China New Law Influencers Must Show Degree for Content ಚೀನಾವು ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳಿಗಾಗಿ ಹೊಸ ನಿಯಮವನ್ನು ಜಾರಿಗೆ ತಂದಿದ್ದು, ವೈದ್ಯಕೀಯ, ಕಾನೂನು, ಹಣಕಾಸಿನಂತಹ ಸೂಕ್ಷ್m ವಿಷಯಗಳ ಬಗ್ಗೆ ಪೋಸ್ಟ್ ಮಾಡಲು ತಮ್ಮ ಅರ್ಹತೆಗಳನ್ನು ಸಾಬೀತುಪಡಿಸುವುದನ್ನು ಕಡ್ಡಾಯಗೊಳಿಸಿದೆ. 

ನವದೆಹಲಿ (ಅ.28): ಆನ್‌ಲೈನ್ ಕಂಟೆಂಟ್‌ ಕ್ರಿಯೇಷನ್‌ ಮರುರೂಪಿಸಬಹುದಾದ ಒಂದು ಕ್ರಮದಲ್ಲಿ, ಚೀನಾ ಹೊಸ ನಿಯಮವನ್ನು ಪರಿಚಯಿಸಿದೆ, ಸೋಶಿಯಲ್‌ ಮೀಡಿಯಾ ಇನ್‌ಫ್ಲುಯೆನ್ಸರ್‌ಗಳು ವೈದ್ಯಕೀಯ, ಕಾನೂನು, ಶಿಕ್ಷಣ ಅಥವಾ ಹಣಕಾಸು ಮುಂತಾದ "ಸೂಕ್ಷ್ಮ" ವಿಷಯಗಳನ್ನು ಆನ್‌ಲೈನ್‌ನಲ್ಲಿ ಕಂಟೆಂಟ್‌ ಆಗಿ ರೂಪಿಸುವ ಮೊದಲು ತಮ್ಮ ಅರ್ಹತೆಗಳನ್ನು ಸಾಬೀತು ಮಾಡಬೇಕು ಎಂದು ಹೇಳಿದೆ. ಅಕ್ಟೋಬರ್ 25 ರಿಂದ ಜಾರಿಗೆ ಬಂದ ಹೊಸ ಇನ್‌ಫ್ಲುಯೆನ್ಸರ್‌ ಕಾನೂನು, ಕಂಟೆಂಟ್‌ ಕ್ರಿಯೇಟರ್‌ಗಳು ನಿಯಂತ್ರಿತ ವಿಷಯಗಳ ಬಗ್ಗೆ ಪೋಸ್ಟ್ ಮಾಡಲು ಬಯಸಿದರೆ ಪದವಿ, ವೃತ್ತಿಪರ ಪರವಾನಗಿ ಅಥವಾ ಪ್ರಮಾಣೀಕರಣದಂತಹ ತಮ್ಮ ಪರಿಣತಿಯ ಪುರಾವೆಗಳನ್ನು ತೋರಿಸಬೇಕು ಎಂದು ಹೇಳಿದೆ. ಈ ಬಗ್ಗೆ ಮೊರಾಕ್ಕೊ ನ್ಯೂಸ್ ವರದಿ ಮಾಡಿದೆ.

ಸೈಬರ್‌ಸ್ಪೇಸ್ ಅಡ್ಮಿನಿಸ್ಟ್ರೇಷನ್ ಆಫ್ ಚೀನಾ (CAC) ಪ್ರಕಾರ, ಈ ನಿಯಂತ್ರಣವು ತಪ್ಪು ಮಾಹಿತಿಯನ್ನು ನಿಗ್ರಹಿಸುವುದು ಮತ್ತು ಸಾರ್ವಜನಿಕರನ್ನು ಸುಳ್ಳು ಅಥವಾ ದಾರಿತಪ್ಪಿಸುವ ಸಲಹೆಗಳಿಂದ ರಕ್ಷಿಸುವ ಗುರಿಯನ್ನು ಹೊಂದಿದೆ. ಡೌಯಿನ್ (ಚೀನಾದಲ್ಲಿ ಟಿಕ್‌ಟಾಕ್‌ನ ಆವೃತ್ತಿ), ಬಿಲಿಬಿಲಿ ಮತ್ತು ವೀಬೊದಂತಹ ವೇದಿಕೆಗಳು ಈಗ ಕಂಟೆಂಟ್‌ ಕ್ರಿಯೇಟರ್‌ಗಳ ಅರ್ಹತೆಯನ್ನು ಪರಿಶೀಲಿಸುವ ಮತ್ತು ಪೋಸ್ಟ್‌ಗಳು ಸರಿಯಾದ ಉಲ್ಲೇಖಗಳು ಮತ್ತು ಹಕ್ಕು ನಿರಾಕರಣೆಗಳನ್ನು ಒಳಗೊಂಡಿವೆ ಎಂದು ಖಚಿತಪಡಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿರುತ್ತವೆ.

