ಬೀಜಿಂಗ್‌(ಸೆ.28): ಇನ್ನೂ ಸಾಬೀತಾಗದ ಹಾಗೂ ಟ್ರಯಲ್‌ ಹಂತದಲ್ಲೇ ಇರುವ ಕೊರೋನಾ ವೈರಸ್‌ ಲಸಿಕೆಗಳನ್ನೇ ಚೀನಾ ಸರ್ಕಾರ ಲಕ್ಷಾಂತರ ಜನರಿಗೆ ನೀಡುತ್ತಿರುವ ಆಘಾತಕಾರಿ ಸಂಗತಿ ಬೆಳಕಿಗೆ ಬಂದಿದೆ. ಈಗಾಗಲೇ ಸರ್ಕಾರಿ ಸ್ವಾಮ್ಯದ ಕಂಪನಿಗಳಲ್ಲಿ ಕೆಲಸ ಮಾಡುತ್ತಿರುವವರು, ಸರ್ಕಾರಿ ಅಧಿಕಾರಿಗಳು ಹಾಗೂ ಲಸಿಕೆ ಕಂಪನಿಗಳ ಉದ್ಯೋಗಿಗಳಿಗೆ ಈ ಲಸಿಕೆಗಳನ್ನು ನೀಡಲಾಗಿದೆ. ಶೀಘ್ರದಲ್ಲೇ ಸೂಪರ್‌ ಮಾರ್ಕೆಟ್‌ಗಳಲ್ಲಿ ಕೆಲಸ ಮಾಡುತ್ತಿರುವವರು, ಶಿಕ್ಷಕರು ಹಾಗೂ ವಿದೇಶಗಳಿಗೆ ಪ್ರಯಾಣಿಸುವವರಿಗೆ ಈ ಲಸಿಕೆ ನೀಡಲು ನಿರ್ಧರಿಸಲಾಗಿದೆ.

ಕೊರೋನಾ ವೈರಸ್‌ಗೆ ಜಗತ್ತಿನಲ್ಲಿ ಇನ್ನೂ ಯಾವುದೇ ಲಸಿಕೆ ಎಲ್ಲಾ ಪ್ರಯೋಗಗಳನ್ನೂ ಮುಗಿಸಿ ಅಂತಿಮವಾಗಿಲ್ಲ. ಚೀನಾದಲ್ಲೂ ಹಲವಾರು ಲಸಿಕೆಗಳು 3ನೇ ಹಂತದ ಪ್ರಯೋಗದಲ್ಲಿವೆ. ಆ ಲಸಿಕೆಗಳನ್ನೇ ಲಕ್ಷಾಂತರ ಜನರಿಗೆ ಚೀನಾ ಸರ್ಕಾರ ಕೊಡಿಸುತ್ತಿದೆ. ಇದನ್ನು ತೆಗೆದುಕೊಳ್ಳುವವರಿಂದ ಗೌಪ್ಯತಾ ಒಪ್ಪಂದಕ್ಕೆ ಸಹಿ ಹಾಕಿಸಿಕೊಳ್ಳುತ್ತಿದ್ದು, ಅವರು ಲಸಿಕೆಯ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡುವಂತಿಲ್ಲ. ಅಗತ್ಯ ಸೇವೆಗಳಲ್ಲಿರುವ ಜನರು ಹೆದರುತ್ತಲೇ ಲಸಿಕೆ ಪಡೆಯುತ್ತಿದ್ದಾರೆ ಎಂದು ಹೇಳಲಾಗಿದೆ.

ಪ್ರಯೋಗದ ಹಂತದಲ್ಲಿರುವ ಲಸಿಕೆಯೊಂದನ್ನು ಟ್ರಯಲ್‌ ಪ್ರಕ್ರಿಯೆಯ ಹೊರಗಿರುವ ಜನರಿಗೆ ಸಾಮೂಹಿಕವಾಗಿ ನೀಡಿರುವ ಜಗತ್ತಿನ ಮೊದಲ ಅಪಾಯಕಾರಿ ವಿದ್ಯಮಾನ ಇದಾಗಿದೆ. ಇನ್ನೂ ಲಕ್ಷಾಂತರ ಜನರಿಗೆ ಲಸಿಕೆ ನೀಡಲು ಅಧಿಕಾರಿಗಳು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ಇದಕ್ಕೆ ಜಗತ್ತಿನ ಇತರ ಕಡೆಯಿಂದ ಆಕ್ಷೇಪ ವ್ಯಕ್ತವಾಗಿದೆ. ಚೀನಾದ ಸರ್ಕಾರಿ ಸ್ವಾಮ್ಯದ ಸಿನೋಫಾಮ್‌ರ್‍ ಎಂಬ ಕಂಪನಿ ತಾನು ಸಾವಿರಾರು ಜನರಿಗೆ ಲಸಿಕೆ ನೀಡಿರುವುದಾಗಿ ಹೇಳಿದೆ. ಬೀಜಿಂಗ್‌ ಮೂಲದ ಸಿನೋವ್ಯಾಕ್‌ ಎಂಬ ಕಂಪನಿ 10,000ಕ್ಕೂ ಹೆಚ್ಚು ಜನರಿಗೆ ಲಸಿಕೆ ನೀಡಿರುವುದಾಗಿ ಹೇಳಿದೆ.

‘ಪ್ರಯೋಗ ಪೂರ್ಣಗೊಳ್ಳದ ಲಸಿಕೆಯನ್ನು ಜನರಿಗೆ ನೀಡಿದರೆ ಅದರಿಂದ ಅವರ ಆರೋಗ್ಯಕ್ಕೆ ಗಂಭೀರ ಹಾನಿಯಾಗುವ ಸಾಧ್ಯತೆಯಿರುತ್ತದೆ. ಸಾಮಾನ್ಯವಾಗಿ ಲಸಿಕೆಯ ಟ್ರಯಲ್‌ನಲ್ಲಿ ಪಾಲ್ಗೊಂಡು ಲಸಿಕೆ ಪಡೆದವರನ್ನು ಹತ್ತಿರದಿಂದ ಗಮನಿಸುತ್ತಿರಲಾಗುತ್ತದೆ. ಆದರೆ, ಲಸಿಕೆ ನೀಡಿ ಅವರ ಮೇಲೆ ನಿಗಾ ಇರಿಸದಿದ್ದರೆ ಮುಂದೆ ಅವರಿಗೆ ಏನಾದರೂ ಸಮಸ್ಯೆಯಾದರೆ ಹೇಗೆ ಚಿಕಿತ್ಸೆ ನೀಡಲಾಗುತ್ತದೆ’ ಎಂದು ತಜ್ಞರು ಪ್ರಶ್ನಿಸಿದ್ದಾರೆ.