* ಭಾರತಕ್ಕೆ ಟಕ್ಕರ್‌ ನೀಡಲು ಟಿಬೆಟಿಯನ್ನರಿಗೆ ಚೀನಾ ಮೊರೆ* ಭಾರತದ ವಿಶೇಷ ಪಡೆ ಎದುರಿಸಲು ಟಿಬೆಟ್‌ ಯೋಧರ ನಿಯೋಜನೆ ತಂತ್ರ* ಲಡಾಖ್‌ ಗಡಿಯಲ್ಲಿ ಆದ ಮುಖಭಂಗಕ್ಕೆ ತಿರುಗೇಟು ನೀಡಲು ಚೀನಾ ಸಜ್ಜು

ನವದೆಹಲಿ(ಜು.10): 2017ರಲ್ಲಿ ಗಲ್ವಾನ್‌ನಲ್ಲಿ ಮತ್ತು 2020ರಲ್ಲಿ ಪೂರ್ವ ಲಡಾಖ್‌ನಲ್ಲಿ ಭಾರತೀಯ ಯೋಧರ ಜೊತೆಗಿನ ಮುಖಾಮುಖಿಯಲ್ಲಿ ಭಾರೀ ಪೆಟ್ಟು ತಿಂದು ಮುಖಭಂಗಕ್ಕೆ ಒಳಗಾಗಿದ್ದ ಚೀನಾ, ಇದೀಗ ಭಾರತದ ವಿರುದ್ಧ ಸೆಣಸಿಗೆ ಟಿಬೆಟಿಯನ್‌ ಯೋಧರ ಪಡೆ ಕಟ್ಟುತ್ತಿರುವ ವಿಷಯ ಬೆಳಕಿಗೆ ಬಂದಿದೆ. ಅದರಲ್ಲೂ ವಿಶೇಷವಾಗಿ ಭಾರತದ ವಿಶೇಷ ಮುಂಚೂಣಿ ಪಡೆ (ಎಸ್‌ಎಫ್‌ಎಫ್‌- ಸ್ಪೆಷ್ಟಲ್‌ ಫ್ರಂಟಿಯರ್‌ ಪೋ​ರ್‍ಸ್) ಎದುರಿಸಲು, ಬಹುತೇಕ ಇದೇ ರೀತಿಯ ದೈಹಿಕ, ಮಾನಸಿಕ ಸಾಮರ್ಥ್ಯ ಹೊಂದಿರುವ ಟಿಬೆಟಿಯನ್‌ ಯುವಕರನ್ನು ಬಳಸಿಕೊಳ್ಳಲು ಚೀನಾ ನಿರ್ಧರಿಸಿದೆ.

ಗಲ್ವಾನ್ ಕಣಿವೆಯಲ್ಲಿ 40 ಚೀನಾ ಯೋಧರು ಹತ: ಮಾಹಿತಿ ಬಿಚ್ಚಿಟ್ಟಾತನಿಗೆ 8 ತಿಂಗಳು ಜೈಲು!

ಈಗಾಗಲೇ ಟಿಬೆಟ್‌ ಅನ್ನು ಆಕ್ರಮಿಸಿಕೊಂಡಿರುವ ಚೀನಿಯರಿಗೆ ಬಗ್ಗೆ ಟಿಬಿಟಿಯನ್ನರಿಗೆ ಹೆಚ್ಚೇನು ಒಲವಿಲ್ಲ. ಆದರೂ ಅವರ ಪೈಕಿಯೇ ಕಮ್ಯುನಿಸ್ಟ್‌ ನಿಲವುಗಳನ್ನು ಬೆಂಬಲಿಸುವ ಮತ್ತು ದಲೈಲಾಮಾರನ್ನು ವಿರೋಧಿಸುವ ಯುವಕರನ್ನು ನೂರಾರು ಜನರನ್ನು ತನ್ನ ಬುಟ್ಟಿಗೆ ಹಾಕಿಕೊಂಡಿರುವ ಚೀನಾ ಸೇನೆ, ಅವರಿಗೆ ನಿರಂತರವಾಗಿ ತರಬೇತಿ ನೀಡುತ್ತಿದೆ ಎಂದು ಬೆಳಕಿಗೆ ಬಂದಿದೆ. ಕಳೆದ ಜನವರಿ ತಿಂಗಳಿನಿಂದಲೇ ಅವರಿಗೆ ಪೂರ್ವ ಲಡಾಖ್‌, ಅರುಣಾಚಲ ಪ್ರದೇಶ ಸೇರಿದಂತೆ ಭಾರತದ ಗಡಿಯಲ್ಲಿ ಹೋರಾಡಲು ಅಗತ್ಯವಾದ ತರಬೇತಿ ನೀಡಲಾಗುತ್ತಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ರಾಷ್ಟಿ್ರಯ ಸುದ್ದಿವಾಹಿನಿಯೊಂದು ವರದಿ ಮಾಡಿದೆ.