ಉದಾಹರಣೆಗೆ ತಾವು ಮಾಡಿರವ ವಿಡಿಯೋದ ಮೂಲವೇನು ಅದರ ಮಾಹಿತಿಯನ್ನು ಅಧ್ಯಯನದಿಂದ ಪಡೆದಿದ್ದೇ ಅಥವಾ ಅದು ಎಐ ಜನರೇಟ್‌ ಮಾಡಿರುವ ವಿಡಿಯೋ ಕಂಟೆಂಟ್‌ಗಳೇ ಎನ್ನುವುದನ್ನು ಸ್ಪಷ್ಟವಾಗಿ ತಿಳಿಸಬೇಕಿರುತ್ತದೆ. ಅದರೊಂದಿಗೆ ಶೈಕ್ಷಣಿಕ ವಿಷಯ ಎನ್ನುವ ವೇಷ ಧರಿಸಿ ರಹಸ್ಯ ಪ್ರಚಾರಗಳನ್ನು ತಡೆಗಟ್ಟಲು CAC ವೈದ್ಯಕೀಯ ಉತ್ಪನ್ನಗಳು, ಪೂರಕಗಳು ಮತ್ತು ಆರೋಗ್ಯ ಆಹಾರಗಳ ಜಾಹೀರಾತನ್ನು ಸಹ ನಿಷೇಧಿಸಿದೆ.

ಸೋಶಿಯಲ್‌ ಮೀಡಿಯಾ ಮೇಲೆ ನಿಯಂತ್ರಣ

ಅಧಿಕಾರಿಗಳು ಹೊಸ ನಿಯಮವು ವಿಶ್ವಾಸವನ್ನು ಬೆಳೆಸುವುದು ಮತ್ತು ನಿಖರತೆಯನ್ನು ಖಚಿತಪಡಿಸಿಕೊಳ್ಳುವುದರ ಬಗ್ಗೆ ಎಂದು ಹೇಳಿದರೆ, ಅನೇಕ ತಜ್ಞರು ಇದನ್ನು ಡಿಜಿಟಲ್ ಸೆನ್ಸಾರ್‌ಶಿಪ್‌ನ ಹೊಸ ರೂಪವೆಂದು ನೋಡುತ್ತಾರೆ. ಕೆಲವು ವಿಷಯಗಳನ್ನು ಯಾರು ಚರ್ಚಿಸಬಹುದು ಎಂಬುದನ್ನು ಸೀಮಿತಗೊಳಿಸುವ ಮೂಲಕ, ಸರ್ಕಾರವು ಸ್ವತಂತ್ರ ಧ್ವನಿಗಳನ್ನು ಮೌನಗೊಳಿಸಬಹುದು ಮತ್ತು ಸಾರ್ವಜನಿಕ ಚರ್ಚೆಯ ವ್ಯಾಪ್ತಿಯನ್ನು ಸಂಕುಚಿತಗೊಳಿಸಬಹುದು ಎಂದು ಎಚ್ಚರಿಸಿದ್ದಾರೆ.

"ಎಕ್ಸ್ಪರ್ಟೈಸ್‌"ಯ ವ್ಯಾಖ್ಯಾನವು ಅಸ್ಪಷ್ಟ ಮತ್ತು ವ್ಯಕ್ತಿನಿಷ್ಠವಾಗಿಯೇ ಉಳಿದಿದೆ ಎಂದು ತಜ್ಞರು ಗಮನಸೆಳೆದಿದ್ದಾರೆ, ಇದು ಆನ್‌ಲೈನ್‌ನಲ್ಲಿ ಯಾರು ಮಾತನಾಡಬೇಕೆಂದು ನಿರ್ಧರಿಸಲು ಅಧಿಕಾರಿಗಳಿಗೆ ಹೆಚ್ಚಿನ ಅಧಿಕಾರವನ್ನು ನೀಡುತ್ತದೆ.

ವಿಶ್ವಾಸಾರ್ಹತೆಯ ಜಾಗತಿಕ ಪ್ರಶ್ನೆ

ಇನ್‌ಫ್ಲುಯೆನ್ದಸರ್‌-ಆಧಾರಿತ ಮಾಹಿತಿಯು ಸಾಂಪ್ರದಾಯಿಕ ತಜ್ಞರಿಗೆ ಪ್ರಬಲ ಪರ್ಯಾಯವಾಗಿ ಮಾರ್ಪಟ್ಟಿರುವ ಸಮಯದಲ್ಲಿ ಈ ಚರ್ಚೆ ಬಂದಿದೆ. ಆರೋಗ್ಯ ಸಲಹೆಯಿಂದ ಹಿಡಿದು ಆರ್ಥಿಕ ತರಬೇತಿಯವರೆಗೆ, ಔಪಚಾರಿಕ ಅರ್ಹತೆಗಳಿಲ್ಲದಿದ್ದರೂ ಸಹ, ಕಂಟೆಂಟ್‌ ಕ್ರಿಯೇಟರ್‌ಗಳು ಸಾಮಾನ್ಯವಾಗಿ ಸಂಬಂಧಿತ ಮತ್ತು ವಿಶ್ವಾಸಾರ್ಹರಾಗಿ ಕಾಣಿಸಿಕೊಳ್ಳುವ ಮೂಲಕ ಫಾಲೋವರ್‌ಗಳನ್ನು ಗಳಿಸುತ್ತಾರೆ.

ಆದರೂ, ಇದರ ದುಷ್ಪರಿಣಾಮ ಸ್ಪಷ್ಟವಾಗಿದೆ: ಸಂಕೀರ್ಣ ವಿಷಯಗಳನ್ನು ಅತಿಯಾಗಿ ಸರಳೀಕರಿಸಿದಾಗ ಅಥವಾ ಆನ್‌ಲೈನ್‌ನಲ್ಲಿ ತಪ್ಪಾಗಿ ಪ್ರತಿನಿಧಿಸಿದಾಗ ತಪ್ಪು ಮಾಹಿತಿಯು ಬೇಗನೆ ಹರಡುತ್ತದೆ.

ಕೆಲವು ಚೀನೀ ಯೂಸರ್‌ಗಳು ಕಾನೂನನ್ನು ಸ್ವಾಗತಿಸಿದ್ದು, ಇದು ಆನ್‌ಲೈನ್ ಚರ್ಚೆಗಳಿಗೆ ಹೆಚ್ಚಿನ ವಿಶ್ವಾಸಾರ್ಹತೆಯನ್ನು ತರಬಹುದು ಎಂದು ಹೇಳಿದ್ದಾರೆ. "ನಿಜವಾದ ಪರಿಣತಿ ಹೊಂದಿರುವ ಜನರು ಸಂಭಾಷಣೆಯನ್ನು ಮುನ್ನಡೆಸುವ ಸಮಯ ಇದು" ಎಂದು ವೀಬೊ ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ.ಆದರೆ ಇನ್ನು ಕೆಲವರು ಇದು ಸೃಜನಶೀಲತೆಯನ್ನು ಹತ್ತಿಕ್ಕಬಹುದು ಮತ್ತು ಮುಕ್ತ ಚರ್ಚೆಯನ್ನು ಮಿತಿಗೊಳಿಸಬಹುದು, ಸಾಮಾಜಿಕ ಮಾಧ್ಯಮವನ್ನು ಮುಕ್ತ ವಿನಿಮಯದ ಸ್ಥಳದಿಂದ ರಾಜ್ಯ-ನಿಯಂತ್ರಿತ ಪರಿಣತಿಯ ಸ್ಥಳವಾಗಿ ಪರಿವರ್ತಿಸಬಹುದು ಎಂದು ಭಯಪಡುತ್ತಾರೆ.