ಒಂದು ಫ್ಲ್ಯಾಟ್ ಖರೀದಿಸಿದ ಮಹಿಳೆ ಜೊತೆಗೆ 196 ಕಾರುಗಳನ್ನು ಪಾರ್ಕಿಂಗ್ ಮಾಡುವ ಸ್ಥಳವನ್ನು ಖರೀದಿಸಿದ್ದಾರೆ. ಪಾರ್ಕಿಂಗ್‌ ಸ್ಪೇಸ್ ಖರೀದಿಗೆ ಮಹಿಳೆ 19.36 ಕೋಟಿ ರೂಪಾಯಿ ನೀಡಿದ್ದಾರೆ. ಈ ಮಹಿಳೆ ಪಾರ್ಕಿಂಗ್ ಸ್ಪೇಸ್ ಖರೀದಿಸಿದ್ದು ಯಾಕೆ?

ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸುವಾಗ ಜೊತೆಗೆ ಪಾರ್ಕಿಂಗ್ ಸ್ಪೆಸ್ ಖರೀದಿಸಬೇಕು. ನಗರಗಳಲ್ಲಿ ಕಾರು ಸೇರಿದಂತೆ ವಾಹನಗಳ ಪಾರ್ಕಿಂಗ್ ಸ್ಥಳ ಅತ್ಯಂತ ಮುಖ್ಯ. ಮಹಿಳೆಯೊಬ್ಬರು ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್ ಖರೀದಿಸಿದ್ದಾರೆ. ಒಂದು ಮನೆಗೆ ಒಂದು ಕಾರು ಪಾರ್ಕಿಂಗ್ ಸ್ಥಳ ಬೇಕು. ಆದರೆ ಈ ಮಹಿಳೆ 196 ಕಾರು ಪಾರ್ಕ್ ಮಾಡುವ ಸ್ಪೇಸ್ ಖರೀದಿಸಿದ್ದಾರೆ. ಕೇವಲ ಪಾರ್ಕಿಂಗ್ ಸ್ಥಳ ಖರೀದಿಗೆ 19.36 ಕೋಟಿ ರೂಪಾಯಿ ಖರ್ಚು ಮಾಡಿದ್ದಾರೆ. ಈ ಮಹಿಳೆಗೆ ಸರಿಯಾಗಿ ಕಾರು ಪಾರ್ಕ್ ಮಾಡಲು ಬರುವುದಿಲ್ಲ, ಹೀಗಾಗಿ ಹೆಚ್ಚಿನ ಸ್ಥಳ ಖರೀದಿಸಿದ್ದಾರೆ ಎಂದೆಲ್ಲಾ ಟೀಕಿಸಿದ್ದರು. ಆದರೆ ಇದೀಗ ಇದೇ ಮಹಿಳೆ ಕಿಂಗ್ ಆಗಿದ್ದಾರೆ.

