* ಇಸ್ರೇಲಿನ ಯಹೂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಇಸ್ರೇಲ್‌ ಪೊಲೀಸರಿಂದ ಮಸೀದಿ ಪ್ರವೇಶ* ಪೊಲೀಸರು ಪ್ಯಾಲೆಸ್ತೀನ್‌ ನಾಗರಿಕ ನಡುವೆ ಸಂಘರ್ಷ* 17 ಮಂದಿ ಪ್ಯಾಲೆಸ್ಟೀನರಿಗೆ ಗಾಯ, 9 ಜನರ ಬಂಧನ

ಜೆರುಸಲೆಂ(ಏ.18): ಪವಿತ್ರ ಈಸ್ಟರ್‌ ವಾರದ ಪ್ರಯುಕ್ತ ಭಾನುವಾರ ಜೆರುಸಲೆಂ ನಗರದಲ್ಲಿನ ಪವಿತ್ರ ಅಲ…-ಅಕ್ಸಾ ಮಸೀದಿಗೆ ಬಂದಿದ್ದ ಇಸ್ರೇಲಿನ ಯಹೂದಿಗಳಿಗೆ ರಕ್ಷಣೆ ನೀಡುವ ಉದ್ದೇಶದಿಂದ ಇಸ್ರೇಲ್‌ ಪೊಲೀಸರು ಮಸೀದಿಗೆ ಪ್ರವೇಶಿಸಿದ್ದು ಮತ್ತಷ್ಟುಗಲಭೆಗೆ ಕಾರಣವಾಗಿದೆ. ಈ ವಿಷಯವಾಗಿ ಪೊಲೀಸರು ಮತ್ತು ಪ್ಯಾಲೆಸ್ತೀನ್‌ ನಾಗರಿಕರ ನಡುವೆ ಏರ್ಪಟ್ಟಸಂಘರ್ಷದಲ್ಲಿ 17 ಪ್ಯಾಲೆಸ್ತೀನ್‌ ನಾಗರಿಕರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ.

ಎರಡು ದಿನಗಳ ಹಿಂದೆ ಸಹ ಈ ಸ್ಥಳದಲ್ಲಿ ಗಲಭೆ ಉಂಟಾಗಿತ್ತು. ಹೀಗಾಗಿ ಇಸ್ರೇಲಿನ ನಾಗರಿಕರ ರಕ್ಷಣೆ ಉದ್ದೇಶದಿಂದ ಪೊಲೀಸರು ಮಸೀದಿಯನ್ನು ಪ್ರವೇಶಿಸಿದ್ದರು. ಆದರೆ ಪೊಲೀಸರು ಪ್ರವೇಶಿಸುತ್ತಿದ್ದಂತೆಯೇ ಪ್ಯಾಲೆಸ್ತೀನಿಯನ್ನರ ಉದ್ರಿಕ್ತ ಗುಂಪೊಂದು ಕಲ್ಲು ತೂರಾಟ ನಡೆಸಿತು. ಪ್ರಕರಣ ಸಂಬಂಧ 9 ಜನರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದೇ ವೇಳೆ ಪ್ಯಾಲೆಸ್ತೀನಿಯನ್ನರು ಪವಿತ್ರ ಸ್ಥಳವನ್ನು ಅಪವಿತ್ರಗೊಳಿಸುತ್ತಿದ್ದಾರೆ ಎಂದು ಆರೋಪಿಸಿದರು.

ಆದರೆ ಈ ಬಗ್ಗೆ ಪ್ರತಿಕ್ರಿಯಿಸಿರುವ ಪ್ಯಾಲೆಸ್ತೀನ್‌ ಅಧ್ಯಕ್ಷ ಮಹಮೂದ್‌ ಅಬ್ಬಾಸ್‌ ಅವರ ವಕ್ತಾರರು, ಇಸ್ರೇಲ್‌ ಪವಿತ್ರ ಸೂಕ್ಷ್ಮ ಸ್ಥಳವನ್ನು ವಿಭಜಿಸಲು ಯತ್ನಿಸುತ್ತಿದೆ. ಇಸ್ರೇಲ್‌ ಸರ್ಕಾರ ಇದರ ಪರಿಣಾಮವನ್ನು ಭರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ಮಸೀದಿಯನ್ನು ಹೊಂದಿರುವ ಬೆಟ್ಟದ ಮೇಲಿನ ಕಾಂಪೌಂಡ್‌ ಇಸ್ಲಾಂನಲ್ಲಿ ಮೂರನೇ ಪವಿತ್ರ ಸ್ಥಳವಾಗಿದೆ. ಇದೇ ವೇಳೆ ಯಹೂದಿಗಳಿಗೂ ಇದು ಪವಿತ್ರ ಸ್ಥಳವಾಗಿದೆ. ಹೀಗಾಗಿ ಜೆರುಸಲೆಂನಲ್ಲಿರುವ ಅಲ… ಅಕ್ಸಾ ಮಸೀದಿಯು ಇಸ್ರೇಲಿ-ಪ್ಯಾಲೆಸ್ಟೀನ್‌ ಪ್ರಜೆಗಳ ನಡುವಿನ ಗಲಭೆಗಳಿಗೆ ಕೇಂದ್ರಸ್ಥಾನವಾಗಿ ಮಾರ್ಪಟ್ಟಿದೆ. ಕಳೆದ ವರ್ಷವೂ ಇಲ್ಲಿ ನಡೆದ ಘರ್ಷಣೆ 11 ದಿನಗಳ ಗಾಜಾ ಯುದ್ಧಕ್ಕೆ ಕಾರಣವಾಗಿತ್ತು.