ಬ್ರಿಟನ್‌ನಲ್ಲಿ ತಗ್ಗಿದ ಸೋಂಕು: ಲಾಕ್‌ಡೌನ್‌ ನಿರ್ಬಂಧ ಸಡಿಲಿಕೆ| ಪಾರ್ಕ್, ಗಾರ್ಡನ್‌ನಲ್ಲಿ ಸುತ್ತಾಟಕ್ಕೆ ಅವಕಾಶ| ಹೊರಾಂಗಣ ಕ್ರೀಡೆಗೂ ಅನುಮತಿ

ಲಂಡನ್(ಮಾ.30): ಬ್ರಿಟನ್ನಿನಲ್ಲಿ ಕೊರೋನಾ ವೈರಸ್‌ ಅಬ್ಬರ ಅಲ್ಪ ಪ್ರಮಾಣದಲ್ಲಿ ತಗ್ಗುತ್ತಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ನಿರ್ಬಂಧಗಳನ್ನು ಸಡಿಲಿಸಲು ಅಲ್ಲಿನ ಸರ್ಕಾರ ತೀರ್ಮಾನಿಸಿದೆ.

ಸೋಮವಾರದಿಂದ ಗರಿಷ್ಠ 6 ಮಂದಿ ಅಥವಾ 2 ಕುಟುಂಬದವರು ಪಾರ್ಕ್ ಅಥವಾ ಗಾರ್ಡನ್‌ಗಳಲ್ಲಿ ಒಟ್ಟಿಗೆ ಸೇರಬಹುದು ಎಂದು ತಿಳಿಸಿದೆ. ಹಾಗೆಯೇ ಫುಟ್ಬಾಲ್‌, ಹೊರಾಂಗಣ ಈಜಿನಂತಹ ಹೊರಾಂಗಣ ಕ್ರೀಡೆಗೂ ಅವಕಾಶ ಕಲ್ಪಿಸಿದೆ.

ಇದೇ ವೇಳೆ ಸ್ಕಾಟ್ಲೆಂಡ್‌, ವೇಲ್ಸ್‌ ಹಾಗೂ ನಾರ್ದರ್ನ್‌ ಐಲೆಂಡ್‌ ಮತ್ತಿತರ ಕಡೆಗಳಲ್ಲಿ ಕಳೆದ ಡಿಸೆಂಬರ್‌ನಿಂದ ವಿಧಿಸಿದ್ದ ಪ್ರವಾಸಿ ನಿರ್ಬಂಧವನ್ನು ತೆಗೆದುಹಾಕಲಾಗಿದೆ.

ಆದರೆ ಪಬ್‌, ರೆಸ್ಟೋರೆಂಟ್‌, ಜಿಮ್‌, ಸಿನಿಮಾ, ಮ್ಯೂಸಿಯಂ ಮತ್ತು ಕ್ರೀಡಾಂಗಳಲ್ಲಿ ನಿರ್ಬಂಧ ಮುಂದುವರೆಯಲಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ. ಹಾಗೆಯೇ ಉದ್ಯೋಗಿಗಳು ವರ್ಕ್ ಫ್ರಂ ಹೋಂ ಆಯ್ಕೆಯನ್ನು ಮುಂದುವರೆಸುವಂತೆ ಸರ್ಕಾರ ಜನರಲ್ಲಿ ಮನವಿ ಮಾಡಿದೆ.

ಬ್ರಿಟನ್ನಿನಲ್ಲಿ ಈವರೆಗೆ 43 ಲಕ್ಷ ಮಂದಿಗೆ ಕೋವಿಡ್‌ ದೃಢಪಟ್ಟಿದ್ದು, 1.26 ಲಕ್ಷ ಮಂದಿ ಸಾವಿಗೀಡಾಗಿದ್ದಾರೆ. ಇತ್ತೀಚೆಗೆ ಬ್ರಿಟನ್‌ನಲ್ಲಿ ಸೃಷ್ಟಿಯಾಗಿದ್ದ ಕೊರೋನಾದ ಹೊಸ ರೂಪಾಂತರಿ ತಳಿ ಬ್ರಿಟನ್‌ ಅಷ್ಟೇ ಅಲ್ಲ ವಿಶ್ವದಲ್ಲಿ ತಲ್ಲಣ ಮೂಡಿಸಿತ್ತು.

ಫ್ರಾನ್ಸ್‌ನಲ್ಲಿ ಗಂಭೀರ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳ

ಫ್ರಾನ್ಸ್‌ನಲ್ಲಿ ಕೊರೋನಾ ವೈರಸ್‌ ಅಬ್ಬರ ತೀವ್ರವಾಗಿದ್ದು, ಗಂಭೀರ ಸ್ಥಿತಿಯ ರೋಗಿಗಳ ಪ್ರಮಾಣ ಆತಂಕಕಾರಿಯಾಗಿ ಏರಿಕೆಯಾಗುತ್ತಿದೆ.

ಕಳೆದ ವರ್ಷ ಕೋವಿಡ್‌ ಬಿಕ್ಕಟ್ಟು ತೀವ್ರವಾಗಿದ್ದ ಸಂದರ್ಭದಲ್ಲಿ ಗಂಭೀರ ಸ್ಥಿತಿಯ ರೋಗಿಗಳ ಚಿಕಿತ್ಸೆಗೆ ತೀವ್ರ ನಿಗಾ ಘಟಕ (ಐಸಿಯು) ಸೌಲಭ್ಯ ಒದಗಿಸುವುದೇ ದುಸ್ತರವಾಗಿತ್ತು. ಸದ್ಯ ಫ್ರಾನ್ಸ್‌ನಲ್ಲಿ ಮತ್ತೆ ಅಂಥದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ಇಂಥ ರೋಗಿಗಳ ಸಂಖ್ಯೆ ಭಾನುವಾರ 4872ಕ್ಕೆ ಏರಿಕೆಯಾಗಿದೆ. ಕಳೆದ ವರ್ಷ ನವಂಬರ್‌ 16ರಂದು ಈ ರೀತಿಯ 4,919 ಪ್ರಕರಣಗಳು ದಾಖಲಾಗಿದ್ದವು. ವೈರಸ್‌ ಮೊದಲ ಬಾರಿಗೆ ಆತಂಕ ಸೃಷ್ಟಿಸಿದಾಗ 7000ಕ್ಕೂ ಹೆಚ್ಚಿನ ಐಸಿಯುಗಳಲ್ಲಿ ರೋಗಿಗಳಿಗೆ ಫ್ರಾನ್ಸ್‌ ಚಿಕಿತ್ಸೆ ನೀಡಿತ್ತು.

ಫ್ರಾನ್ಸ್‌ನಲ್ಲಿ ಈವರೆಗೆ ಒಟ್ಟು 45 ಲಕ್ಷ ಮಂದಿಗೆ ಸೋಂಕು ತಗುಲಿದ್ದು, 94000ಕ್ಕೂ ಹೆಚ್ಚು ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.