Asianet Suvarna News Asianet Suvarna News

Vaccine ಪಡೆಯದವರಿಗೆ ಲಾಕ್ಡೌನ್‌: ಕಂಡಕಂಡಲ್ಲಿ ದಂಡ, ವಿಶ್ವದಲ್ಲೇ ಅತ್ಯಂತ ಕಠಿಣ ಕ್ರಮ!

* ಲಸಿಕೆ ಉಪೇಕ್ಷಿಸಿರುವವರ ವಿರುದ್ಧ ವಿಶ್ವದಲ್ಲೇ ಅತಿ ಕಠಿಣ ಕ್ರಮ

* ಲಸಿಕೆ ಪಡೆಯದವರಿಗೆ ಆಸ್ಟ್ರಿಯಾ ಲಾಕ್ಡೌನ್‌: ಕಂಡಕಂಡಲ್ಲಿ ದಂಡ

Austria imposes lockdown for those not vaccinated as Europe becomes COVID 19 epicentre again
Author
Bangalore, First Published Nov 15, 2021, 7:07 AM IST
  • Facebook
  • Twitter
  • Whatsapp

ವಿಯೆನ್ನಾ(ನ.15): ಕೊರೋನಾ ಲಸಿಕೆ (Covid Vaccine) ಪಡೆಯಲು ಉಪೇಕ್ಷಿಸುವ ಜನರ ಮೇಲೆ ವಿಶ್ವದಲ್ಲೇ ಅತ್ಯಂತ ಕಠಿಣ ಎನ್ನಲಾದ ಕ್ರಮವೊಂದನ್ನು ಯುರೋಪ್‌ನ ಆಸ್ಟ್ರಿಯಾ (Austria, Europe) ದೇಶ ಕೈಗೊಂಡಿದೆ. ಕೋವಿಡ್‌ 5ನೇ ಅಲೆಯ (Covid 5th Wave) ಭೀತಿಯಲ್ಲಿರುವ ಆಸ್ಟ್ರಿಯಾ, ಲಸಿಕೆ ಪಡೆಯದವರಿಗೆ ಲಾಕ್‌ಡೌನ್‌ (Lockdown) ಘೋಷಣೆ ಮಾಡಿದೆ. ಅಲ್ಲದೆ ಕೋವಿಡ್‌ ಲಸಿಕೆ ಪಡೆಯದವರು ಸಾರ್ವಜನಿಕವಾಗಿ ಕಾಣಿಸಿಕೊಂಡರೆ ಸಿಕ್ಕಸಿಕ್ಕಲ್ಲಿ ದಂಡ ವಿಧಿಸಲು ಮುಂದಾಗಿದೆ.

ಭಾನುವಾರ ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ 10 ದಿನಗಳ ಕಾಲ ಲಸಿಕೆ ಪಡೆಯದವರಿಗಾಗಿ ಆಸ್ಟ್ರಿಯಾ ಲಾಕ್‌ಡೌನ್‌ (Lockdown In Austria) ಜಾರಿ ಮಾಡಿದೆ. ಲಸಿಕೆ ಪಡೆಯದವರು ಸಾರ್ವಜನಿಕ ಸ್ಥಳಗಳಲ್ಲಿ ಕಾಣಿಸಿಕೊಂಡರೆ 1450 ಯೂರೋ (1.23 ಲಕ್ಷ ರು.) ದಂಡ ವಿಧಿಸಲಾಗುತ್ತದೆ ಎಂದು ಸರ್ಕಾರ ಎಚ್ಚರಿಕೆ ನೀಡಿದೆ. ಆಸ್ಟ್ರಿಯಾದಲ್ಲಿ 89 ಲಕ್ಷ ಜನರಿದ್ದು, ಆ ಪೈಕಿ 20 ಲಕ್ಷ ಜನರು ಇನ್ನೂ ಲಸಿಕೆ ಪಡೆದಿಲ್ಲ. ಅವರೆಲ್ಲರ ಮೇಲೂ ಸರ್ಕಾರದ ಹೊಸ ಆದೇಶ ಪರಿಣಾಮ ಬೀರಲಿದೆ.

12 ವರ್ಷ ಮೇಲ್ಪಟ್ಟವರಿಗೆ ಅನ್ವಯ:

ಕೋವಿಡ್‌ ಲಸಿಕೆ (Covid vaccine) ಪಡೆಯದ 12 ವರ್ಷ ಮೇಲ್ಪಟ್ಟದೇಶದ ಯಾವುದೇ ವ್ಯಕ್ತಿಯು ಅನಿವಾರ್ಯವಲ್ಲದ ಕಾರಣಕ್ಕೆ ಯಾವುದೇ ಕಾರಣಕ್ಕೂ ಮನೆಯಿಂದ ಹೊರಹೋಗುವಂತಿಲ್ಲ. ಒಂದು ವೇಳೆ ಹೊರಬಂದರೆ, ಪೊಲೀಸರು ನಿಗಾ ವಹಿಸಲಿದ್ದಾರೆ. ಲಸಿಕೆ ಪಡೆಯದಿದ್ದರೆ ದಂಡ ವಿಧಿಸಲಿದ್ದಾರೆ. ವೈದ್ಯರ ಭೇಟಿ, ಲಸಿಕೆ (Vaccine) ಪಡೆಯಲು ಹಾಗೂ ಆಹಾರ ಧಾನ್ಯ ಖರೀದಿಗೆ ಮಾತ್ರ ಮನೆಯಿಂದ ಹೊರಬರಬಹುದು ಎಂದು ಸರ್ಕಾರ ಹೇಳಿದೆ. ಎರಡೂ ಡೋಸ್‌ ಪಡೆಯದವರಿಗೆ ಈಗಾಗಲೇ ಮನರಂಜನಾ ಸ್ಥಳ, ರೆಸ್ಟೋರೆಂಟ್‌, ಸಲೂನ್‌ ಸೇರಿದಂತೆ ಸಾರ್ವಜನಿಕ ಪ್ರದೇಶದಲ್ಲಿ ನಿಷೇಧ ಹೇರಲಾಗಿದೆ.

ಈ ಬಗ್ಗೆ ವಿಯೆನ್ನಾದಲ್ಲಿ ಮಾತನಾಡಿದ ಚಾನ್ಸಲರ್‌ ಅಲೆಕ್ಸಾಂಡರ್‌ ಶಾಲೆನ್‌ಬರ್ಗ್‌ ಅವರು, ‘ಕಳೆದ ಕೆಲ ದಿನಗಳಿಂದ ಕೋವಿಡ್‌ ಅಬ್ಬರ ತೀವ್ರವಾಗಿದ್ದು, ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ತುಳುಕುತ್ತಿವೆ. ರೋಗಿಗಳನ್ನು ಗುಣಪಡಿಸುವ ಕಾಯಕದಲ್ಲಿ ವೈದ್ಯ ಸಿಬ್ಬಂದಿ ಹೈರಾಣಾಗಿದ್ದಾರೆ. ಆದರೆ ಸೋಂಕು ಮತ್ತಷ್ಟುತೀವ್ರವಾದರೆ ಅದನ್ನು ನಿಭಾಯಿಸಲು ವೈದ್ಯರಿಂದ ಸಾಧ್ಯವಿಲ್ಲ. ದೇಶದ ಸರ್ಕಾರವಾಗಿ ಜನತೆಯನ್ನು ಕೋವಿಡ್‌ನಿಂದ ರಕ್ಷಿಸುವುದು ನಮ್ಮ ಜವಾಬ್ದಾರಿ. ಹೀಗಾಗಿ ಲಸಿಕೆ ಪಡೆಯದವರ ಮೇಲೆ ನಿರ್ಬಂಧ ಹೇರಲಾಗಿದೆ’ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.

ಲಾಕ್‌ಡೌನ್‌ ಏಕೆ?:

ಸಾರ್ವಜನಿಕರಿಗೆ ಲಸಿಕೆ ನೀಡಲು ಇಲ್ಲಿನ ಸರ್ಕಾರ ಉತ್ತೇಜನ ಕ್ರಮಗಳನ್ನು ಕೈಗೊಂಡಿದೆ. ಆದರೆ ಲಸಿಕೆ ಕುರಿತಾಗಿ ಸಂದೇಹ ಮತ್ತು ಅನುಮಾನ ಹೊಂದಿರುವ ಆಸ್ಟ್ರಿಯಾ ನಾಗರಿಕರು ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಆಸ್ಟ್ರಿಯಾದ ಒಟ್ಟಾರೆ ನಾಗರಿಕರ ಪೈಕಿ ಕೇವಲ ಶೇ.65ರಷ್ಟುಜನ ಮಾತ್ರವೇ ಈವರೆಗೆ ಎರಡೂ ಡೋಸ್‌ ಲಸಿಕೆ ಪಡೆದಿದ್ದಾರೆ. ಅಲ್ಲದೆ ಯೂರೋಪ್‌ ರಾಷ್ಟ್ರಗಳು ಕೋವಿಡ್‌ ಹರಡುವಿಕೆಯ ಮೂಲವಾಗಿದ್ದು, ಈ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಕ್ರಮ ಕೈಗೊಳ್ಳಲಾಗಿದೆ.

Follow Us:
Download App:
  • android
  • ios