2018ರಲ್ಲಿ ಪಾರ್ಕಿಂಗ್ ಸ್ಥಳ ಖರೀದಿ

ಈ ಘಟನೆ ನಡೆದಿರುವುದು ಚೀನಾದಲ್ಲಿ. ವು ಅನ್ನೋ ಮಹಿಳೆ 2018ರಲ್ಲಿ ನಿರ್ಮಾಣ ಹಂತದಲ್ಲಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿದ್ದಾರೆ. ಬಿಲ್ಡರ್ ಸಾಲದ ಸುಳಿಗೆ ಸಿಲುಕಿದ್ದ ಕಾರಣ ಮನೆಗಳನ್ನು ಬೇಗ ಮಾರಾಟ ಮಾಡಿ ಸಾಲ ತೀರಿಸಲು ಪ್ಲಾನ್ ಮಾಡಿದ್ದರು. ಇದೇ ವೇಳೆ ವು ಒಂದು ಫ್ಲ್ಯಾಟ್ ಖರೀದಿಸಿದ್ದಾರೆ. ಇದೇ ವೇಳೆ ತನಗೆ 196 ಪಾರ್ಕಿಂಗ್ ಸ್ಥಳ ಬೇಕು ಎಂದು ಮನವಿ ಮಾಡಿದ್ದಾರೆ. ಮೊದಲೇ ಸಾಲದಲ್ಲಿದ್ದ ಬಿಲ್ಡರ್ ಡೀಲ್ ಒಪ್ಪಿಕೊಂಡಿದ್ದಾನೆ. 19.36 ಕೋಟಿ ರೂಪಾಯಿಗೆ 196 ಪಾರ್ಕಿಂಗ್ ಸ್ಥಳ ಮಾರಾಟ ಮಾಡಿದ್ದಾನೆ. ಪಾರ್ಕಿಂಗ್ ಸ್ಥಳ ಖರೀದಿಸುವಾಗ ಹಲವರು ಈಕೆಗೆ ಹುಚ್ಚು ಎಂದಿದ್ದರು. ಆದರೆ ಈಗ ಮಹಿಳೆ ವಿರುದ್ಧ ಅದೇ ಅಪಾರ್ಟ್‌ಮೆಂಟ್‌ನ ಜನ ಮನವಿ ಮಾಡುತ್ತಿದ್ದಾರೆ,ಪೊಲೀಸರಿಗೆ ದೂರು ಕೊಟ್ಟಿದ್ದಾರೆ, ಕೊನೆಗೆ ಕೋರ್ಟ್ ಮೆಟ್ಟಿಲೇರಿದರೂ ಮಹಿಳೆ ಜಗ್ಗಿಲ್ಲ.

ಮೊದಲೇ ಪ್ಲಾನ್ ಮಾಡಿದ್ದ ಮಹಿಳೆ

ಮಹಿಳೆ ಖರೀದಿಸಿದ ಫ್ಲ್ಯಾಟ್ ಹಾಗೂ ಪಾರ್ಕಿಂಗ್ ಸ್ಪೇಸ್ ಇರುವ ಪ್ರದೇಶ 2018ರಲ್ಲಿ ಕಾಡು, ಪೊದೆಗಳಿಂದ ಕೂಡಿದ ಪ್ರದೇಶವಾಗಿತ್ತು. ಆದರೆ ಈ ಪ್ರದೇಶದ ಕೆಲವೇ ವರ್ಷದಲ್ಲಿ ಅಭಿವೃದ್ಧಿಯಾಗಲಿದೆ. ಕಂಪನಿಗಳು, ಮಾಲ್, ಶಾಲಾ ಕಾಲೇಜು ಸೇರಿದಂತೆ ಎಲ್ಲಾ ಸೌಲಭ್ಯಗಳಿರುವ ಪ್ರದೇಶವಾಗಲಿದೆ ಎಂದು ಮೊದಲೇ ಪ್ಲಾನ್ ಮಾಡಿದ್ದಳು. ಹೀಗಾಗಿ ಪಾರ್ಕಿಂಗ್ ಸ್ಪೇಸ್ ಖರೀದಿಸಿದ್ದಳು. 2024ರಿಂದ ಈಕೆ ತನ್ನ ಪಾರ್ಕಿಂಗ್ ಸ್ಪೇಸ್ ಮಾರಾಟ ಮಾಡಲು, ಬಾಡಿಗೆ ನೀಡಲು ಮುಂದಾಗಿದ್ದಾಳೆ.

