ವಿಶ್ವದೆಲ್ಲೆಡೆ ಈಗ ಕೊರೋನಾ ವೈರಸ್‌ನ ಭೀತಿ ಆವರಿಸಿದೆ. ಚೀನಾ ದೇಶವಂತೂ ವೈರಸ್‌ನ ರೌದ್ರಾವತಾರಕ್ಕೆ ತತ್ತರಿಸಿ ಹೋಗಿದೆ. ಭಾರತ ಸೇರಿದಂತೆ ಚೀನಾ ಸಮೀಪದ ಬಹುತೇಕ ರಾಷ್ಟ್ರಗಳು ವೈರಸ್‌ ಹರಡದಂತೆ ತಡೆಯುವ ನಿಟ್ಟಿನಲ್ಲಿ ಹಲವು ಸುರಕ್ಷಿತ ಕ್ರಮಗಳನ್ನು ನಿರ್ದಾಕ್ಷಿಣ್ಯವಾಗಿ ಕೈಗೊಳ್ಳುತ್ತಿವೆ.

ಈ ನಡುವೆ ಸಮುದ್ರದಲ್ಲಿ ನಿಂತ ಹಡಗೊಂದು ಸಾಕಷ್ಟುಸುದ್ದಿ ಮಾಡುತ್ತಿದೆ. ಡೈಮಂಡ್‌ ಪ್ರಿನ್ಸೆಸ್‌ ಹೆಸರಿನ ಜಪಾನ್‌ ದೇಶದ ಹಡಗು ‘ಚೀನಾ ದೇಶದ ಹೊರಗೆ ಜಗತ್ತಿನಲ್ಲೇ ಅತಿಹೆಚ್ಚು ಕೊರೋನಾ ವೈರಸ್‌ ಸೋಂಕಿತರನ್ನು ಹೊಂದಿರುವ ಸ್ಥಳ’ ಎಂಬ ಅಪಖ್ಯಾತಿ ಗಳಿಸಿದೆ.

ಹಡಗಿನ ಒಳಗಿರುವವರು ತಮ್ಮನ್ನು ಕಾಪಾಡಿ ಎಂದು ಮೊರೆಯಿಡುತ್ತಿದ್ದಾರೆ. ಆದರೆ, ಅಲ್ಲಿರುವವರನ್ನು ಹೊರಗೆ ಬಿಟ್ಟರೆ ಅವರು ಕೊರೋನಾ ವೈರಸ್ಸನ್ನು ಇನ್ನಷ್ಟುಜನರಿಗೆ ಹರಡುತ್ತಾರೆ ಎಂಬ ಕಾರಣಕ್ಕೆ ಜಪಾನ್‌ ಸರ್ಕಾರ ಹಡಗಿನ ಬಾಗಿಲು ತೆರೆಯುತ್ತಿಲ್ಲ. ಆ ಹಡಗಿನ ಒಳಗೇನಾಗುತ್ತಿದೆ ಎಂಬ ಕುತೂಹಲಕರ ಮಾಹಿತಿ ಇಲ್ಲಿದೆ.

ಮತ್ತೋರ್ವ ಭಾರತೀಯಗೆ ಕೊರೋನಾ?

3700 ಜನರ ಹೊತ್ತ ಡೈಮಂಡ್‌ ಪ್ರಿನ್ಸೆಸ್‌ ಹಡಗು

ಜಪಾನ್‌ ದೇಶಕ್ಕೆ ಸೇರಿದ ಡೈಮಂಡ್‌ ಪ್ರಿನ್ಸೆಸ್‌ ಹಡಗು 3700 ಪ್ರವಾಸಿಗರನ್ನು ತನ್ನೊಡಲಿನಲ್ಲಿ ತುಂಬಿಕೊಂಡು ಜಪಾನ್‌ನ ಯೋಕೋಹಾಮಾ ಕಡಲ ದಡದಲ್ಲಿ ಪ್ರತ್ಯೇಕವಾಗಿ ನಿಂತಿದೆ. 14 ದಿನಗಳ ಆಗ್ನೇಯ ಏಷ್ಯಾ ಪ್ರವಾಸ ಮುಗಿಸಿ ಬಂದ ಹಡಗನ್ನು ಜಪಾನ್‌ನ ಸಮುದ್ರದಲ್ಲೇ ತಡೆ ಹಿಡಿಯಲಾಗಿದೆ. ಇದರಲ್ಲಿ ಓರ್ವ ಕನ್ನಡಿಗನೂ ಸೇರಿದಂತೆ 138 ಭಾರತೀಯರಿದ್ದಾರೆ.

