* ಕೆನಡಾ ಕೋವಿಡ್ ಪ್ರತಿಭಟನೆಯಲ್ಲಿ ಖಲಿಸ್ತಾನುಗಳು ಭಾಗಿ!* ಖಲಿಸ್ತಾನಿಗಳನ್ನು ಬೆಂಬಲಿಸಿದ್ದ ಕೆನಡಾ ಪ್ರಧಾನಿಗೆ ತಿರುಗುಬಾಣ
ನವದೆಹಲಿ(ಫೆ.03): ಕೆನಡಾದಲ್ಲಿ ಕೋವಿಡ್ ನಿಯಂತ್ರಣ ಸಲುವಾಗಿ ಹೇರಲಾಗಿರುವ ನಿರ್ಬಂಧಗಳನ್ನು ವಿರೋಧಿಸಿ ಅಲ್ಲಿನ ನಾಗರಿಕರು, ಟ್ರಕ್ ಚಾಲಕರು ನಡೆಸುತ್ತಿರುವ ಪ್ರತಿಭಟನೆಯಲ್ಲಿ ಖಲಿಸ್ತಾನಿ ಪರ ಹೋರಾಟಗಾರರೂ ಕಾಣಿಸಿಕೊಂಡಿದ್ದರು ಎಂಬುದು ಬೆಳಕಿಗೆ ಬಂದಿದೆ. ಈ ಮೂಲಕ ಕೃಷಿ ಕಾಯ್ದೆ ಹೋರಾಟ ಸಂದರ್ಭದಲ್ಲಿ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿ ಖಲಿಸ್ತಾನಿ ಪರ ಹೋರಾಟಗಾರರಿಗೆ ಬೆಂಬಲ ನೀಡಿದ್ದ ಟ್ರುಡ್ಯು ಅವರಿಗೆ ತೀವ್ರ ಮುಜುಗರ ಉಂಟಾಗಿದೆ.
ನಾಗರಿಕರ ಪ್ರತಿಭಟನೆ ವ್ಯಾಪಕವಾಗುತ್ತಿದ್ದಂತೆಯೇ ಪ್ರಧಾನಿ ಜಸ್ಟಿನ್ ಟ್ರುಡ್ಯು ಮತ್ತು ಕುಟುಂಬವು ರಾಜಧಾನಿ ಒಟ್ಟಾವಾದಿಂದ ಅಜ್ಞಾತ ಸ್ಥಳಕ್ಕೆ ವಾಸ್ತವ್ಯ ಬದಲಿಸಿಕೊಂಡಿದೆ ವರದಿಯಾಗಿದೆ. ಆದರೆ ಕಳೆದ ವರ್ಷ ಭಾರತದಲ್ಲಿ ಕೃಷಿ ಕಾಯ್ದೆ ವಿರೋಧಿಸಿ ಬೃಹತ್ ಟ್ರ್ಯಾಕ್ಟರ್ ರಾರಯಲಿ ನಡೆಸಿದ ಸಂದರ್ಭದಲ್ಲಿ ಟ್ರುಡ್ಯು ಬೆಂಬಲ ವ್ಯಕ್ತಪಡಿಸಿದ್ದರು. ಶಾಂತಿಯುತವಾಗಿ ಪ್ರತಿಭಟಿಸುವ ಹಕ್ಕಿದೆ ಎನ್ನುವ ಮೂಲಕ ಭಾರತದ ಆಂತರಿಕ ವಿಚಾರದಲ್ಲಿ ಹಸ್ತಕ್ಷೇಪ ಮಾಡಿದ್ದರು.
ಈಗ ಟ್ರುಡ್ಯು ಒಂದು ಸಣ್ಣ ಪ್ರತಿಭಟನೆಯನ್ನೂ ಎದುರಿಸಲು ಸಾಧ್ಯವಾಗದೆ ಹೆದರಿ ಪರಾರಿಯಾಗಿದ್ದಾರೆ. ಅಲ್ಲದೆ ಖಲಿಸ್ತಾನಿ ಪರ ಕೆನಡಾ ಸಂಸದ ಜಗ್ಮೀಟ್ ಸಿಂಗ್ ಧಲಿವಾಲ್ ಬಾಮೈದ ಜೋಧವೀರ್ ಸಿಂಗ್ ಕೆನಡಾ ಸರ್ಕಾರ ವಿರೋಧಿ ಪ್ರತಿಭಟನೆಗೆ 13,000 ಡಾಲರ್ (9.72 ಲಕ್ಷ) ನೀಡುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಟ್ಯುಡ್ರ್ಯು ಕರ್ಮ ಫಲ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಅನೇಕರು ಟೀಕಿಸಿದ್ದಾರೆ.
