ಕಾಮಿಡಿಯನ್ ಕಪಿಲ್ ಶರ್ಮಾ ಇತ್ತೀಚೆಗಷ್ಟೇ ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಅದ್ಧೂರಿಯಾಗಿ ಒಪನ್ ಮಾಡಿದ್ದರು. ಆದರೆ ಇದೀಗ ನಿಷೇಧಿ ಖಲಿಸ್ತಾನಿ ಉಗ್ರ ಸಂಘಟನೆ ಕಪಿಲ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದೆ.
ಸರ್ರೆ (ಜು.10) ಸ್ಟಾಂಡ್ಅಪ್ ಕಾಮಿಡಿ ಮೂಲಕ, ಕಾಮಿಡಿ ಶೋ ಮೂಲಕ ಅತ್ಯಂತ ಜನಪ್ರಿಯಗೊಂಡಿರುವ ಕಪಿಲ್ ಶರ್ಮಾ, ಬಾಲಿವುಡ್‌ನಲ್ಲೂ ಅದೃಷ್ಠ ಪರೀಕ್ಷೆ ನಡೆಸಿದ್ದಾರೆ. ಜನಪ್ರಿಯ ಕಾಮಿಡಿಯನ್ ಕಪಿಲ್ ಶರ್ಮಾ ಇತ್ತೀಚೆಗೆ ರೆಸ್ಟೋರೆಂಟ್ ಉದ್ಯಮಕ್ಕೆ ಭರ್ಜರಿಯಾಗಿ ಎಂಟ್ರಿಕೊಟ್ಟಿದ್ದರು. ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ಆರಂಭಿಸಿದ್ದರು. ಕಪಿಲ್ ಶರ್ಮಾ ಹಾಗೂ ಪತ್ನಿ ಗಿನ್ನಿ ಚಾತ್ರಾತ್ ಜೊತೆಯಾಗಿ ಈ ಕೆಫೆ ಆರಂಭಿಸಿದ್ದರು. ಆದರೆ ಆರಂಭಗೊಂಡ ಕೆಲವೇ ದಿನದಲ್ಲಿ ಖಲಿಸ್ತಾನಿ ಉಗ್ರರು ಕ್ಯಾಪ್ಸ್ ಕೆಫೆ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ವರದಿಯಾಗಿದೆ. ಇಷ್ಟೇ ಅಲ್ಲ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆ ಈ ದಾಳಿಯ ಹೊಣೆ ಹೊತ್ತುಕೊಂಡಿದೆ ಎಂದು ಹೇಳಲಾಗುತ್ತಿದೆ. ಗುಂಡಿನ ದಾಳಿ ನಡೆಸುತ್ತಿರುವ ದೃಶ್ಯ ಬಹಿರಂಗವಾಗಿದೆ.
ರಾತ್ರಿ ವೇಳೆ ಏಕಾಏಕಿ ಗುಂಡಿನ ದಾಳಿ
ಸರ್ರೆಯಲ್ಲಿ ಕಪಿಲ್ ಶರ್ಮಾ ಇತ್ತೀಚೆಗಷ್ಟೆ ಕ್ಯಾಪ್ಸ್ ಕೆಫೆ ಆರಂಭಿಸಿದ್ದರು. ಅತ್ಯಂತ ಪ್ರೀಮಿಯಂ ಲುಕ್, ಲಕ್ಷುರಿ ಫೀಲ್ ಹಾಗೂ ರುಚಿಕರ ಖಾದ್ಯಗಳ ರೆಸ್ಟೋರೆಂಟ್ ಆರಂಭಕ್ಕೆ ಎಲ್ಲೆಡೆಗಳಿಂದ ಶುಭಾಶಗಳ ಸುರಿಮಳೆಯಾಗಿತ್ತು. ಆದರೆ ಭಾನುವಾರ ರಾತ್ರಿ ನಿಷೇಧಿತ ಖಲಿಸ್ತಾನಿ ಉಗ್ರ ಸಂಘಟನೆಯ ಅಂಗ ಸಂಘಟನೆ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ (BKI ) ಗ್ಯಾಂಗ್ ಈ ದಾಳಿ ನಡೆಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ಪತ್ತೆಯಾದ ಅಂಶಗಳನ್ನು ಮೂಲಗಳು ಹೇಳುತ್ತಿದೆ.