ಈಗ ಹಡಗಿನಲ್ಲಿರುವವರ ಪೈಕಿ ಮೂವರು ಭಾರತೀಯರು ಸೇರಿದಂತೆ 174 ಮಂದಿಗೆ ಕೊರೋನಾ ವೈರಸ್‌ ತಗುಲಿದೆ. ಹಡಗಿನಲ್ಲಿ ಇರುವವರನ್ನು ದೇಶದ ಒಳಗೆ ಬಿಟ್ಟುಕೊಂಡರೆ ಮತ್ತಷ್ಟುಮಂದಿಗೆ ವೈರಸ್‌ ತಗಲುವ ಅಪಾಯವಿದೆ ಎಂದು ಜಪಾನ್‌ ಸರ್ಕಾರ ಹಡಗನ್ನು ಫೆ.19ರವರೆಗೆ ಪ್ರತ್ಯೇಕ ಸ್ಥಳದಲ್ಲಿ ನಿಲ್ಲಿಸಿದೆ. ಅಲ್ಲದೆ ಅಲ್ಲಿನ ಪ್ರತಿಯೊಬ್ಬರ ಚಟುವಟಿಕೆ ಮೇಲೆ ನಿಗಾ ವಹಿಸಲಾಗಿದೆ.

ಹಡಗಿಗೆ ಕೊರೋನಾ ವೈರಸ್‌ ಹಬ್ಬಿದ್ದು ಹೇಗೆ?

ಆಗ್ನೇಯ ಏಷ್ಯಾಕ್ಕೆ ಪ್ರವಾಸ ಹೊರಟ ಹಡಗಿನಲ್ಲಿ ಮೊದಲಿಗೆ 80ರ ವೃದ್ಧನಿಗೆ ಆರೋಗ್ಯ ಸಮಸ್ಯೆಯಾಯಿತು. ಅವರನ್ನು ಹಾಂಕಾಂಗ್‌ನಲ್ಲಿ ಪರೀಕ್ಷಿಸಿದಾಗ ಕೊರೋನಾ ವೈರಸ್‌ ಪತ್ತೆಯಾಗಿತು. ತಕ್ಷಣ ಎಚ್ಚೆತ್ತ ಹಡಗಿನ ಆಡಳಿತ ವ್ಯವಸ್ಥೆ ಹಡಗಿನಲ್ಲಿರುವ ಪ್ರವಾಸಿಗರಿಗೆ ತಮಗೆ ನೀಡಿರುವ ಕೋಣೆಯಿಂದ ಹೊರಬರದಂತೆ ಎಚ್ಚರ ವಹಿಸಲು ಸೂಚಿಸಿತು. ಅಲ್ಲದೆ ತನ್ನ 14 ದಿನ ಪ್ರವಾಸವನ್ನು ಮೊಟಕುಗೊಳಿಸಿ ತಕ್ಷಣ ಜಪಾನ್‌ಗೆ ಹಿಂತಿರುಗಿತು.

ವೈದ್ಯರ ಪ್ರಕಾರ ಕೊರೋನಾ ವೈರಸ್‌ ವ್ಯಕ್ತಿಯ ದೇಹ ಸೇರಿದ್ದರೂ ರೋಗದ ಲಕ್ಷಣಗಳು ತಡವಾಗಿ ಕಾಣಿಸಿಕೊಳ್ಳುತ್ತವೆ. ಹಾಗಾಗಿ ಹಡಗಿನಲ್ಲಿ ಇರುವವರಲ್ಲಿ ಯಾರು ವೈರಸ್‌ ಸೋಂಕಿತರು ಎಂದು ತಕ್ಷಣವೇ ಗುರುತಿಸುವುದು ಕಷ್ಟವಾಗುತ್ತಿದೆ. ಹಾಗಾಗಿ ಹಡಗನ್ನೇ ಪ್ರತ್ಯೇಕವಾಗಿ ಇರಿಸಿ, ನಿಗಾ ವಹಿಸಲಾಗಿದೆ.

