು ಸ್ವಾಮಿನಾಥನ್ ಹೇಳಿದ್ದಾರೆ.
ಕೇರಳದಲ್ಲಿ ಲಸಿಕೆ ನೀಡಿಕೆ ಹೆಚ್ಚಿಸಬೇಕು:
ಕೇರಳದಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಿನ ಪ್ರಮಾಣದಲ್ಲಿ ದಾಖಲಾಗುತ್ತಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ದೇಶದ ಇತರ ರಾಜ್ಯಗಳಿಗೆ ಹೋಲಿಸಿದರೆ ಕೇರಳದಲ್ಲಿ ಸೋಂಕಿನ ಪ್ರಸರಣ ಅಧಿಕವಾಗಿದೆ. ಇದರಿಂದ ಹೊಸ ರೂಪಾಂತರಿ ವೈರಸ್‌ಗಳು ಹುಟ್ಟಿಕೊಳ್ಳುವ ಆತಂಕ ಇದೆ. ಆದರೆ, ಕೇರಳ ಕೊರೊನಾ ಪ್ರಕರಣಗಳನ್ನು ಉತ್ತಮವಾಗಿ ನಿರ್ವಹಿಸುತ್ತಿದೆ. ಕೇರಳದಲ್ಲಿ ಕೊರೋನಾ ಸಾವಿನ ಸಂಖ್ಯೆ ದೇಶದಲ್ಲೇ ಕಡಿಮೆ ಇದೆ. ಆದರೆ, ಕೇರಳದಲ್ಲಿ ಲಸಿಕೆ ನೀಡಿಕೆಯನ್ನು ಹೆಚ್ಚಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.
ಪೆಂಡೆಮಿಕ್ ಅಂದರೇನು?
ಒಂದು ಸೋಂಕು ದೇಶದಿಂದ ದೇಶಕ್ಕೆ ವಿಶ್ವವ್ಯಾಪಿಯಾಗಿ ಪಸರಿಸುವುದಕ್ಕೆ ಪೆಂಡೆಮಿಕ್ (ಪಿಡುಗು) ಎನ್ನಲಾಗುತ್ತದೆ. ಕೊರೋನಾ ಕೂಡ ಈಗಿನ ಮಟ್ಟಿಗೆ ದೇಶದಿಂದ ದೇಶಕ್ಕೆ ಪಸರಿಸಿ ವಿಶ್ವವ್ಯಾಪಿಯಾಗಿದೆ.
ಎಂಡೆಮಿಕ್ ಎಂದರೇನು?
ಸೋಂಕು ಸ್ಥಳೀಯವಾಗಿ ಅಥವಾ ಸೀಮಿತ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಹರಡಬಲ್ಲ ವ್ಯಾಧಿಗೆ ಎಂಡೆಮಿಕ್ (ಸ್ಥಳೀಯ ರೋಗ) ಎಂದು ಕರೆಯುತ್ತಾರೆ. ಉದಾಹರಣೆಗೆ, ಮಲೇರಿಯಾ, ಚಿಕನ್ ಪಾಕ್ಸ್ನಂಥ ವ್ಯಾಧಿಗಳು ಕೇವಲ ಸ್ಥಳೀಯ ಮಟ್ಟದಲ್ಲಿ ವ್ಯಾಪಿಸಿವೆ.
ಎಪಿಡೆಮಿಕ್ ಎಂದರೇನು?
ಕಾಯಿಲೆಯು ಒಬ್ಬರಿಂದ ಇನ್ನೊಬ್ಬರಿಗೆ ಹರಡುವುದೇ ಎಪಿಡೆಮಿಕ್ (ಸಾಂಕ್ರಾಮಿಕ). ‘ಪೆಂಡೆಮಿಕ್’ಗೂ ‘ಎಪಿಡೆಮಿಕ್’ಗೂ ಸಾಮ್ಯತೆ ಇದೆ. ಇದು ವಿಶ್ವವ್ಯಾಪಿಯಾಗಿಯೂ ಹರಡಬಲ್ಲದು ಅಥವಾ ಬಹಳ ವಿಸ್ತಾರವಾದ ಪ್ರದೇಶಗಳಲ್ಲಿ ಹರಡಬಲ್ಲದು.