ತಡ ರಾತ್ರಿ ನಡೆದ ಘಟನೆ
ನಿಷೇಧಿತ ಉಗ್ರ ಸಂಘಟನೆಯ ಉಗ್ರರು ತಡ ರಾತ್ರಿ ಕ್ಯಾಪ್ಸ್ ಕೆಫೆಯಿಂದ ಕೆಲವೇ ದೂರದಲ್ಲಿ ನಿಂತು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯ ದೃಶ್ಯಗಳು ಬಹಿರಂಗವಾಗಿದೆ. ತಡ ರಾತ್ರಿಯಾದ ಕಾರಣ ಕ್ಯಾಪ್ಸ್ ಕೆಫೆ ಕ್ಲೋಸ್ ಆಗಿತ್ತು. ಹೀಗಾಗಿ ಅದೃಷ್ಠವಶಾತ್ ಯಾವುದೇ ಪ್ರಾಣ ಹಾನಿಯಾಗಿಲ್ಲ. ಆದರೆ ರೆಸ್ಟೋರೆಂಟ್ ಸಂಪೂರ್ಣ ಹಾನಿಯಾಗಿದೆ.
ದಾಳಿ ಹಿಂದೆ ಲಡ್ಡಿ
ಕೆನಾಡ ತನಿಖಾ ಎಜೆನ್ಸಿಗಳು ಈ ದಾಳಿ ತನಿಖೆ ನಡೆಸುತ್ತಿದೆ. ಜರ್ಮನಿ ಮೂಲದ ಬಬ್ಬರ್ ಖಾಲ್ಸಾ ಇಂಟರ್‌ನ್ಯಾಷನಲ್ ಆಪರೇಟಿವ್ ಹರ್ಜಿತ್ ಸಿಂಗ್ ಅಲಿಯಾಸ್ ಲಡ್ಡಿ ಈ ದಾಳಿ ನಡೆಸಿರುವ ಸಾಧ್ಯತೆಯನ್ನು ಕೆನಾಡ ತನಿಖಾ ಎಜೆನ್ಸಿ ಅನುಮಾನ ವ್ಯಕ್ತಪಡಿಸಿದೆ. ಲಡ್ಡಿ ಭಾರತದ ಮೋಸ್ಟ್ ವಾಟೆಂಟ್ ಉಗ್ರನಾಗಿದ್ದಾನೆ. ಭಾರತದಲ್ಲಿ ಹಲವು ಭಯೋತ್ಪಾದಕ ಕೃತ್ಯಗಳು, ಹಿಂದೂ ನಾಯಕ ಹತ್ಯೆ ಹಿಂದೆ ಈತನ ಮೇಲೆ ಗಂಭೀರ ಆರೋಪಗಳು ಕೇಳಿಬಂದಿದೆ. ಎಪ್ರಿಲ್ 13, 2024ರಲ್ಲಿ ವಿಶ್ವ ಹಿಂದೂಪರಿಷತ್ ಪ್ರಭಾಕರ್ ಮೇಲೆ ಪಂಜಾಬ್‌ನ ನಂಗಾಲ್‌ನಲ್ಲಿ ಗುಂಡಿನ ದಾಳಿ ನಡೆಸಿ ಹತ್ಯೆ ಮಾಡಲಾಗಿತ್ತು. ಈ ದಾಳಿ ಹಿಂದೆ ಇದೆ ಲಡ್ಡಿ ಮಾಸ್ಟರ್ ಮೈಂಡ್ ಆಗಿ ಕಾರ್ಯನಿರ್ವಹಿಸಿದ್ದ ಅನ್ನೋದು ತನಿಖೆಯಲ್ಲಿ ಬಹಿರಂಗವಾಗಿದೆ. 2023ರಲ್ಲಿ ಲಡ್ಡಿ ಕುರಿತು ಮಾಹಿತಿ ನೀಡಿದರೆ 10 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್ಐಎ ಘೋಷಿಸಿತ್ತು. ಶಿವಸೇನಾ ನಾಯಕರ ಮನೆ ಮೇಲೆ ಪೆಟ್ರೋಲ್ ಬಾಂಬ್ ಹಾಕಿದ ಪ್ರಕರಣದಲ್ಲಿ ಇದೇ ಲಡ್ಡಿ ಸಹಚರು ಲೂಧಿಯಾನ ಜೈಲಿನಲ್ಲಿದ್ದಾರೆ.
