ಬೀಜಿಂಗ್‌[ಫೆ.16]: ಸಹಸ್ರಾರು ಮಂದಿಯನ್ನು ಈಗಾಗಲೇ ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್‌ನಿಂದ ತತ್ತರಿಸಿರುವ ಚೀನಾದಲ್ಲಿ ಇದೀಗ ಕರೆನ್ಸಿ ನೋಟುಗಳ ಮುಖಾಂತರವೂ ವೈರಾಣು ಹಬ್ಬುವ ಭೀತಿ ಎದುರಾಗಿದೆ. ಹೀಗಾಗಿ ವೈರಾಣುಪೀಡಿತ ಪ್ರದೇಶಗಳಲ್ಲಿ ಚಲಾವಣೆಯಲ್ಲಿರುವ ನೋಟುಗಳನ್ನು ಸಂಗ್ರಹಿಸಿ, ಸೋಂಕುಮುಕ್ತಗೊಳಿಸಿ ಮತ್ತೆ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುತ್ತಿದೆ.

ಆಸ್ಪತ್ರೆ ಹಾಗೂ ಮಾರುಕಟ್ಟೆಗಳಿಂದ ಬರುವ ನೋಟುಗಳು ಹಾಗೂ ನಾಣ್ಯಗಳನ್ನು ಸರ್ಕಾರಿ ಸಂಸ್ಥೆಗಳಲ್ಲಿ ದಾಸ್ತಾನು ಮಾಡಲಾಗುತ್ತದೆ. ಬಳಿಕ ಇದನ್ನು ‘ಯುವಿ’ ಲೈಟ್‌ ಹರಿಸಿ ಸೋಂಕು ಮುಕ್ತಗೊಳಿಸಲಾಗುತ್ತದೆ. ನಂತರ ಮತ್ತೆ ಚಲಾವಣೆಗೆ ಬಿಡುಗಡೆ ಮಾಡಲಾಗುತ್ತದೆ ಎಂದು ಪೀಪಲ್ಸ್‌ ಬ್ಯಾಂಕ್‌ ಆಫ್‌ ಚೀನಾದ ಉಪ ಗವರ್ನರ್‌ ಫ್ಯಾನ್‌ ಯೀಫಿ ಅವರು ತಿಳಿಸಿದ್ದಾರೆ.

ಸೋಂಕುಪೀಡಿತ ಪ್ರದೇಶಗಳಲ್ಲಿ ವೈರಾಣು ಮತ್ತಷ್ಟುವ್ಯಾಪಿಸದಂತೆ ತಡೆಯಲು ಸರ್ಕಾರಿ ಸಂಸ್ಥೆಗಳು ಹಾಗೂ ಉದ್ಯಮಗಳ ನಡುವೆ ಬ್ಯಾಂಕ್‌ ನೋಟುಗಳ ವಿನಿಮಯವನ್ನು ನಿಲ್ಲಿಸಲಾಗಿದೆ. ಜತೆಗೆ ನೋಟುಗಳ ಬದಲಾಗಿ ಆನ್‌ಲೈನ್‌ ವ್ಯವಹಾರ ನಡೆಸುವಂತೆ ಸೂಚಿಸಲಾಗುತ್ತಿದೆ ಎಂದಿದ್ದಾರೆ.

ಮತ್ತೆ 143 ಸಾವು: ಮೃತರ ಸಂಖ್ಯೆ 1523ಕ್ಕೆ ಹೆಚ್ಚಳ

ಬೀಜಿಂಗ್‌: ಚೀನಾದಲ್ಲಿ ಜನ ಸಾಮಾನ್ಯರನ್ನು ನಿರ್ದಾಕ್ಷಿಣ್ಯವಾಗಿ ಬಲಿ ಪಡೆಯುತ್ತಿರುವ ಕೊರೋನಾ ವೈರಸ್‌ಗೆ ಶುಕ್ರವಾರ ಮತ್ತೆ 143ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಈ ಹಿನ್ನೆಲೆ ಈ ಮಾರಿಗೆ ಬಲಿಯಾದವರ ಸಂಖ್ಯೆ 1523ಕ್ಕೆ ಏರಿದೆ. ಅಲ್ಲದೆ, ಹೊಸದಾಗಿ ಮತ್ತೆ 2641 ಮಂದಿಯಲ್ಲಿ ಕೊರೋನಾ ಕಾಣಿಸಿಕೊಂಡಿದ್ದು, ಚೀನಾದಲ್ಲಿ ಈ ಸೋಂಕಿಗೆ ತುತ್ತಾದ ಸಂತ್ರಸ್ತರ ಸಂಖ್ಯೆ 66,492 ದಾಟಿದೆ ಎಂದು ಆರೋಗ್ಯಾಧಿಕಾರಿಗಳು ತಿಳಿಸಿದ್ದಾರೆ. ಇದೇ ವೇಳೆ ವಿಶ್ವಾದ್ಯಂತ ಕೊರೋನಾ ಪೀಡಿತರ ಸಂಖ್ಯೆ 67 ಸಾವಿರ ದಾಟಿದೆ.

 

ಏತನ್ಮಧ್ಯೆ, ಕೊರೋನಾದಿಂದ ನರಳುತ್ತಿದ್ದ 1373 ಮಂದಿಯ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದಿದ್ದು, ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಚೀನಾ ಸರ್ಕಾರಿ ಸ್ವಾಮ್ಯದ ಕ್ಸಿನ್ಹಾ ನ್ಯೂಸ್‌ ಸಂಸ್ಥೆ ವರದಿ ಮಾಡಿದೆ. ಏತನ್ಮಧ್ಯೆ, ಫ್ರಾನ್ಸ್‌ ಪ್ರವಾಸ ಕೈಗೊಂಡಿದ್ದ ಚೀನಾ ಮೂಲದ ವ್ಯಕ್ತಿಯೋರ್ವ ಕೊರೋನಾ ವೈರಸ್‌ನಿಂದ ಸಾವನ್ನಪ್ಪಿದ್ದಾನೆ ಎಂದು ಫ್ರಾನ್ಸ್‌ ತಿಳಿಸಿದೆ.