Asianet Suvarna News Asianet Suvarna News

ಬಾಂಗ್ಲಾ 66 ಹಿಂದೂ​ಗಳ ಮನೆ ಧ್ವಂಸ, 20 ಮನೆಗೆ ಬೆಂಕಿ!

* ನೆರೆ ದೇಶ​ದಲ್ಲಿ ಇನ್ನೂ ನಿಲ್ಲದ ಹಿಂದೂಗಳ ಮೇಲಿನ ದಾಳಿ

* ಧರ್ಮವೊಂದಕ್ಕೆ ಹಿಂದು ಯುವಕನಿಂದ ಅಗೌರವ ವದಂತಿ

* ಈ ವದಂತಿಯಿಂದ ರೊಚ್ಚಿಗೆದ್ದ ಉದ್ರಿಕ್ತರಿಂದ ಈ ದುಷ್ಕೃತ್ಯ

* ಈ ಹಿಂಸಾಚಾರ ಕೃತ್ಯವೆಸಗಿದ 52 ಶಂಕಿತರು ಪೊಲೀಸರ ಬಲೆಗೆ

Arsonists vandalise 66 houses torch 20 homes of Hindus in Bangladesh pod
Author
Bangalore, First Published Oct 19, 2021, 8:03 AM IST

ಢಾಕಾ(ಅ.19): ದಸರಾ ಪ್ರಯುಕ್ತ ದುರ್ಗಾ ಪೂಜೆ(Durga Pooja) ಪೆಂಡಾಲ್‌ಗಳ ಮೇಲಿನ ದಾಳಿ ವಿರೋಧಿಸಿ ಬಾಂಗ್ಲಾದೇಶದಲ್ಲಿ(Bangladesh) ಹಿಂದುಗಳು(Hndus) ಪ್ರತಿಭಟನೆ ನಡೆಸುತ್ತಿರುವ ನಡುವೆಯೇ, ಉದ್ರಿಕ್ತರ ಗುಂಪೊಂದು ಹಿಂದುಗಳಿಗೆ ಸೇರಿದ 66 ಮನೆಗಳನ್ನು ಹೊಡೆದುರುಳಿಸಿದ್ದಾರೆ. ಅಲ್ಲದೆ 20ಕ್ಕೂ ಹೆಚ್ಚು ಮನೆಗಳಿಗೆ ಬೆಂಕಿ ಹಚ್ಚಿ ಹಿಂಸಾಚಾರ(Violence) ಮೆರೆದಿದ್ದಾರೆ.

ಘಟನೆ ಬಗ್ಗೆ ತ್ವರಿತ ಕಾರ್ಯಾಚರಣೆ ಕೈಗೊಂಡ ಪೊಲೀಸರು, 52 ಶಂಕಿತರನ್ನು ಬಂಧಿಸಿದ್ದಾರೆ. ಅಲ್ಲದೆ ಉಳಿದವರಿಗಾಗಿ ಬಲೆ ಬೀಸಲಾಗಿದೆ. ಈ ಘಟನೆಯಲ್ಲಿ ಸಾವು-ನೋವಿನ ವರದಿಯಾಗಿಲ್ಲ. ಆದರೆ ಮನೆಯಲ್ಲಿ ಇಡಲಾಗಿದ್ದ ಭಾರೀ ಪ್ರಮಾಣದ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ ಎಂದು ತಿಳಿದುಬಂದಿದೆ.

ರಂಗಪುರ ಜಿಲ್ಲೆಯ ಗ್ರಾಮವೊಂದರ ಮೀನುಗಾರ ಓಣಿಯಲ್ಲಿರುವ ಹಿಂದು ಯುವಕ, ಫೇಸ್‌ಬುಕ್‌ ಪೋಸ್ಟ್‌ನಲ್ಲಿ ಧರ್ಮದ ಬಗ್ಗೆ ಅಗೌರವ ತೋರಿದ್ದಾನೆ ಎಂಬ ಗಾಳಿಸುದ್ದಿ ಎದ್ದಿದೆ. ಈ ಸುದ್ದಿ ವ್ಯಾಪಕವಾಗುತ್ತಿದ್ದಂತೆ ಎಚ್ಚರಗೊಂಡ ಪೊಲೀಸರು, ಆ ಕುಟುಂಬಕ್ಕೆ ಭದ್ರತೆ ಒದಗಿಸಿದ್ದರು. ಆದರೆ ದುಷ್ಕರ್ಮಿಗಳು, ಆ ಮನೆಯೊಂದನ್ನು ಬಿಟ್ಟು ಉಳಿದ ಮನೆಗಳ ಮೇಲೆ ದಾಳಿ ನಡೆಸಿದರು. ಈ ವೇಳೆ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಈಗ ಗ್ರಾಮದಲ್ಲಿ ಉದ್ವಿಗ್ನ ಸ್ಥಿತಿಯಿಲ್ಲ. ಪೂರ್ತಿ ಶಾಂತವಾಗಿದೆ ಎಂದು ಪೊಲೀಸರು ತಿಳಿಸಿದರು.

ದಸರಾ ಪ್ರಯುಕ್ತ ಪೆಂಡಾಲ್‌ ಒಂದರಲ್ಲಿ ದುರ್ಗಾ ಪೂಜೆ ವೇಳೆ ದುರ್ಗಾ ಮಾತೆಯ ಕಾಲಿನ ಬಳಿ ಕುರಾನ್‌ ಪ್ರತಿಯನ್ನು ಇಟ್ಟು ಅವಮಾನ ಮಾಡಲಾಗಿದೆ ಎಂಬ ವದಂತಿಯೊಂದು ಹಬ್ಬಿತ್ತು. ಇದರಿಂದ ಬಾಂಗ್ಲಾದ ಹಲವು ಭಾಗಗಳಲ್ಲಿ ದುರ್ಗಾಪೂಜೆಯ ಪೆಂಡಾಲ್‌ಗಳು ಮತ್ತು ಹಿಂದುಗಳ ಮೇಲೆ ಭೀಕರ ದಾಳಿಗಳು ನಡೆದಿದ್ದವು. ಇದರಲ್ಲಿ ಇಸ್ಕಾನ್‌ ಅರ್ಚಕ ಸೇರಿ ಇಬ್ಬರು ಹಿಂದುಗಳು ಬಲಿಯಾಗಿದ್ದರು.

Follow Us:
Download App:
  • android
  • ios