ಹಡಗಿನೊಳಗೆ ಪ್ರವಾಸಿಗರು ಏನು ಮಾಡುತ್ತಿದ್ದಾರೆ?

ಹಡಗನ್ನು ಜಪಾನ್‌ನ ಯೋಕೋಹಾಮಾದ ಕಡಲಿನ ತಟದಲ್ಲಿ ಪ್ರತ್ಯೇಕವಾಗಿ ನಿಲ್ಲಿಸಲಾಗಿದೆ. ಹಡಗಿನ ಒಳಗೆ ಇರುವವರ ಮೇಲೆ ಜಪಾನ್‌ ದೇಶದ ಆರೋಗ್ಯ ಇಲಾಖೆ ನಿಗಾ ಇಟ್ಟಿದೆ. ಅಲ್ಲದೆ ನಿಗದಿತವಾಗಿ ಹಡಗಿನಲ್ಲಿರುವವರ ಪ್ರತಿ ಕೋಣೆಗೂ ಗ್ಲೌಸ್‌, ಮಾಸ್ಕ್‌ ಧರಿಸಿರುವ ಸಿಬ್ಬಂದಿ ಆಹಾರವನ್ನು ಪೂರೈಸುತ್ತಿದ್ದಾರೆ. ಹೊರಗಿನ ವ್ಯಕ್ತಿಗಳು ಯಾರೂ ಕೂಡ ಹಡಗಿನ ಸಮೀಪ ಹೋಗದಂತೆ ಎಚ್ಚರವಹಿಸಲಾಗಿದೆ.

ಆ್ಯಂಬುಲೆನ್ಸ್‌, ವೈದ್ಯಕೀಯ ಸೌಲಭ್ಯಗಳನ್ನು ಸಿದ್ಧ ಮಾಡಿಟ್ಟುಕೊಳ್ಳಲಾಗಿದೆ. ಕೊರೋನಾ ಪೀಡಿತರನ್ನು ತಕ್ಷಣವೇ ಹಡಗಿನಿಂದ ಹೊರಗೆ ಕರೆತಂದು ಅತ್ಯಂತ ಜಾಗರೂಕತೆಯಿಂದ ಆಸ್ಪತ್ರೆಗೆ ದಾಖಲಿಸಲಾಗುತ್ತಿದೆ. ಅಲ್ಲದೆ ಹಡಗಿನಲ್ಲಿ ಇರುವವರು ತಮ್ಮ ಸಂಬಂಧಿಕರನ್ನು ಸಂಪರ್ಕಿಸಲು ಹಾಗೂ ಬೇಸರ ಕಳೆಯಲು ಅತ್ಯುತ್ತಮ ಇಂಟರ್‌ನೆಟ್‌ ಸೌಲಭ್ಯ ಒದಗಿಸಲಾಗಿದೆ. ಹಾಗಿದ್ದರೂ ಕೊರೋನಾ ವೈರಸ್‌ ಹಬ್ಬುತ್ತಲೇ ಇದೆ.

ಬಹಿರಂಗವಾಗಿ ಕಾಣಿಸಿಕೊಂಡ ಕೊರೋನಾ ಶಂಕಿತನನ್ನು ಗುಂಡಿಟ್ಟು ಹತ್ಯೆಗೈದರು!

ಯಾರೊಂದಿಗೂ ಮಾತಾಡದಂತೆ ಸೂಚನೆ

ಹಡಗಿನಲ್ಲಿ ಇರುವವರಿಗೆ ಕೋಣೆಯಿಂದ ಹೊರಬರದಂತೆ ಸೂಚಿಸಲಾಗಿದೆ. ಚಿಕ್ಕ ಕೋಣೆಯಲ್ಲಿ ಉಸಿರುಗಟ್ಟಿದ ಸ್ಥಿತಿಯಲ್ಲಿ ಪ್ರವಾಸಿಗರು, ಸಿಬ್ಬಂದಿ ಸಿಲುಕಿದ್ದಾರೆ. ಅಲ್ಲದೆ ಯಾರಿಗೆ ಯಾವಾಗ ಸೋಂಕು ಕಾಣಿಸಿಕೊಳ್ಳುತ್ತದೆ ಎನ್ನುವ ಆಂತಕ ಮನೆಮಾಡಿದೆ.

ಯಾರೊಂದಿಗೂ ಮಾತನಾಡದಂತೆ ಜಪಾನ್‌ ಸರ್ಕಾರ ತಿಳಿಸಿದೆ. ಹೀಗಾಗಿ ಪ್ರವಾಸಿಗರು, ಸಿಬ್ಬಂದಿ ಆತಂಕಕ್ಕೀಡಾಗಿದ್ದಾರೆ. ಸಾಮಾಜಿಕ ತಾಣ, ದೂರವಾಣಿಯಷ್ಟೇ ಪ್ರವಾಸಿಗರಿಗೆ ಆಪ್ತಮಿತ್ರನಂತೆ ಭಾಸವಾಗುತ್ತಿದೆ. ಹಡಗಿನ ಕೊಠಡಿಯ ಹೊರಗಿನ ಕಿಟಕಿಯಿಂದ ಹೊರಬರಲಷ್ಟೇ ಅನುಮತಿ ಇದೆ.

ನನಗೆ ಕೇವಲ ಕೆಮ್ಮುವ ಶಬ್ದ ಮಾತ್ರ ಕೇಳುತ್ತಿದೆ!

‘ನನ್ನ ಪಕ್ಕದ ಕೋಣೆಯಲ್ಲಿ ವಿದೇಶಿಗನೊಬ್ಬ ನೋವಿನಿಂದ ಕೆಮ್ಮುತ್ತಿರುವ ಶಬ್ದ ಮಾತ್ರ ಕೇಳುತ್ತಿದೆ. ನನಗೂ ಕೂಡ ಇಂದಲ್ಲ ನಾಳೆ ಕೊರೋನಾ ಹಬ್ಬು ಆತಂಕವಿದೆ’ ಎಂದು ಹಡಗಿನಲ್ಲಿರುವ ವ್ಯಕ್ತಿಯೊಬ್ಬ ಮಾಡಿರುವ ಟ್ವೀಟ್‌ ವೈರಲ್‌ ಆಗಿದೆ. ‘ನನ್ನ ಕಾಲುಗಳಿಗೆ ಮಣ್ಣು ಮೆತ್ತಿಕೊಳ್ಳುವ ಕ್ಷಣಗಳನ್ನು ತಪ್ಪಿಸಿಕೊಳ್ಳುತ್ತಿದ್ದೇನೆ’ ಎಂದು 6 ವರ್ಷದ ಬಾಲಕನೊಂದಿಗೆ ಹಡಗಿನಲ್ಲಿ ಸಿಲುಕಿರುವ ಮಹಿಳೆ ಸಾಮಾಜಿಕ ಜಾಲ ತಾಣದಲ್ಲಿ ಬರೆದುಕೊಂಡಿರುವುದು ಪ್ರವಾಸಿಗರ ನೋವನ್ನು ವ್ಯಕ್ತಪಡಿಸುತ್ತಿದೆ.

ಏಷ್ಯಾ ದೇಶಗಳಲ್ಲಿ ಪ್ರವಾಸಕ್ಕಾಗಿ ಬಂದ ಅಮೆರಿಕದ ದಂಪತಿ ಕೂಡ ಹಡಗಿನಲ್ಲಿ ಬಂದಿ ಆಗಿದ್ದಾರೆ. ‘ಮುಂದಿನ ದಿನಗಳಲ್ಲಿ ಏನಾಗುತ್ತದೆ ಎಂಬುದು ನಮಗೆ ಗೊತ್ತಿಲ್ಲ. ನಮ್ಮನ್ನು ಕತ್ತಲೆಯಲ್ಲಿ ಇಡಲಾಗಿದೆ’ ಎಂದು ದಂಪತಿ ನೋವನ್ನು ವ್ಯಕ್ತಪಡಿಸಿದ್ದಾರೆ. ಪ್ರವಾಸಿಗರು ಬೇರೆಯವರೊಂದಿಗೆ ಬೆರೆಯಲು ಅವಕಾಶವನ್ನೇ ನೀಡುತ್ತಿಲ್ಲ. ಅಲ್ಲದೆ ಕೊರೋನಾ ಪೀಡಿತನ್ನು ಹೊರಗೆ ಆ್ಯಂಬುಲೆನ್ಸ್‌ನಲ್ಲಿ ಕರೆದೊಯ್ಯುವ ದೃಶ್ಯ ನಮ್ಮನ್ನು ಮತ್ತಷ್ಟುಆತಂಕಕ್ಕೀಡು ಮಾಡಿದೆ ಎಂದು ಫೇಸ್‌ಬುಕ್‌ನಲ್ಲಿ ಹೇಳಿಕೊಂಡಿದ್ದಾರೆ.

