* ನ್ಯೂಕ್ಲಿಕ್‌ ಆ್ಯಸಿಡ್‌ ಪರೀಕ್ಷೆಯಲ್ಲಿ 32 ಪ್ರಕರಣಗಳು ದೃಢ* ಬೀಜಿಂಗ್‌:ಎಲ್ಲಾ 2 ಕೋಟಿ ಜನಕ್ಕೆ ಕೋವಿಡ್‌ ಪರೀಕ್ಷೆಗೆ ಆದೇಶ* ಶಾಂಘೈನಲ್ಲಿ ಹೊಸದಾಗಿ 52 ಸಾವು

ಬೀಜಿಂಗ್‌(ಏ.27): ಸೋಮವಾರ ಬೀಜಿಂಗ್‌ ನಗರದ ಒಂದು ನಿರ್ದಿಷ್ಟಭಾಗದ 35 ಲಕ್ಷ ಜನರಿಗೆ ನಡೆಸಿದ ನ್ಯೂಕ್ಲಿಕ್‌ ಆ್ಯಸಿಡ್‌ ಪರೀಕ್ಷೆಯಲ್ಲಿ 32 ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿವೆ. ಈ ಹಿನ್ನೆಲೆಯಲ್ಲಿ ಬೀಜಿಂಗ್‌ ನಗರದ ಎಲ್ಲಾ 2 ಕೋಟಿ ಜನರೂ ಕೋವಿಡ್‌ ಪರೀಕ್ಷೆಗೆ ಹಾಜರಾಗುವಂತೆ ಸರ್ಕಾರ ಆದೇಶಿಸಿದೆ.

ಇದೇ ವೇಲೆ, ಚೀನಾದ ಪ್ರಮುಖ ವಾಣಿಜ್ಯ ನಗರ ಶಾಂಘೈನಲ್ಲಿ 52 ಸೋಂಕಿತರು ಸಾವಿಗೀಡಾಗಿದ್ದು, ಹೊಸದಾಗಿ ಸೋಂಕು ಹರಡಲು ಆರಂಭಿಸಿದ ನಂತರ 190 ಜನರು ಸಾವಿಗೀಡಾದಂತಾಗಿದೆ.

ಒಮಿಕ್ರೋನ್‌ ರೂಪಾಂತರಿಯೊಂದಿಗೆ ಹೋರಾಡುತ್ತಿರುವ ಬೀಜಿಂಗ್‌ ಮಂಗಳವಾರದಿಂದ ಎಲ್ಲಾ 11 ಜಿಲ್ಲೆಗಳಲ್ಲಿ ಕೋವಿಡ್‌ ಪರೀಕ್ಷೆ ನಡೆಸುವುದು ಕಡ್ಡಾಯ ಎಂದು ಸರ್ಕಾರ ಹೇಳಿದೆ.

ಸುಮಾರು 35 ಲಕ್ಷ ಜನರಿರುವ ಬೀಜಿಂಗ್‌ನ ಚಾವೋಯಂಗ್‌ ಜಿಲ್ಲೆಯಲ್ಲಿ ಸೋಮವಾರ ಮೂರು ಸುತ್ತುಗಳ ನ್ಯೂಕ್ಲಿಕ್‌ ಆ್ಯಸಿಡ್‌ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 32 ಪ್ರಕರಣಗಳು ಪತ್ತೆಯಾಗಿದ್ದವು. ಈ ಪರೀಕ್ಷೆಯನ್ನು ಮುಂದಿನ ಬುಧವಾರ ಮತ್ತು ಶುಕ್ರವಾರವೂ ನಡೆಸಲಾಗುತ್ತದೆ ಎಂದು ಆಡಳಿತ ಹೇಳಿದೆ.