ಟಿಬೆಟ್‌ ಯುವಕರೇ ಏಕೆ?

ಲಡಾಖ್‌ ನಂತಹ ಹಿಮಾಲಯದ ಎತ್ತರ ಪ್ರದೇಶದಲ್ಲಿ ಚೀನಾ ಸೈನಿಕರು ಪ್ರತಿಕೂಲ ಸನ್ನಿವೇಶಗಳನ್ನು ಎದುರಿಸುತ್ತಿದ್ದಾರೆ. ಇದು ಚೀನಾ ಸೇನಗೆ ತೊಡಕಾಗಿದೆ. ಹೀಗಾಗಿ ಚೀನಾ ಸೈನಿಕರ ಬದಲು ಟಿಬೆಟ್‌ ಯುವಕರನ್ನೇ ಮುಂಚೂಣಿ ಯೋಧರನ್ನಾಗಿ ನೇಮಿಸಿ ಪರಿಸ್ಥಿತಿಯ ಲಾಭ ಪಡೆಯಲು ಚೀನಾ ಮುಂದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಲಡಾಖ್‌ನಲ್ಲಿ ಸ್ವಲ್ಪದರಲ್ಲೇ ತಪ್ಪಿತು ಯುದ್ಧ!

ಎಸ್‌ಎಫ್‌ಎಫ್‌ ಯಾವುದು?

ಭಾರತಕ್ಕೆ ವಲಸೆ ಬಂದ ಟಿಬೆಟಿಯನ್‌ ಮತ್ತು ನೇಪಾಳಿ ಸಮುದಾಯದ ಯುವಕರನ್ನೇ ಬಳಸಿ ಸಜ್ಜುಗೊಳಿಸಿದ ಪಡೆ ಇದು. 1962ರಲ್ಲೇ ಇದು ರಚನೆಯಾಗಿದೆ. ಇದರ ಯೋಧರು ಮುಂಚೂಣಿ ಮತ್ತು ಮಫ್ತಿಯಲ್ಲಿ ಸೇವೆ ಸಲ್ಲಿಸುತ್ತಾರೆ. ಇದು 6 ಬೆಟಾಲಿಯನ್‌ ಒಳಗೊಂಡಿದ್ದು, ಕನಿಷ್ಠ 5000 ಯೋಧರು ಇದ್ದಾರೆ. ಲಡಾಖ್‌, ಅರುಣಾಚಲಪ್ರದೇಶದ ಅತ್ಯಂತ ಕಠಿಣ ಹವಾಮಾನ ಸವಾಲುಗಳನ್ನು ಯಾವುದೇ ಅಡೆತಡೆ ಇಲ್ಲದೇ ಎದುರಿಸುವ ದೈಹಿಕ, ಮಾನಸಿಕ ಸಾಮರ್ಥ ಇವರಲ್ಲಿದೆ. ಗಲ್ವಾನ್‌ ಮತ್ತು ಪೂರ್ವ ಲಡಾಖ್‌ನಲ್ಲಿ ನಡೆದ ಮುಷ್ಠಿಕಾಳಗದ ವೇಳೆ ಚೀನಾ ಯೋಧರಿಗೆ ಪಾಠ ಕಲಿಸಿದ್ದು ಇದೇ ಪಡೆ.