ಅಪಾರ್ಟ್‌ಮೆಂಟ್ ಬಿಲ್ಡರ್ಸ್ ಒಂದು ಕಾರು ಪಾರ್ಕಿಂಗ್ ಸ್ಪೇಸ್‌ಗೆ 4 ರಿಂದ 6 ಲಕ್ಷ ರೂಪಾಯಿವರೆಗೆ ಮಾರಾಟ ಮಾಡುತ್ತಿದ್ದಾರೆ. ಆದರೆ ಈ ಮಹಿಳೆ 14 ರಿಂದ 25 ಲಕ್ಷ ರೂಪಾಯಿಗೆ ಮಾರಾಟ ಮಾಡುತ್ತಿದ್ದಾಳೆ. ಇನ್ನು ಕೆಲ ಪಾರ್ಕಿಂಗ್ ಸ್ಪೇಸ್‌ಗಳನ್ನು ತಿಂಗಳಿಗೆ 7 ಸಾವಿರ ರೂಪಾಯಿಗೆ ಬಾಡಿಗೆ ನೀಡುತ್ತಿದ್ದಾಳೆ. ಇದರಿಂದ ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸಿದವರು ಪಾರ್ಕಿಂಗ್ ಜಾಗ ಸಿಗದೆ ಕಂಗಾಲಾಗಿದ್ದಾರೆ. ಅಪಾರ್ಟ್‌ಮೆಂಟ್‌ನಲ್ಲಿ ಮನೆ ಖರೀದಿಸದ ಹಲವರು ಕೇವಲ ಪಾರ್ಕಿಂಗ್ ಜಾಗ ಖರೀದಿಸಿದ್ದಾರೆ. ಇತ್ತ ಮನೆ ಖರೀದಿಸಿದ ಮಂದಿಗೆ ಪಾರ್ಕಿಂಗ್ ಸಿಗುತ್ತಿಲ್ಲ. ಹೀಗಾಗಿ ಜಟಾಪಟಿ ಆರಂಭಗೊಂಡಿದೆ. ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಆಗಮಿಸಿ ಮಾತುಕತೆ ನಡೆಸಿದ್ದಾರೆ. ಕಾನೂನು ಪ್ರಕಾರ ಮಹಿಳೆ ನಿರ್ಧಾರಗಳು ಸರಿಯಾಗಿದೆ. ಹೀಗಾಗಿ ಪೊಲೀಸರು ಸಂಧಾನ ಮೂಲಕ ಸಮಸ್ಯೆ ಬಗೆಹರಿಸಲು ಮುಂದಾಗಿದ್ದಾರೆ. ಆದರೆ ಸಾಧ್ಯವಾಗಿಲ್ಲ. ಹೀಗಾಗಿ ಅಪಾರ್ಟ್‌ಮೆಂಟ್‌ನ ಇತರ ಸದಸ್ಯರು ಕೋರ್ಟ್‌ಗೆ ಮನವಿ ಮಾಡಿದ್ದಾರೆ. ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ.

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮಹಿಳೆ ಪರವಾಗಿ ತೀರ್ಪು ನೀಡಿದೆ. ಒಂದು ಅಪಾರ್ಟ್‌ಮೆಂಟ್‌ನಲ್ಲಿ ಒಂದಕ್ಕಿಂತ ಹೆಚ್ಚು ಕಾರು ಪಾರ್ಕಿಂಗ್ ಖರೀದಿಸಿಬಾರದು ಅನ್ನೋ ನಿಯಮವಿಲ್ಲ. ಅಪಾರ್ಟ್‌ಮೆಂಟ್ ಬಿಲ್ಡರ್ಸ್ ಆರಂಭದಲ್ಲೇ ಮಾರ್ಗಸೂಚಿಗಳು, ಸೊಸೈಟಿ ನಿಯಮಗಳ ರೂಪಿಸಿ ಮಾರಾಟ ಮಾಡಬೇಕು. ಇಲ್ಲಿ ಬಿಲ್ಡರ್ ಯಾವುದೇ ತಕರಾರಿಲ್ಲದೆ ಡೀಲ್ ಒಪ್ಪಿಕೊಂಡಿದ್ದಾರೆ. ಹೀಗಾಗಿ ಸದ್ಯ ಮಹಿಳೆ ವಿರುದ್ದ ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದಿದೆ.