Asianet Suvarna News Asianet Suvarna News

ಅಮೆರಿಕಾದಲ್ಲಿ ಹೊಸಪರ್ವ, ಟ್ರಂಪ್‌ ಮಾಡಿದ ಭಾನಗಡಿ ಬೈಡೆನ್‌ ಸರಿ ಮಾಡ್ತಾರಾ?

ಅಮೆರಿಕಾ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿರುವ ಜೋ ಬೈಡೆನ್ ಹಾದಿ ಸುಗಮವಾಗಿಯೇನೂ ಇಲ್ಲ. 4 ವರ್ಷಗಳ ಅವಧಿಯಲ್ಲಿ ಟ್ರಂಪ್ ಮಾಡಿದ ಅವಾಂತರವನ್ನು ಸರಿ ಮಾಡುವ ಸವಾಲು ಬೈಡೆನ್ ಮುಂದಿದೆ. ಅದನ್ನು ಸಮರ್ಥವಾಗಿ ನಿಭಾಯಿಸ್ತಾರಾ ನೋಡಬೇಕಿದೆ. 

Challenges facing president Biden  hls
Author
Bengaluru, First Published Jan 22, 2021, 9:40 AM IST

ಬೆಂಗಳೂರು (ಜ. 22): ದ್ವಿತೀಯ ಮಹಾಯುದ್ಧದ ನಂತರ ವಿಶ್ವಕ್ಕೆ ಒಂದು ಮಟ್ಟದ ರಾಜಕೀಯ ನಾಯಕತ್ವ ನೀಡಿದ್ದು ಅಮೆರಿಕ. ತನ್ನ ವ್ಯಾಪಾರದ ಲಾಭ ಮತ್ತು ಸ್ವಾರ್ಥ ಹಿತಾಸಕ್ತಿಗೋಸ್ಕರವಾದರೂ ಸರಿ, ಅಮೆರಿಕದ ಆರ್ಥಿಕ ಮತ್ತು ಸಮರ ಸಾಮರ್ಥ್ಯದ ಕಾರಣದಿಂದ ವಿಶ್ವದಲ್ಲಿ ಒಂದು ಸಮತೋಲನ ಇತ್ತು. 91ರ ವರೆಗೆ ಸೋವಿಯತ್‌ ರಷ್ಯಾ ಜೊತೆಗಿನ ಶೀತಲಯುದ್ಧದ ಕಾಲದಲ್ಲೂ ವಿಶ್ವದ ಯಾವುದೇ ಭಾಗದಲ್ಲಿ ಅಮೆರಿಕವನ್ನು ದೂರ ಇಟ್ಟು ಯಾವುದೇ ನಿರ್ಣಯ ಮತ್ತು ಬೆಳವಣಿಗೆ ಸಾಧ್ಯ ಇರಲಿಲ್ಲ.

ಆದರೆ ಅಮೆರಿಕದ ವಿಶ್ವ ನಾಯಕನ ಸ್ಥಾನಕ್ಕೆ ಕುಂದು ಬಂದಿದ್ದು ಅಪ್ರಬುದ್ಧ, ಗಂಭೀರತೆ ಇರದ ಡೊನಾಲ್ಡ್‌ ಟ್ರಂಪ್‌ ಅವರ ಆಳ್ವಿಕೆಯ 4 ವರ್ಷಗಳಲ್ಲಿ. ಶತಮಾನಗಳಿಂದಲೂ ಬುದ್ಧಿಜೀವಿ, ಪಳಗಿದ, ವಿಶ್ವ ರಾಜಕೀಯ ಗೊತ್ತಿರುವ ರಾಜನೇತಾರರು ಅಮೆರಿಕ ಅಧ್ಯಕ್ಷರಾಗಿ ಆಯ್ಕೆ ಆಗುತ್ತಿದ್ದರು. ಆದರೆ ಪಕ್ಕಾ ಉದ್ಯಮಿ ಡೊನಾಲ್ಡ್‌ ಟ್ರಂಪ್‌ ಮಾತ್ರ ಅದಕ್ಕೆ ಅಪವಾದ. ಈಗ ಆಯ್ಕೆಯಾಗಿರುವ ಜೋ ಬೈಡೆನ್‌ ಪುನರಪಿ ಆ ವಿಶ್ವ ನಾಯಕನ ಸ್ಥಾನಕ್ಕೆ ಒಯ್ಯುತ್ತಾರಾ ಎನ್ನುವ ಕುತೂಹಲ ಇಡೀ ಜಗತ್ತಿಗೆ ಇದೆ.

ಹೇಗಿರಲಿದೆ ಮೋದಿ - ಬೈಡೆನ್ ಬಾಂಧವ್ಯ..?

ಭಾರತ, ಚೀನಾ ಮತ್ತು ಅಮೆರಿಕ

ಪಂಡಿತ್‌ ನೆಹರು ಅವರಿಗೆ ಚೀನಾ ವಿಷಯದಲ್ಲಿ ಸಹಾಯ ಮಾಡಲು ಅಮೆರಿಕ ಕೂಡಲೇ ಒಪ್ಪಿರಲಿಲ್ಲ. ಧಾನ್ಯ ಕೊಡಿ ಎಂದು ನ್ಯೂಯಾರ್ಕ್ಗೆ ಹೋಗಿದ್ದ ಇಂದಿರಾ ಗಾಂಧಿಯನ್ನು ರೊನಾಲ್ಡ್‌ ರೇಗನ್‌ ಅಪಹಾಸ್ಯ ಮಾಡಿ ಕಳುಹಿಸಿದ್ದರು. ಪಾಕ್‌ ಜೊತೆಗೆ ಭಾರತ ಯುದ್ಧ ಮಾಡುವಾಗ ಅಮೆರಿಕವು ಎಫ್‌16 ಯುದ್ಧವಿಮಾನಗಳನ್ನು ಶತ್ರುವಿಗೆ ಕೊಟ್ಟು ನಮಗೆ ಕೈಕೊಟ್ಟಿತ್ತು. ಆದರೆ 91ರಲ್ಲಿ ಮುಕ್ತ ಮಾರುಕಟ್ಟೆಒಪ್ಪಿಕೊಂಡ ನಂತರ ಅಮೆರಿಕ ನಮಗೆ ಹತ್ತಿರವಾಗಿದೆ. ಬುಷ್‌, ಒಬಾಮಾರಿಂದ ಟ್ರಂಪ್‌ವರೆಗೆ ಎಲ್ಲರಿಗೂ ಭಾರತದ ಜೊತೆಗಿನ ಮೈತ್ರಿ ಬೇಕಾಗಿದೆ.

ನಮ್ಮಿಂದ ದೊರೆಯುವ ವ್ಯಾಪಾರಿ ಲಾಭ ಒಂದು ಕಾರಣ ಹೌದು. ಆದರೆ ನಾವು ಚೀನಾದ ಪಕ್ಕದಲ್ಲಿರುವುದು ಜೊತೆಗೆ ಚೀನಾದಷ್ಟೇ ಅಗಾಧ ಗಾತ್ರ ಹೊಂದಿರುವುದು ಕೂಡ ಇನ್ನೊಂದು ಪ್ರಮುಖ ಕಾರಣ. ಭಾರತ-ಚೀನಾ ನಡುವೆ ಸಂಘರ್ಷ ನಡೆದರೆ ಅಮೆರಿಕಕ್ಕೇನೂ ಯುದ್ಧದಲ್ಲಿ ಧುಮುಕುವ ಅಪೇಕ್ಷೆ ಇಲ್ಲ. ಆದರೆ ಚೀನಾದ ವಿರುದ್ಧ ಅಮೆರಿಕದ ಇರುವಿಕೆಯೇ ನಮಗೊಂದು ಪರೋಕ್ಷ ಬಲ ಇದ್ದ ಹಾಗೆ. ಟ್ರಂಪ್‌ ಅಂತೂ ಚೀನಾ ವಿಷಯದಲ್ಲಿ ಪೂರ್ತಿ ಭಾರತದ ಜೊತೆಗಿದ್ದರು. ಈಗ ಬೈಡೆನ್‌ ಎಷ್ಟರ ಮಟ್ಟಿಗೆ ನಮ್ಮ ಜೊತೆ ಇರುತ್ತಾರೆ ಎನ್ನುವುದು ಮುಖ್ಯ ಕುತೂಹಲ.

ತೆಲಂಗಾಣ ಮೂಲದ ವಿನಯ್ ರೆಡ್ಡಿ ಬರೆದ ಬೈಡೆನ್ ಭಾಷಣಕ್ಕೆ ವ್ಯಾಪಕ ಪ್ರಶಂಸೆ

ಚೀನಾ ಜೊತೆಗೆ ಹೇಗೆ?

70ರ ದಶಕದಲ್ಲಿ ಅಮೆರಿಕದ ವಿದೇಶಾಂಗ ಸಚಿವ ಹೆನ್ರಿ ಕಿಸಿಂಜರ್‌ ದಿಲ್ಲಿಗೆ ಬಂದಾಗ ರಹಸ್ಯವಾಗಿ ಬೀಜಿಂಗ್‌ಗೆ ಹೋಗಿ ಮಾವೋರನ್ನು ಭೇಟಿಯಾಗಿ ಬಂದ ನಂತರ ಅಮೆರಿಕ-ಚೀನಾ ನಡುವೆ ಶುರುವಾದ ವ್ಯಾಪಾರ ಸಂಬಂಧಗಳು ಇವತ್ತು ಚೀನಾ ತಯಾರಿಕೆ ನಿಲ್ಲಿಸಿ, ಪೂರೈಕೆ ಬಂದ್‌ ಮಾಡಿದರೆ ಅಮೆರಿಕದ ಆರ್ಥಿಕತೆ ಗೋವಿಂದ... ಎನ್ನುವ ಸ್ಥಿತಿಗೆ ಹೋಗಿ ನಿಂತಿದೆ. ಹೀಗಾಗಿ ಸಹಜವಾಗಿ ಚೀನಾದ ಪ್ರಭಾವ ಏಷ್ಯನ್‌ ಮತ್ತು ಆಫ್ರಿಕಾದ ರಾಷ್ಟ್ರಗಳಲ್ಲಿ ಜಾಸ್ತಿ ಆಗಿದೆ.

ಹಿಂದೊಮ್ಮೆ ಕಮ್ಯುನಿಸ್ಟ್‌ ಸೋವಿಯತ್‌ ರಷ್ಯಾ ನೀಡಿದ ತೊಂದರೆಯ ಅರಿವಿರುವ ಅಮೆರಿಕಕ್ಕೆ ಮಗದೊಮ್ಮೆ ಕಮ್ಯುನಿಸ್ಟ್‌ ಚೀನಾ ವಿಶ್ವ ರಾಜಕೀಯ ಪ್ರಭುತ್ವ ಸಾಧಿಸುವುದು ಬೇಕಿಲ್ಲ. ಆದರೆ ಚೀನಾದ ಆರ್ಥಿಕ ಉಚ್ಛ್ರಾಯವನ್ನು ತಡೆಯುವ ಶಕ್ತಿಯೂ ಈಗ ಅಮೆರಿಕಕ್ಕೆ ಇಲ್ಲ. ಹೀಗಾಗಿ ಬುಷ್‌, ಒಬಾಮಾ, ಟ್ರಂಪ್‌ ಇರಲಿ ಅಥವಾ ಬೈಡೆನ್‌ ಬರಲಿ ಅಮೆರಿಕದ ಚೀನಾ ನೀತಿ ಬದಲಾಗುವ ಸಾಧ್ಯತೆ ಕಡಿಮೆ. ಭಾರತ, ಜಪಾನ್‌ ಮತ್ತು ಆಸ್ಪ್ರೇಲಿಯಾಗಳನ್ನು ಬಳಸಿಕೊಂಡು ಚೀನಾವನ್ನು ರಾಜಕೀಯವಾಗಿ ಕಟ್ಟಿಹಾಕುವುದೊಂದೇ ಬೈಡೆನ್‌ ಮತ್ತು ಕಮಲಾ ಹ್ಯಾರಿಸ್‌ ಅವರಿಗೆ ಇರುವ ದಾರಿ.

- ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ

ಇಂಡಿಯಾ ಗೇಟ್, ದೆಹಲಿಯಿಂದ ಕಂಡ ರಾಜಕರಣ 

Follow Us:
Download App:
  • android
  • ios