ಬೀಜಿಂಗ್‌[ಫೆ.14]: ಈಗಾಗಲೇ ಸಹಸ್ರಾರು ಮಂದಿಯನ್ನು ಬಲಿ ಪಡೆದಿರುವ ಮಾರಕ ಕೊರೋನಾ ವೈರಸ್‌ ಚೀನಾದಲ್ಲಿ ಮತ್ತಷ್ಟುವ್ಯಾಪಕವಾಗಿ ಹಬ್ಬುತ್ತಿದ್ದು, ಈ ವೈರಾಣು ಬಾಧೆಯಿಂದ ಒಂದೇ ದಿನ ಬರೋಬ್ಬರಿ 254 ಚೀನಿಯರು ಇಹಲೋಕ ತ್ಯಜಿಸಿದ್ದಾರೆ. ಇದರಿಂದಾಗಿ ಈವರೆಗೆ ಮಾರಕ ಸೋಂಕಿನಿಂದ ಮೃತಪಟ್ಟವರ ಸಂಖ್ಯೆ ಚೀನಾದಲ್ಲಿ 1367ಕ್ಕೇರಿಕೆಯಾಗಿದೆ.

ಮತ್ತೊಂದೆಡೆ, ಕೊರೋನಾ ವೈರಸ್‌ ಸೋಂಕಿತರ ಸಂಖ್ಯೆಯಲ್ಲೂ ಹೆಚ್ಚಳವಾಗಿದೆ. ಒಂದೇ ದಿನ 15 ಸಾವಿರ ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಒಟ್ಟು ಸೋಂಕಿತರ ಸಂಖ್ಯೆ 59804ಕ್ಕೆ ಹೆಚ್ಚಳವಾಗಿದೆ.

ಕ್ಸಿ ಜಿನ್‌ಪಿಂಗ್‌ ಪಟ್ಟಕ್ಕೂ ಕೊರೋನಾದಿಂದ ಕುತ್ತು?

ಸಾಮಾನ್ಯವಾಗಿ ಪ್ರತಿನಿತ್ಯ ಸರಾಸರಿ 80 ಜನರಂತೆ ಈವರೆಗೆ ಕೊರೋನಾಪೀಡಿತರು ಚೀನಾದಲ್ಲಿ ಮರಣ ಹೊಂದುತ್ತಿದ್ದರು. ಆದರೆ ಇದೇ ಮೊದಲ ಬಾರಿಗೆ 254 ಮಂದಿ ಒಂದೇ ದಿನ ಕಣ್ಣು ಮುಚ್ಚಿದ್ದಾರೆ. ಈ ಎಲ್ಲ ಸಾವುಗಳು ಕೊರೋನಾ ವೈರಸ್‌ ಮೊದಲ ಬಾರಿಗೆ ಪತ್ತೆಯಾದ ಚೀನಾದ ಹುಬೆ ಪ್ರಾಂತ್ಯದಲ್ಲೇ ವರದಿಯಾಗಿವೆ.

ಪಕ್ಷದ ಮುಖ್ಯಸ್ಥ ವಜಾ:

ಏನೆಲ್ಲಾ ಕ್ರಮ ಕೈಗೊಂಡರೂ ಕೊರೋನಾ ಹತ್ತಿಕ್ಕಲು ಚೀನಾ ವಿಫಲವಾಗಿರುವಾಗಲೇ, ಆಡಳಿತಾರೂಢ ಕಮ್ಯುನಿಸ್ಟ್‌ ಪಕ್ಷ ಹುಬೆ ಪ್ರಾಂತ್ಯದ ತನ್ನ ಮುಖ್ಯಸ್ಥ ಜಿಯಾಂಗ್‌ ಚಾವೋಲಿಯಾಂಗ್‌ ಅವರನ್ನು ಕಿತ್ತೊಗೆದಿದೆ. ಜಿಯಾಂಗ್‌ ಅವರಿಂದ ತೆರವಾಗಿರುವ ಹುಬೆ ಕಾರ್ಯದರ್ಶಿ ಸ್ಥಾನಕ್ಕೆ ಶಾಂಘೈ ಮೇಯರ್‌ ಯಿಂಗ್‌ ಯಾಂಗ್‌ ಅವರನ್ನು ನೇಮಕ ಮಾಡಿದೆ. ಮತ್ತೊಂದೆಡೆ ಕರ್ತವ್ಯ ನಿರ್ಲಕ್ಷ್ಯ ತೋರಿದ ಆಪಾದನೆ ಮೇರೆಗೆ ರೆಡ್‌ಕ್ರಾಸ್‌ ಸಂಸ್ಥೆ ವುಹಾನ್‌ನಲ್ಲಿರುವ ತನ್ನ ಅಧಿಕಾರಿಯನ್ನು ವಜಾಗೊಳಿಸಿದೆ.

ಕೊರೋನಾ ವೈರಸ್‌ನಿಂದ ನಿಂತಿದ್ದ ಮದುವೆಗೆ ಕೊನೆಗೂ ಡೇಟ್ ಫಿಕ್ಸ್