1708ರಲ್ಲಿ ಮುಳುಗಿದ ನೌಕೆಯಲ್ಲಿ ರಾಶಿ ರಾಶಿ ಚಿನ್ನ: 1.3 ಲಕ್ಷ ಕೋಟಿ ರು. ಮೌಲ್ಯದ ಬಂಗಾರ ಪತ್ತೆ!
* 1.3 ಲಕ್ಷ ಕೋಟಿ ರು. ಮೌಲ್ಯದ ಚಿನ್ನ ತುಂಬಿರುವ ನೌಕೆ ಇದು
* 300 ವರ್ಷಗಳ ಹಿಂದೆ ಬ್ರಿಟಿಷರು ಮುಳುಗಿಸಿದ್ದ ಸ್ಪೇನ್ ಹಡಗು
* ಹಡಗಿನಲ್ಲಿರುವ ಸಂಪತ್ತಿಗಾಗಿ ಮೂರು ದೇಶಗಳ ನಡುವೆ ಫೈಟ್
* ಮೊದಲ ಬಾರಿಗೆ ಚಿನ್ನ ಸೇರಿ ಅವಶೇಷಗಳ ಫೋಟೋ ಬಿಡುಗಡೆ
ಲಂಡನ್(ಜೂ.11): 300 ವರ್ಷಗಳ ಹಿಂದೆ ಮುಳುಗಡೆಯಾಗಿದ್ದ, ಸುಮಾರು 1.3 ಲಕ್ಷ ಕೋಟಿ ರು. ಮೌಲ್ಯದ ನೂರಾರು ಟನ್ ಚಿನ್ನ ತುಂಬಿರುವ ಸ್ಪೇನ್‌ನ ಹಡಗೊಂದರ ಫೋಟೋಗಳನ್ನು ಕೊಲಂಬಿಯಾದ ಸೇನೆ ಬಿಡುಗಡೆ ಮಾಡಿದೆ. ಈ ಹಡಗಿನಲ್ಲಿರುವ ಸಂಪತ್ತಿಗಾಗಿ ಕೊಲಂಬಿಯಾ, ಸ್ಪೇನ್ ಹಾಗೂ ಬೊಲಿವಿಯಾ ನಡುವೆ ಜಟಾಪಟಿ ನಡೆಯುತ್ತಿದೆ.
ರಿಮೋಟ್‌ನಿಂದ ಕಾರ್ಯನಿರ್ವಹಿಸುವ 4 ಸಾಧನಗಳನ್ನು ಸಮುದ್ರದ 3100 ಅಡಿ ಆಳಕ್ಕೆ ಕಳುಹಿಸಿ ಈ ಚಿತ್ರಗಳನ್ನು ಸೆರೆ ಹಿಡಿಯಲಾಗಿದೆ. ಸಾಂಸ್ಕೃತಿಕ ಸಚಿವಾಲಯದ ಮೇಲುಸ್ತುವಾರಿಯಲ್ಲಿ ನೌಕಾಪಡೆ ಈ ಕಸರತ್ತು ನಡೆಸಿದೆ ಎಂದು ಕೊಲಂಬಿಯಾ ಸೇನೆ ತಿಳಿಸಿದೆ.
2015ರಲ್ಲಿ ಈ ಹಡಗು ಪತ್ತೆ ಬಗ್ಗೆ ವರದಿಯಾಗಿತ್ತಾದರೂ, ಈವರೆಗೂ ಹಡಗಿನ ಬಳಿ ಮಾನವ ಚಲನವಲನ ಕಂಡುಬಂದಿಲ್ಲ. ಈಗ ಸೆರೆಹಿಡಿದಿರುವ ಚಿತ್ರಗಳಲ್ಲಿ ಚಿನ್ನದ ತುಣುಕುಗಳು, ಗಾಜಿನ ಬಾಟಲಿಗಳು, ಪಿಂಗಾಣಿ ವಸ್ತುಗಳು ಕಂಡುಬಂದಿವೆ. ಇದರ ಪಕ್ಕದಲ್ಲೇ ಮತ್ತೆರಡು ಹಡಗಿನ ಅವಶೇಷ ಪತ್ತೆಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
‘ಸ್ಯಾನ್ ಓಸೆ ಗ್ಯಾಲಿಯನ್’ ಎಂಬ ಈ ಹಡಗು ಸ್ಪೇನ್ ರಾಜಮನೆತನಕ್ಕೆ ಸೇರಿದ್ದಾಗಿದ್ದು, 1708ರಲ್ಲಿ ಕೊಲಂಬಿಯಾದ ಕರಾವಳಿ ಕಾರ್ಟಜೆನಾ ಬಳಿ ಬ್ರಿಟಿಷರ ದಾಳಿಯಿಂದ ಈ ಹಡಗು ಮುಳುಗಡೆಯಾಗಿತ್ತು. ಆ ಸಂದರ್ಭದಲ್ಲಿ 600 ಸಿಬ್ಬಂದಿ ಹಡಗಿನಲ್ಲಿದ್ದರು. ಕೆಲವೇ ಕೆಲವು ಮಂದಿ ಮಾತ್ರ ಬದುಕುಳಿದಿದ್ದರು. ಆ ವೇಳೆ ಹಡಗಿನಲ್ಲಿ ಅಪಾರ ಚಿನ್ನ ಇತ್ತು. ಹೀಗಾಗಿ ಹಲವರು ಶೋಧ ನಡೆಸಿದ್ದರು. 2015ರಲ್ಲಿ ಈ ಹಡಗಿನ ಬಗ್ಗೆ ಕುರುಹು ಪತ್ತೆಯಾಗಿತ್ತು.
ಜಟಾಪಟಿ:
ತನ್ನ ಕರಾವಳಿಯಲ್ಲಿ ಈ ಹಡಗು ಪತ್ತೆಯಾಗಿರುವುದರಿಂದ, ಅದು ತನ್ನ ಸಾಂಸ್ಕೃತಿಕ ಪರಂಪರೆಗೆ ಸೇರಿದ್ದಾಗಿರುತ್ತದೆ. ಅದರಲ್ಲಿರುವ ವಸ್ತುಗಳನ್ನು ಮಾರಾಟ ಮಾಡಲಾಗುವುದಿಲ್ಲ ಎಂದು ಕೊಲಂಬಿಯಾ ಸರ್ಕಾರ ಹೇಳಿದೆ. ಆದರೆ, ತನ್ನ ಹಡಗು ಇದಾಗಿರುವ ಕಾರಣ ಅದರಲ್ಲಿರುವ ಅಷ್ಟೂಸಂಪತ್ತು ತನ್ನದು ಎಂದು ಸ್ಪೇನ್ ವಾದಿಸುತ್ತಿದೆ. ಹಡಗಿನಲ್ಲಿರುವ ಚಿನ್ನವನ್ನು ಗಣಿಗಳಿಂದ ತೆಗೆದಿದ್ದು ತನ್ನ ದೇಶದ ಪ್ರಜೆಗಳು. ಹೀಗಾಗಿ ಅದೆಲ್ಲಾ ತನಗೆ ಸೇರಬೇಕು ಎಂದು ಬೊಲಿವಿಯಾ ವಾದಿಸುತ್ತಿದೆ. ಹೀಗಾಗಿ ಅಂತಿಮವಾಗಿ ಹಡಗಿನಲ್ಲಿರುವ ಸಂಪತ್ತು ಯಾರ ಪಾಲಾಗುತ್ತದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.