ಶಾಂಘೈನಲ್ಲಿ ಸೋಮವಾರ 15,816 ಪ್ರಕರಣಗಳು ದಾಖಲಾಗಿವೆ. ಇದೇ ವೇಳೆ 52 ಸೋಂಕಿತರು ಸಾವಿಗೀಡಾಗಿದ್ದಾರೆ. ಅಲ್ಲದೇ ಜಿಯಾಂಕ್ಸಿಯಲಿ 91, ಜಿಲಿನ್‌ನಲ್ಲಿ 44 ಪ್ರಕರಣಗಳು ಹೊಸದಾಗಿ ದಾಖಲಾಗಿವೆ.

ಶಾಂಘೈಯಲ್ಲಿ 51 ಸಾವು:

ಚೀನಾದ ಪ್ರಮುಖ ವಾಣಿಜ್ಯ ನಗರಿ ಶಾಂಘೈಯಲ್ಲಿ ಸೋಂಕಿನ ಪ್ರಮಾಣದಲ್ಲಿ ಸತತ ಏರಿಕೆಯಾಗುತ್ತಿದೆ. ನುವಾರ ಒಂದೇ ದಿನ 51 ಸೋಂಕಿತರು ಸಾವನ್ನಪ್ಪಿದ್ದು, ಒಟ್ಟು ಸೋಂಕಿತರ ಸಾವಿನ ಪ್ರಮಾಣ 138ಕ್ಕೆ ಏರಿಕೆಯಾಗಿದೆ. ಶಾಂಘೈ ಹೊರತುಪಡಿಸಿ ಚೀನಾದ 17 ಪ್ರಾಂತ್ಯಗಳಲ್ಲಿ ಕೋವಿಡ್‌ ಸೋಂಕು ಸತತ ಏರಿಕೆಯಾಗುತ್ತಿದ್ದು, ದೇಶದಲ್ಲಿ 29,178 ಸಕ್ರಿಯ ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಶಾಂಘೈನಲ್ಲಿ ಸರ್ಕಾರದ ಕೋವಿಡ್‌ ನಿರ್ವಹಣೆಯ ವೈಫಲ್ಯದಿಂದ ಶಾಂಘೈಯಲ್ಲಿ ಜನರು ಆಹಾರ, ಔಷಧಿಯಿಲ್ಲದೇ ಪರದಾಟ ನಡೆಸುತ್ತಿದ್ದಾರೆ. ಜನರ ಸಂಚಾರ ತಡೆಯಲು ಲೋಹದ ಗೋಡೆಗಳನ್ನು ಹಾಕಲಾಗಿದೆ.

ಚೀನಾದ ಉನ್ನತ ನಾಯಕರು ನೆಲೆಸುವ ಚೌಯಾಂಗ್‌ ಜಿಲ್ಲೆಯಲ್ಲಿ ಭಾನುವಾರ 11 ಕೋವಿಡ್‌ ಪ್ರಕರಣಗಳು ವರದಿಯಾದ ಬೆನ್ನಲ್ಲೇ ಎಚ್ಚೆತ್ತುಕೊಂಡ ಸರ್ಕಾರವು ಸೋಮವಾರದಿಂದ ಎಲ್ಲ 35 ಲಕ್ಷ ನಾಗರಿಕರ ಮೂರು ಸುತ್ತಿನ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ನಡೆಸುವುದಾಗಿ ಘೋಷಿಸಿದೆ. ಚೌಯಾಂಗ್‌ ಜಿಲ್ಲೆಯಲ್ಲಿ ವಾಸವಾಗಿರುವ, ಹಾಗೂ ಜಿಲ್ಲೆಯಲ್ಲಿ ಕೆಲಸಕ್ಕಾಗಿ ಬಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮೂರು ಸುತ್ತಿನ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕಿದೆ. ಈ ಪರೀಕ್ಷೆಯನ್ನು ಸೋಮವಾರ, ಬುಧವಾರ ಹಾಗೂ ಶುಕ್ರವಾರ ಕೈಗೊಳ್ಳಲಾಗುವುದು ಎಂದು ಸರ್ಕಾರ ಸೂಚನೆ ಹೊರಡಿಸಿದೆ.