ಮುಂಬೈ(ಜ.28): ಎಚ್‌-1 ಬಿ ವೀಸಾ ಅಡಿಯಲ್ಲಿ ಕೆಲಸ ನಿರ್ವಹಿಸುತ್ತಿರುವ ಉದ್ಯೋಗಿಯ ಪತ್ನಿ ಅಥವಾ ಪತಿ ಸಂಗಾತಿ ವೀಸಾ (ಎಚ್‌-4 ವೀಸಾ) ಅಡಿಯಲ್ಲಿ ಅಮೆರಿಕದಲ್ಲಿ ಕೆಲಸ ಮಾಡುವುದಕ್ಕೆ ವಿಧಿಸಿದ್ದ ನಿಷೇಧವನ್ನು ಅಧ್ಯಕ್ಷ ಬೈಡೆನ್‌ ಹಿಂಪಡೆದುಕೊಂಡಿದ್ದಾರೆ. ಇದರಿಂದ ಅಮೆರಿಕದಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 1 ಲಕ್ಷ ಭಾರತೀಯ ಸಂಗಾತಿಗಳು ಅದರಲ್ಲೂ ಬಹುತೇಕವಾಗಿ ಮಹಿಳೆಯರಿಗೆ ಅನುಕೂಲವಾಗಲಿದೆ.

ಈ ಸಂಬಂಧ ಟ್ವೀಟ್‌ ಮಾಡಿರುವ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌, ‘ಟ್ರಂಪ್‌ ಆಡಳಿತ ಕೈಗೊಂಡ ಕ್ರಮದಿಂದಾಗಿ ವೈದ್ಯೆ, ನರ್ಸ್‌, ವಿಜ್ಞಾನಿಗಳು, ಶಿಕ್ಷಣ ತಜ್ಞರು ಹಾಗೂ ಇನ್ನಿತರ ವೃತ್ತಿಯನ್ನು ಮಾಡುತ್ತಿರುವ ವಲಸೆ ಮಹಿಳೆಯರು ತಮ್ಮ ವೃತ್ತಿಯನ್ನು ತ್ಯಜಿಸಬೇಕಾಗಿ ಬಂದಿತ್ತು. ಸಂಗಾತಿ ವೀಸಾಕ್ಕೆ ವಿಧಿಸಿದ್ದ ನಿಷೇಧ ಕೊನೆಗೊಂಡಿದೆ’ ಎಂದು ಹೇಳಿದ್ದಾರೆ.

ಅಮೆರಿಕದಲ್ಲಿ 6 ಅಥವಾ ಅದಕ್ಕಿಂತ ಹೆಚ್ಚು ವರ್ಷ ಕಾರ್ಯನಿರ್ವಸುವುದಕ್ಕೆ ಅನುಮತಿ ಪಡೆದ ಉದ್ಯೋಗಿಗಳ ಪತ್ನಿ/ಪತಿ ಎಚ್‌-4 ವೀಸಾ (ಸಂಗಾತಿ ವೀಸಾ)ಕ್ಕೆ ಅರ್ಜಿ ಸಲ್ಲಿಸಿ ಉದ್ಯೋಗ ನಿರ್ವಹಿಸಲು ಒಬಾಮಾ ಸರ್ಕಾರ 2015ರಲ್ಲಿ ಅವಕಾಶ ನೀಡಿತ್ತು. ಆದರೆ, ಇದರಿಂದ ಅಮೆರಿಕನ್ನರ ಉದ್ಯೋಗಕ್ಕೆ ಕುತ್ತು ಬರುತ್ತಿದೆ ಎಂಬ ಕಾರಣಕ್ಕೆ ಟ್ರಂಪ್‌ ಆಡಳಿತ 2019ರಲ್ಲಿ ಸಂಗಾತಿ ವೀಸಾದ ಅಡಿ ವೃತ್ತಿ ಕೈಗೊಳ್ಳುವುದಕ್ಕೆ ನೀಡಿದ್ದ ಅನುಮತಿಯನ್ನು ಹಿಂಪಡೆದುಕೊಂಡಿತ್ತು.

ಹೀಗಾಗಿ ಪತಿಯ ಜೊತೆ ಅಮೆರಿಕಕ್ಕೆ ತೆರಳಿದ ಬಹುತೇಕ ಮಹಿಳೆಯರು ತಮಗೆ ಕೆಲಸ ನಿರ್ವಹಿಸುವ ಸಾಮರ್ಥ್ಯ ಇದ್ದರೂ, ತಮ್ಮ ವೃತ್ತಿಯನ್ನು ಅನಿವಾರ್ಯವಾಗಿ ತ್ಯಜಿಸಬೇಕಾಗಿತ್ತು. ಎಚ್‌-4 ವೀಸಾದ ಮೇಲಿನ ನಿಷೇಧಕ್ಕೆ ಸದ್ಯ 60 ದಿನಗಳ ಮಟ್ಟಿಗೆ ಬೈಡೆನ್‌ ಸರ್ಕಾರ ಹಿಂಪಡೆದುಕೊಂಡಿದ್ದು, ಈ ಆದೇಶವನ್ನು ಇನ್ನಷ್ಟುದಿನ ವಿಸ್ತರಣೆ ಆಗುವ ನಿರೀಕ್ಷೆ ಇದೆ.