ನೆರೆಯ ತೈವಾನ್ ವಶಕ್ಕೆ ಚೀನಾದಿಂದ ಮಸಲತ್ತು?
ನೆರೆಯ ತೈವಾನ್ ವಶಕ್ಕೆ ಚೀನಾದಿಂದ ಮಸಲತ್ತು?| ಆಗ್ನೇಯ ಸಮುದ್ರ ತೀರದಲ್ಲಿ ಭಾರೀ ಸೇನಾ ಜಮಾವಣೆ| ತೈವಾನ್ ಮೇಲೆ ಸೇನಾ ಆಡಳಿತ ಹೇರಿಕೆಗೆ ಚೀನಾ ಕುತಂತ್ರ
ಬೀಜಿಂಗ್(ಅ.19): ಭಾರತ ಸೇರಿದಂತೆ ಸುತ್ತಮುತ್ತಲ ರಾಷ್ಟ್ರಗಳ ಗಡಿ ರೇಖೆಯ ಅತಿಕ್ರಮಣ ಮಾಡಿಕೊಳ್ಳುವ ತನ್ನ ನರಿ ಬುದ್ಧಿ ಪ್ರದರ್ಶಿಸುವ ನೆರೆಯ ಚೀನಾ ಇದೀಗ ತನ್ನ ಆಗ್ನೇಯ ಭಾಗದ ಸಮುದ್ರ ತೀರದಲ್ಲಿ ಭಾರೀ ಪ್ರಮಾಣದ ಸೇನೆ ಜಮಾವಣೆ ಮಾಡುತ್ತಿದೆ. ಈ ಹಿನ್ನೆಲೆಯಲ್ಲಿ ತೈವಾನ್ ಅನ್ನು ವಶಕ್ಕೆ ಪಡೆಯಲು ಚೀನಾ ಹೊಂಚು ಹಾಕುತ್ತಿರಬಹುದು ಎಂದು ರಕ್ಷಣಾ ತಜ್ಞರು ಎಚ್ಚರಿಕೆ ನೀಡಿದ್ದಾರೆ.
ಈ ಹಿಂದೆ ಈ ಪ್ರಾಂತ್ಯದಲ್ಲಿ ತನ್ನ ಹಳೆಯ ಡಿಎಫ್-11 ಮತ್ತು ಡಿಎಫ್-15 ಹೆಸರಿನ ಕ್ಷಿಪಣಿಗಳನ್ನು ನಿಯೋಜಿಸಿತ್ತು. ಆದರೆ, ಇದೀಗ ನಡೆದ ದಿಢೀರ್ ಬೆಳವಣಿಗೆಯಲ್ಲಿ ಈ ಎರಡು ಕ್ಷಿಪಣಿಗಳ ಜಾಗದಲ್ಲಿ ಅತ್ಯಾಧುನಿಕ ಮತ್ತು ಹೆಚ್ಚು ಸಾಮರ್ಥ್ಯದ ಹೈಪರ್‌ಸೋನಿಕ್ ಡಿಎಫ್-17 ಹೆಸರಿನ ಕ್ಷಿಪಣಿಯನ್ನು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ತೈವಾನ್ ತನ್ನ ಅವಿಭಾಜ್ಯ ಅಂಗವೆಂದೇ ಚೀನಾ ಪ್ರತಿಪಾದಿಸಿಕೊಳ್ಳುತ್ತಿರುವ ಹೊರತಾಗಿಯೂ, ತೈವಾನ್ ಮೇಲೆ ಚೀನಾ ಸರ್ಕಾರದ ಆಡಳಿತ ಹೇರಿಕೆಯು ಮರೀಚಿಕೆಯಾಗಿಯೇ ಉಳಿದಿದೆ. ಹೀಗಾಗಿ, ಅಗತ್ಯ ಏರ್ಪಟ್ಟರೆ ತೈವಾನ್ ಮೇಲೆ ಸೇನೆಯಿಂದ ದಾಳಿ ಮಾಡಿಸಿ ತೈವಾನ್ ಮೇಲೆ ಹಕ್ಕು ಸಾಧಿಸಲೆಂದೇ ಅತ್ಯಾಧುನಿಕ ಹಾಗೂ ನಿರ್ದಿಷ್ಟಗುರಿಯ ಮೇಲೆ ಕರಾರುವಕ್ಕಾಗಿ ದಾಳಿ ನಡೆಸುವ ಡಿಎಫ್-17 ಕ್ಷಿಪಣಿ ನಿಯೋಜಿಸಲಾಗಿದೆ ಎನ್ನಲಾಗಿದೆ.