ಮೋದಿಜೀ ಪ್ಲೀಸ್‌ ಹೆಲ್ಪ್‌ ಮಾಡಿ!

ಜಪಾನ್‌ನ ಡೈಮಂಡ್‌ ಪ್ರಿನ್ಸೆಸ್‌ ಪ್ರವಾಸಿ ಹಡಗಿನಲ್ಲಿರುವ ಭಾರತದ ಬಿನಯ್‌ ಕುಮಾರ್‌ ಎಂಬುವರು ಪ್ರಧಾನಿ ನರೇಂದ್ರ ಮೋದಿ ಅವರಲ್ಲಿ ತಮ್ಮನ್ನು ರಕ್ಷಿಸುವಂತೆ ಮನವಿ ಮಾಡಿದ್ದಾರೆ. ಅಲ್ಲದೆ ಕಾರವಾರದ ಅಭಿಷೇಕ್‌ ಅವರು ಕೂಡ ಹಡಗಿನಲ್ಲಿ ಸಿಲುಕಿದ್ದಾರೆ.

ಇನ್ನು, ಫಿಲಿಪ್ಪೀನ್ಸ್‌ ದೇಶದ ಪ್ರವಾಸಿಗರು ಸ್ಕೈಪ್‌ನಲ್ಲಿ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿ, ನಮ್ಮನ್ನು ಕಾಪಾಡಿ ಎಂದು ಮನವಿ ಮಾಡಿದ ರೀತಿ ಮನಕುಲುಕುವಂತಿದೆ. ಅಲ್ಲದೆ ತಮ್ಮನ್ನು ಸ್ವದೇಶಕ್ಕೆ ವಾಪಸ್‌ ಕರೆಸಿಕೊಳ್ಳುವಂತೆ ಒತ್ತಾಯಿಸುತ್ತಿದ್ದಾರೆ.

Fact Check : ಕೊರೋನಾಪೀಡಿತೆಯನ್ನು ನಡುರಸ್ತೇಲಿ ಕೊಂದ ಪೊಲೀಸರು!

ಹಡಗಿನಿಂದ ಭಾರತೀಯರ ಏರ್‌ಲಿಫ್ಟ್‌ ಕಷ್ಟವಾ?

ವಿಶ್ವದ ಯಾವುದೇ ಮೂಲೆಯಲ್ಲಿದ್ದರೂ ಸಮಸ್ಯೆಗೆ ಒಳಗಾದ ಭಾರತೀಯರನ್ನು ಸ್ವದೇಶಕ್ಕೆ ಕರೆತರುವ ಕಾರ‍್ಯದಲ್ಲಿ ವಿಶ್ವಕ್ಕೆ ಮಾದರಿಯಾಗಿರುವ ಭಾರತ ಸರ್ಕಾರ ಹಡಗಿನಲ್ಲಿ ಸಿಲುಕಿರುವ ಭಾರತೀಯರನ್ನು ಕರೆತರುವ ನಿಟ್ಟಿನಲ್ಲಿ ಪ್ರಯತ್ನ ಮಾಡುತ್ತಿದೆ. ಇದಕ್ಕಾಗಿ ಜಪಾನ್‌ ದೇಶದೊಂದಿಗೆ ನಿರಂತರ ಸಂಪರ್ಕದಲ್ಲಿದೆ. ಆದರೆ, ಹಡಗಿನಲ್ಲಿ ಇರುವವರನ್ನು ಹೊರಕ್ಕೆ ಬಿಡಲು ಜಪಾನ್‌ ತಕ್ಷಣಕ್ಕೆ ಒಪ್ಪುತ್ತಿಲ್ಲ. ಹಾಗಾಗಿ ಭಾರತೀಯರನ್ನು ರಕ್ಷಿಸುವುದು ಸಮಸ್ಯೆಯಾಗಿದೆ. ಶೀಘ್ರದಲ್ಲೇ ಭಾರತೀಯರ ಏರ್‌ಲಿಫ್ಟ್‌ ಸಾಧ್ಯವಾಗಲಿದೆ ಎಂದು ಹೇಳಲಾಗುತ್ತಿದೆ.