* ಸಂಪೂರ್ಣ ಚೀನಾ ತೆಕ್ಕೆಗೆ ಜಾರಿದ ಹಾಂಕಾಂಗ್‌* ಸ್ವಾಯತ್ತ ದೇಶ ಇನ್ನೂ ರಾಜಕೀಯವಾಗಿಯೂ ಸಂಪೂರ್ಣ ಚೀನಾ ಬತ್ತಳಿಕೆಗೆ* ಸಂಸತ್‌ ಸದಸ್ಯರ ಸಂಖ್ಯೆ 70ರಿಂದ 90ಕ್ಕೆ ಏರಿಕೆ. ಇದರಲ್ಲಿ ಚೀನಾ ಸಮಿತಿ ಆಯ್ಕೆ ಮಾಡುವ ಸದಸ್ಯರ ಪಾಲು 40

ಬೀಜಿಂಗ್‌(ಮೇ.29): 1997ರಲ್ಲಿ ಬ್ರಿಟನ್‌ನಿಂದ ಹಾಂಕಾಂಗ್‌ ಅನ್ನು ವಶಕ್ಕೆ ಪಡೆದ ಬಳಿಕ ಹಂತಹಂತವಾಗಿ ಅದನ್ನು ಪ್ರಜಾಪ್ರಭುತ್ವದ ಆಡಳಿತದಿಂದ ಮುಕ್ತಗೊಳಿಸುವ ಒಂದೊಂದೇ ನಿರ್ಣಯಗಳನ್ನು ತೆಗೆದುಕೊಳ್ಳುತ್ತಾ ಬಂದಿದ್ದ ಚೀನಾ, ಇದೀಗ ಸ್ವಾಯತ್ತ ಆಡಳಿತ ಹೊಂದಿದ್ದ ಹಾಂಕಾಂಗ್‌ ಅನ್ನು ಇದೀಗ ರಾಜಕೀಯವಾಗಿಯೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಹೀಗಾಗಿ ಒಂದರ್ಥದಲ್ಲಿ ಹಾಂಕಾಂಗ್‌ ಸಂಪೂರ್ಣ ಚೀನಾ ವಶಕ್ಕೆ ಬಂದಂತೆ ಆಗಿದೆ.

20 ವರ್ಷಗಳ ಹಿಂದೆಯೇ ತನ್ನ ಹಿಡಿತಕ್ಕೆ ಸಿಕ್ಕರೂ, ಹಾಂಕಾಂಗ್‌ ಮೇಲೆ ಪೂರ್ಣವಾಗಿ ಹಿಡಿತ ಸಾಧಿಸುವುದು ಚೀನಾಕ್ಕೆ ಸಾಧ್ಯವಾಗಿರಲಿಲ್ಲ. ಸ್ವಾಯತ್ತ ದೇಶವಾಗಿಯೇ ಗುರುತಿಸಿಕೊಂಡಿದ್ದ ಹಾಂಕಾಂಗ್‌ನ ಪ್ರಜಾಪ್ರಭುತ್ವ ಸರ್ಕಾರ, ಚೀನಾದ ಕಮ್ಯುನಿಸ್ಟಆಡಳಿತಕ್ಕೆ ಮಗ್ಗುಲ ಮುಳ್ಳಾಗಿತ್ತು. ಈ ವ್ಯವಸ್ಥೆ ಅಳಿಸಿ ಹಾಕಲು ಕೆಲ ವರ್ಷಗಳಿಂದ ಚೀನಾ ನಡೆಸಿದ ಯತ್ನಕ್ಕೆ 2019ರಲ್ಲಿ ಹಾಂಕಾಂಗ್‌ನಲ್ಲಿ ಭಾರೀ ವಿರೋಧ ವ್ಯಕ್ತವಾಗಿ ಭಾರೀ ಪ್ರತಿಭಟನೆ ನಡೆಸಿತ್ತು. ಬಳಿಕ ಹಾಂಕಾಂಗ್‌ ಸಂಸತ್ತಿನಲ್ಲಿದ್ದ ಬಹುತೇಕ ಪ್ರಜಾಪ್ರಭುತ್ವ ಪರ ಸಂಸದರು ರಾಜೀನಾಮೆ ಸಲ್ಲಿಸಿದ್ದರು.

ಇದೇ ಸಂದರ್ಭ ಬಳಸಿಕೊಂಡ ಚೀನಾ, ತಾನು ಆಯ್ಕೆ ಮಾಡಿದವರೇ ಹಾಂಕಾಂಗ್‌ ಸಂಸತ್‌ಗೆ ಹೆಚ್ಚಿನ ಪ್ರಮಾಣದಲ್ಲಿ ಆಯ್ಕೆಯಾಗುವಂಥ ಕಾನೂನು ಸೇರಿದಂತೆ ಇಡೀ ರಾಜಕೀಯ ವ್ಯವಸ್ಥೆಯನ್ನೇ ಅಮೂಲಾಗ್ರವಾಗಿ ಬದಲಿಸುವ ಅಂಶಗಳನ್ನು ಒಳಗೊಂಡ ಮಸೂದೆಯೊಂದನ್ನು ಸಿದ್ಧಪಡಿಸಿ ಸಂಸತ್‌ನಲ್ಲಿ ಮಂಡಿಸಿತ್ತು. ಅದನ್ನು ಗುರುವಾರ ಸಂಸತ್‌ 40-2 ಮತಗಳ ಅಂತರದಿಂದ ಅನುಮೋದಿಸಿದೆ.

ಪರಿಣಾಮ ಏನು?

- ಸಂಸತ್‌ ಸದಸ್ಯರ ಸಂಖ್ಯೆ 70ರಿಂದ 90ಕ್ಕೆ ಏರಿಕೆ. ಇದರಲ್ಲಿ ಚೀನಾ ಸಮಿತಿ ಆಯ್ಕೆ ಮಾಡುವ ಸದಸ್ಯರ ಪಾಲು 40

- ನೇರವಾಗಿ ಸಂಸತ್‌ಗೆ ಆಯ್ಕೆಯಾಗುವ ಸದಸ್ಯರ ಸಂಖ್ಯೆ 35ರಿಂದ 20ಕ್ಕೆ ಇಳಿಕೆ. ಜನರ ಮತದ ಹಕ್ಕು ಮೊಟಕು

- ನೇರವಾಗಿ ಆಯ್ಕೆಯಾಗುವವರು ಕೂಡಾ ಚೀನಾ ರಚಿತ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು