ಬೀಜಿಂಗ್‌(ನ.02): ಭಾರತದ ಹಲವು ಪ್ರದೇಶಗಳನ್ನು ತನ್ನದು ಎಂದು ಹೇಳುತ್ತ ತಗಾದೆ ತೆಗೆಯುತ್ತಿರುವ ಚೀನಾ, ಈಗ ಅರುಣಾಚಲ ಪ್ರದೇಶ ಗಡಿ ಸನಿಹದ ಟಿಬೆಟ್‌ ವ್ಯಾಪ್ತಿಯಲ್ಲಿ ಮತ್ತೊಂದು ರೈಲು ಮಾರ್ಗ ನಿರ್ಮಾಣ ಆರಂಭಿಸಲಿದೆ. ಇದು ವ್ಯೂಹಾತ್ಮಕವಾಗಿ ಮಹತ್ವದ ಪ್ರದೇಶವಾಗಿದ್ದು, ಇಲ್ಲಿ ಚೀನಾ ಈ ಹೊಸ ಕಾಮಗಾರಿ ಆರಂಭಿಸುತ್ತಿರುವುದು ಗಮನಾರ್ಹವಾಗಿದೆ.

ಸಿಚುವಾನ್‌-ಟಿಬೆಟ್‌ ವಿಭಾಗದ ನೈಋುತ್ಯ ಸಿಚುವಾನ್‌ ಪ್ರಾಂತ್ಯದ ಯಾನ್‌ ಹಾಗೂ ಟಿಬೆಟ್‌ನ ಲಿಂಝಿ ವಿಭಾಗದಲ್ಲಿ ಮಾರ್ಗ ನಿರ್ಮಾಣ ಆಗಲಿದೆ. ಈ ನಿಮಿತ್ತ, ಇಲ್ಲಿ ನಿರ್ಮಾಣ ಆಗಲಿರುವ ಎರಡು ಸುರಂಗಗಳು ಹಾಗೂ ಒಂದು ಸೇತುವೆಯ ಟೆಂಡರ್‌ ಫಲಿತಾಂಶವನ್ನು ಚೀನಾ ರೈಲ್ವೆ ಪ್ರಕಟಿಸಿದೆ. ತ್ವರಿತವಾಗಿ ಕೆಲಸ ಮುಗಿಸಲು ಉದ್ದೇಶಿಸಿದೆ.

ಭಾರತದ ಜತೆ ಚೀನಾ ಸಂಘರ್ಷ ಆರಂಭಿಸಿದರೆ ಅಥವಾ ಆ ಪರಿಸ್ಥಿತಿ ಸೃಷ್ಟಿಯಾದರೆ ಚೀನಾದ ಮುಖ್ಯ ಭಾಗಗಳಿಂದ ಅರುಣಾಚಲ ಸಮೀಪ ಇರುವ ಲಿಂಝಿ ನಗರಕ್ಕೆ ಈ ರೈಲು ಮಾರ್ಗದ ಮೂಲಕ ಸಲೀಸಾಗಿ ಯುದ್ಧ ಸಲಕರಣೆಗಳನ್ನು ಸಾಗಿಸಲು ಚೀನಾಗೆ ಸಾಧ್ಯವಾಗುತ್ತದೆ ಎಂದು ಚೀನಾ ತ್ಸಿಂಗ್ಹುವಾ ವಿವಿಯ ರಕ್ಷಣಾ ತಜ್ಞ ಕ್ವಿಯಾನ್‌ ಫೆಂಗ್‌ ಹೇಳಿದ್ದಾರೆ.

ರೈಲು ಮಾರ್ಗದ ಮಹತ್ವವೇನು?:

ಅರುಣಾಚಲ ಪ್ರದೇಶಕ್ಕೆ ಟಿಬೆಟ್‌ನ ಲಿಂಝಿ ಅತಿ ಸನಿಹವಾಗಿದೆ. ಇಲ್ಲಿ ವಿಮಾನ ನಿಲ್ದಾಣ ಕೂಡ ಇದೆ. ಅರುಣಾಚಲವನ್ನು ದಕ್ಷಿಣ ಟಿಬೆಟ್‌ನ ಅಂಗ ಎಂದು ಚೀನಾ ಹೇಳಿಕೊಳ್ಳುತ್ತದೆ. ಅಲ್ಲದೆ, ಗಡಿಯಲ್ಲಿ ಸ್ಥಿರತೆ ಕಾಯ್ದುಕೊಳ್ಳುವಿಕೆ ದೃಷ್ಟಿಯಿಂದ ರೈಲು ಮಾರ್ಗವು ಮಹತ್ವದ್ದಾಗಿದೆ. ನಿರ್ಮಾಣ ಪೂರ್ಣಗೊಂಡರೆ ಚೀನಾದ ಮುಖ್ಯ ಪ್ರದೇಶಗಳಿಗೆ ಟಿಬೆಟ್‌ ನೇರ ಸಂಪರ್ಕ ಪಡೆದುಕೊಳ್ಳಲಿದೆ. ಯುದ್ಧ ಸಲಕರಣೆಗಳನ್ನು ಸಾಗಿಸಲು ನೆರವಾಗಲಿದೆ. ಈ ಹಿನ್ನೆಲೆಯಲ್ಲಿ ಈ ರೈಲು ಮಾರ್ಗ ನಿರ್ಮಾಣ ಮಹತ್ವ ಪಡೆದಿದೆ.

ಲಿಂಝಿ ಹಾಗೂ ಯಾನ್‌ ನಡುವಿನ ಅಂತರ 1,011 ಕಿ.ಮೀ. ಇವುಗಳ ನಡುವೆ 26 ರೈಲು ನಿಲ್ದಾಣಗಳಿರಲಿವೆ. ರೈಲುಗಳು ಗಂಟೆಗೆ 120 ಕಿ.ಮೀ.ನಿಂದ 200 ಕಿ.ಮೀ. ವೇಗದಲ್ಲಿ ಸಂಚರಿಸಲಿವೆ. ಟಿಬೆಟ್‌ ಅಭಿವೃದ್ಧಿಗೂ ಇದರಿಂದ ನೆರವಾಗಲಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಟಿಬೆಟ್‌ನಲ್ಲಿ ಹಮ್ಮಿಕೊಳುತ್ತಿರುವ ಎರಡನೇ ಯೋಜನೆಯಾಗಿದೆ.